ಕೊಪ್ಪಳದಲ್ಲಿ ಸಿದ್ದು-ಡಿಕೆಶಿ: ಮದ್ವೆ ಕಾರ್ಯಕ್ರಮದ ಮಧ್ಯೆ ಟಿಕೆಟ್ ಫೈಟ್
* ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ನಡುವಿನ ಮುನಿಸು ಬಹಿರಂಗ
* ಮದುವೆ ಕಾರ್ಯಕ್ರಮದ ಮಧ್ಯೆಯೂ ಟಿಕೆಟ್ ಹೈಡ್ರಾಮಾ
* ಬೆಂಗಳೂರಿಗೆ ಹೋಗುವಾಗಲೂ ಡಿಕೆಶಿ ಒನ್ ಟು ಒನ್ ಮೀಟಿಂಗ್
ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಪ್ಪಳ
ಕೊಪ್ಪಳ, (ಜೂನ್.27): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಒಂದು ಗ್ಯಾಪ್ ಇದೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ.ಇಂದು ಆ ಗ್ಯಾಪ್ ಮತ್ತೇ ಕಾಣಿಸಿಕೊಂಡಿತು. ಇಬ್ಬರೂ ನಾಯಕರು ಒಂದೇ ಕಾರ್ಯಕ್ರಮಕ್ಕೆ ಬಂದಿದ್ದರೂ ಸಹ ಪ್ರತ್ಯೇಕವಾಗಿಯೇ ಆಗಮಿಸಿದರು. ಈ ವೇಳೆ ಸಾಕಷ್ಟು ರಾಜಕೀಯ ಹೈಡ್ರಾಮಾಗಳು ಸಹ ನಡೆದವು.
ಕೊಪ್ಪಳ ಜಿಲ್ಲೆ ಅಂದರೆ ಸಿದ್ದರಾಮಯ್ಯ ಅವರಿಗೆ ಎಲ್ಲಿಲ್ಲದ ಪಂಚಪ್ರಾಣ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ನಿಂತು ಸೋತಿದ್ದರೂ ಸಹ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಜಿಲ್ಲೆಯ ಮೇಲೆ ಯಾವತ್ತೂ ಪ್ರೀತಿ ಕಡಿಮೆ ಆಗಿಲ್ಲ. ಹೀಗಾಗಿ ಒಂದಿಲ್ಲ ಒಂದು ಕಾರಣಕ್ಕಾಗಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಬಂದೇ ಬರುತ್ತಿರುತ್ತಾರೆ.ಅದೇ ರೀತಿಯಾಗಿ ಇಂದು(ಸೋಮವಾರ) ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೊಪ್ಪಳ ತಾಲೂಕಿನ ಬಸಾಪೂರ ಗ್ರಾಮದಲ್ಲಿರುವ ಖಾಸಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಗಂಗಾವತಿ: ಜು. 3ರಂದು ಕಾಂಗ್ರೆಸ್ ಸೇರ್ಪಡೆ: ಶ್ರೀನಾಥ
ಬಂದಿದ್ದು ಒಂದೇ ಕಾರ್ಯಕ್ಕೆ, ಫ್ಲೈಟ್ ಮಾತ್ರ ಎರಡು
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಸೇರಿ ಒಂದೇ ಕಾರ್ಯಕ್ರಮಕ್ಕೆ ಬಂದಿದ್ದರು.ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ್ ಅವರ ಪುತ್ರಿಯ ವಿವಾಹ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿತ್ತು. ಈ ಹಿನ್ನಲೆಯಲ್ಲಿ ವಿವಾಹದಲ್ಲಿ ಪಾಲ್ಗೊಳ್ಳಲು ಇಬ್ಬರೂ ನಾಯಕರು ಆಗಮಿಸಿದ್ದರು. ಇಬ್ಬರೂ ನಾಯಕರು ಒಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಸಹ ಬಂದದ್ದು ಮಾತ್ರ ಪ್ರತ್ಯೇಕ ವಿಶೇಷ ವಿಮಾನದಲ್ಲಿ.
ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ನಡುವಿನ ಮುನಿಸು ಬಹಿರಂಗ
ಇನ್ನು ಮಾಜಿ ಸಿ ಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಸಹ ಪ್ರತ್ಯೇಕವಾಗಿ ವಿಮಾನಗಳಲ್ಲಿ ಆಗಮಿಸುವ ಮೂಲಕ ನಮ್ಮಿಬ್ಬರ ಮದ್ಯೆ ಒಂದು ಗ್ಯಾಪ್ ಇದೆ ಎನ್ನುವುದನ್ನು ಸ್ವತಃ ಅವರೇ ತೋರಿಸಿಕೊಟ್ಟರು.ಇನ್ನು ಬಸಾಪೂರ ವಿಮಾನ ನಿಲ್ದಾಣಕ್ಕೆ ಮೊದಲು ಸಿದ್ದರಾಮಯ್ಯ ಆಗಮಿಸಿದ್ದರು. ಬಳಿಕ ಅವರು ವಿಮಾನ ನಿಲ್ದಾಣದಲ್ಲಿ ಹಾಯಾಗಿ ಕುಳಿತುಕೊಂಡಿದ್ದರು. ಕೆಲಹೊತ್ತಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸಿಂಧನೂರಿಗೆ ಹೊರಟು ಹೋದರು. ಈ ವೇಳೆ ಸೌಜನ್ಯಕ್ಕಾದರೂ ಇಬ್ಬರೂ ನಾಯಕರು ಮುಖಾಮುಖಿಯಾಗಿ ಭೇಟಿಯಾಗಿ ಮಾತನಾಡಿಸುವ ಕೆಲಸ ಮಾಡಲಿಲ್ಲ.ಈ ಮೂಲಕ ಅವರಿಬ್ಬರ ನಡುವಿನ ಮುನಿಸು ಮತ್ತೆ ಜಗಜ್ಜಾಹಿರವಾಯಿತು.
ಜೊತೆಗೆ ಕುಳಿತು ಊಟ ಮಾಡಿದ ಸಿದ್ದರಾಮಯ್ಯ- ಡಿಕೆಶಿ
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಬ್ಬರೂ ಸಹ ಸಿಂಧನೂರಿಗೆ ಮದುವೆಗೆ ಹೋಗಿ ಮರಳಿ ಬಸಾಪೂರದ ಖಾಸಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮೊದಲು ಸಿದ್ದರಾಮಯ್ಯ ಆಗಮಿಸಿದರು, ಬಳಿಕ ಡಿ ಕೆ ಶಿವಕುಮಾರ್ ಆಗಮಿಸಿದರು.ಈ ವೇಳೆಯಲ್ಲಿ ಇಬ್ಬರೂ ನಾಯಕರು ಮದುವೆಯಲ್ಲಿ ಊಟ ಮಾಡದೇ ಹಾಗೆಯೇ ಬಂದಿದ್ದರು. ಈ ಹಿನ್ನಲೆಯಲ್ಲಿ ಇಬ್ಬರೂ ನಾಯಕರು ಬಸಾಪೂರದ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಊಟ ಮಾಡುವ ಮೂಲಕ ನಾವಿಬ್ಬರೂ ಚೆನ್ನಾಗಿ ಇದ್ದೇವೆ ಎಂದು ತೋರಿಸಿಕೊಡುವ ಪ್ರಯತ್ನ ಮಾಡಿದರು. ಆದರೆ ಬೆಳಿಗ್ಗೆಯಿಂದ ನಡೆದ ಪ್ರಸಂಸಗಳು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ನಡುವೆ ಸಂಬಂಧ ಸರಿಯಾಗಿಲ್ಲ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದ್ದವು.
ಗಂಗಾವತಿ ಟಿಕೆಟ್ ಹೈಡ್ರಾಮಾ
ಇನ್ನು ಇತ್ತೀಚಿನ ದಿನಗಳಲ್ಲಿ ಗಂಗಾವತಿ ಸಾಕಷ್ಟು ಮುನ್ನೆಲೆಗೆ ಬರುತ್ತಿರುವ ಕ್ಷೇತ್ರವಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲಿ ವಿಶೇಷವಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಪೈಪೋಟಿ ಜೋರಾಗಿ ನಡೆದಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮುಂದೆಯೂ ಹೈಡ್ರಾಮಾ ನಡೆಯಿತು. ಕಳೆದ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಇಕ್ಬಾಲ್ ಅನ್ಸಾರಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಆದರೆ 2018 ರ ಚುನಾವಣೆಯಲ್ಲಿ ಇಕ್ಬಾಲ್ ಅನ್ಸಾರಿ ಸೋಲನ್ನು ಅನುಭವಿಸಿದ್ದರು. ಹೀಗಾಗಿ ಈ ಮುಂಚೆ ಕಾಂಗ್ರೆಸ್ ನಲ್ಲಿದ್ದು 2018 ರ ಚುನಾವಣೆಯಲ್ಲಿ ಜೆ ಡಿ ಎಸ್ ಪಕ್ಷ ತೊರೆದಿದ್ದ ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಜುಲೈ ಮೊದಲನೇ ವಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ನಾನೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದರಿಂದ ಕಂಗಾಲಾಗಿರುವ ಅನ್ಸಾರಿ ಬೆಂಬಲಿಗರು,ಅನ್ಸಾರಿಗೆ ಟಿಕೆಟ್ ಫೈನಲ್ ಮಾಡುವಂತೆ ಒತ್ತಾಯಿಸಿದರು. ಈ ವೇಳೆಯಲ್ಲಿ ಡಿ ಕೆ ಶಿವಕುಮಾರ್ ಅವರು ಅನ್ಸಾರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಚರ್ಚೆ ಮಾಡಿದರು. ಬಳಿಕ ಮಾತನಾಡಿದ ಇಕ್ಬಾಲ್ ಅನ್ಸಾರಿ ನನಗೇ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದರು.
ಡಿಕೆಶಿ ಒನ್ ಟು ಒನ್ ಮೀಟಿಂಗ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಂಧನೂರಿಗೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬಸಾಪೂರದ ಖಾಸಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಸಿದ್ದರಾಮಯ್ಯ ಜೊತೆಗೆ ಊಟ ಮಾಡಿದರು. ಮೊದಲು ಸಿದ್ದರಾಮಯ್ಯ ಹೊರಟು ಹೋದರು.ಬಳಿಕ ಡಿ ಕೆ ಶಿವಕುಮಾರ್ ಹೊರಡಲು ಸಿದ್ದವಾದರು. ಈ ವೇಳೆ ವಿಮಾನ ಏರುವ ಮೊದಲು ಡಿ ಕೆ ಶಿವಕುಮಾರ್ ಅವರು ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು. ಬಳಿಕ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಸೈಡ್ ಗೆ ಕರೆದುಕೊಂಡು ಹೋಗಿ ಒನ್ ಟು ಒನ್ ಮೀಟಿಂಗ್ ಮಾಡಿದರು.ಬಳಿಕ ವಿಮಾನ ಏರಿದರು.
ಒಟ್ಟಿನಲ್ಲಿ ಇಂದು ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಪ್ರವಾಸ ವೇಳೆಯಲ್ಲಿ ಇಬ್ಬರು ನಾಯಕರ ನಡುವಿನ ಮುನಿಸು ಬಹಿರಂಗವಾಯಿತು. ಜೊತೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಏರ್ಪಟ್ಟಿರುವ ಫೈಟ್ ಸಹ ಎಲ್ಲರ ಗಮನಕ್ಕೆ ಬಂದಿದ್ದು ಮಾತ್ರ ಸತ್ಯ.