* ಚುನಾವಣಾ ರಣತಂತ್ರಕ್ಕೆ ಸಿದ್ಧತೆ* ಚುನಾವಣಾ ತಂತ್ರಜ್ಞ ಸುನೀಲ್ ಕನ್ನಗೋಲು ನೀಡಿದ್ದ ಸಮೀಕ್ಷೆ ಬಗ್ಗೆ ಸಿದ್ದು, ಡಿಕೆಶಿ ಜತೆ ಸಮಾಲೋಚನೆ* ಇಂದು ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ
ಬೆಂಗಳೂರು(ಜೂ.29): ಮುಂಬರುವ ಸಾರ್ವತ್ರಿಕ ಚುನಾವಣೆ ಕುರಿತು ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು ಸಲ್ಲಿಸಿದ ಪ್ರಾಥಮಿಕ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಕೂಲಂಕಷ ಚರ್ಚೆ ನಡೆಸಿದರು.
2023ರಲ್ಲಿ ಎದುರಾಗುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸ್ಥಿತಿ ಏನಾಗಬಹುದು ಎಂಬ ಬಗ್ಗೆ ಕನ್ನಗೋಲು ಅವರು ಸಮೀಕ್ಷಾ ವರದಿ ಸಲ್ಲಿಕೆ ಮಾಡಿದ್ದು, ಈ ಬಗ್ಗೆ ರಾಹುಲ್ ಗಾಂಧಿ ರಾಜ್ಯ ನಾಯಕರ ಅಭಿಪ್ರಾಯ ಪಡೆದರು. ಜತೆಗೆ, ಪ್ರತಿ ಕ್ಷೇತ್ರದಲ್ಲೂ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಮಾಹಿತಿ ಸಂಗ್ರಹಿಸಿದರು ಎಂದು ಮೂಲಗಳು ಹೇಳಿವೆ.
ಇ.ಡಿ. ಮೂಲಕ ನನಗೆ ಕೊಡಬಾರದ ಕಿರುಕುಳ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ
ದೆಹಲಿಯ ತುಘಲಕ್ ರಸ್ತೆಯಲ್ಲಿರುವ ರಾಹುಲ್ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಕನ್ನಗೋಲು ಕೂಡ ಪಾಲ್ಗೊಂಡು ಚರ್ಚೆ ನಡೆಸಿದರು.
ಎಐಸಿಸಿ ಚುನಾವಣಾ ತಂತ್ರಗರಿಕೆ ತಂಡದ ಪ್ರಮುಖ ಸುನೀಲ್ ಕನ್ನಗೋಲು ಅವರು ಕರ್ನಾಟಕದ ಸಂಬಂಧ ನೀಡಿರುವ ಸಮೀಕ್ಷೆಯ ವರದಿಯನ್ನು ಹರಡಿಕೊಂಡು ಕೂತಿರುವ ನಾಯಕರು ಮುಂಬರುವ ಚುನಾವಣೆಯಲ್ಲಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಷ್ಟುಸ್ಥಾನಗಳನ್ನು ಖಚಿತವಾಗಿ ಗೆಲ್ಲಲಿದೆ? ಎಷ್ಟುಸ್ಥಾನಗಳಲ್ಲಿ 2ನೇ ಸ್ಥಾನ ಮತ್ತು 3ನೇ ಸ್ಥಾನದ ಸ್ಥಿತಿ ಇದೆ? ಅವುಗಳಲ್ಲಿ ಜಯ ಗಳಿಸಲು ಮಾಡಬೇಕಿರುವ ತಂತ್ರಗಾರಿಕೆಗಳೇನು ಎಂಬ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದರು.
ರಾಹುಲ್ ಗಾಂಧಿ ಅವರು 3 ಗಂಟೆಗೂ ಹೆಚ್ಚು ಕಾಲ, ಹಾಲಿ ಶಾಸಕರಲ್ಲಿ ಎಷ್ಟುಮಂದಿ ಮುಂದಿನ ಚುನಾವಣೆಯಲ್ಲೂ ಗೆಲ್ಲಲಿದ್ದಾರೆ. ಯಾರಿಗೆ ಟಿಕೆಟ್ ಕೊಡಬಹುದು ಎಂಬುದು ಸೇರಿ ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಪಡೆಯಲು ಎಲ್ಲ ಮಜುಲುಗಳಿಂದಲೂ ಆಗಬೇಕಿರುವ ಕಾರ್ಯತಂತ್ರಗಳ ಬಗ್ಗೆ ಗಂಟೆಗಳ ಚರ್ಚೆ ಮಾಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೊಪ್ಪಳದಲ್ಲಿ ಸಿದ್ದು-ಡಿಕೆಶಿ: ಮದ್ವೆ ಕಾರ್ಯಕ್ರಮದ ಮಧ್ಯೆ ಟಿಕೆಟ್ ಫೈಟ್
ಇಂದು ಪ್ರತ್ಯೇಕ ಮಾತುಕತೆ
ರಾಹುಲ್ ಗಾಂಧಿ ಅವರು ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ರಾಜ್ಯದ ಚುನಾವಣೆ ಮೇಲೆ ಹೆಚ್ಚಿನ ಸಮಯ ಹಾಗೂ ಆಸಕ್ತಿ ವಹಿಸಿದ್ದಾರೆ. ಇದಕ್ಕಾಗಿ ಬುಧವಾರ ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ 12ರಿಂದ 12.45ರವರೆಗೆ ಸಿದ್ದರಾಮಯ್ಯ ಅವರೊಂದಿಗೆ, ಮಧ್ಯಾಹ್ನ 1ರಿಂದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆಗೆ ಸಮಯ ನಿಗದಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ನಮ್ಮ ಪಕ್ಷದ ಸಂಘಟನೆ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಯಿತು. ಜತೆಗೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಷಯದ ಬಗ್ಗೆಯೂ ಚರ್ಚೆ ನಡೆಯಿತು. ಪಕ್ಷಕ್ಕೆ ಒಳಿತಾಗುವ ಎಲ್ಲ ವಿಚಾರಗಳನ್ನೂ ಚರ್ಚೆ ಮಾಡಿದ್ದೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
