ಇ.ಡಿ. ಮೂಲಕ ನನಗೆ ಕೊಡಬಾರದ ಕಿರುಕುಳ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ
ಜಾರಿ ನಿರ್ದೇಶನಾಲಯ (ಇ.ಡಿ)ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಕಾಂಗ್ರೆಸ್ ಪ್ರಬಲ ನಾಯಕರ ಮೇಲೆ ತನಿಖಾಸ್ತ್ರ ಬಳಸಿ ಹತ್ತಿಕ್ಕುವ ಯತ್ನ ಮಾಡುತ್ತಿದೆ. ನನಗಂತೂ ಇ.ಡಿ.ಬಳಸಿಕೊಂಡು ವಿಪರೀತ ಕಿರುಕುಳ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಕೊಪ್ಪಳ (ಜೂ.28): ಜಾರಿ ನಿರ್ದೇಶನಾಲಯ (ಇ.ಡಿ)ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಕಾಂಗ್ರೆಸ್ ಪ್ರಬಲ ನಾಯಕರ ಮೇಲೆ ತನಿಖಾಸ್ತ್ರ ಬಳಸಿ ಹತ್ತಿಕ್ಕುವ ಯತ್ನ ಮಾಡುತ್ತಿದೆ. ನನಗಂತೂ ಇ.ಡಿ.ಬಳಸಿಕೊಂಡು ವಿಪರೀತ ಕಿರುಕುಳ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಸೋಮವಾರ ತಾಲೂಕಿನ ಬಸಾಪುರ ಬಳಿಯ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸೇರಿ ಪಿ. ಚಿದಂಬರಂ, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಮೇಲೆ ತನಿಖೆ ಮಾಡಿಸುತ್ತಿದ್ದಾರೆ. ನನಗೆ ಕೊಡಬಾರದ ಕಾಟ ನೀಡಿದ್ದಾರೆ. ಆದರೆ, ನಾವು ಇದ್ಯಾವುದಕ್ಕೂ ಜಗ್ಗುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.
ನನಗೆ 60 ದಿನಗಳ ಬೇಲ್ ಸಿಕ್ಕಿತ್ತು. ಆಗಲೇ ಚಾಜ್‌ರ್‍ಶೀಟ್ ಹಾಕಬೇಕಾಗಿತ್ತು. ಆದರೆ, ಹಾಕಲಿಲ್ಲ. ನಂತರ ಸಲ್ಲಿಸಿದ್ದಾರೆ. ಇದೆಲ್ಲವೂ ರಾಜಕೀಯ ದುರುದ್ದೇಶದಿಂದ ಮಾಡುತ್ತಿರುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚುನಾವಣೆ ಸಮೀಪಿಸುತ್ತಿದ್ದಂತೆ ತನಿಖೆ ಚುರುಕು ಮಾಡಿಸುತ್ತಾರೆ. ಪ್ರತಿದಿನ ಒಂದಿಲ್ಲೊಂದು ನೋಟಿಸ್ ನನಗೆ, ಕುಟುಂಬದವರಿಗೆ, ಸ್ನೇಹಿತರಿಗೆ ನೀಡುವ ಮೂಲಕ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ ಎಂದರು. ಇದೊಂದು ಕಮಿಷನ್ ಸರ್ಕಾರ. ಯಾರು ಯಾರಿಗೆ ಕಮಿಷನ್ ಕೊಡ್ತಾರೋ ಗೊತ್ತಿಲ್ಲ. ಇದು 40 ಪರ್ಸೆಂಟೇಜ್ ಸರ್ಕಾರ. ಪಿಎಸ್‌ಐ ನೇಮಕ ಹಗರಣದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ, ಖಾನಾವಳಿಯಲ್ಲಿ ಊಟಕ್ಕಿಷ್ಟು ಎಂಬಂತೆ ಎಲ್ಲ ಹುದ್ದೆಗಳಿಗೂ ಬೋರ್ಡ್ ಹಾಕುವುದು ಬಾಕಿ ಇದೆ ಎಂದು ಲೇವಡಿ ಮಾಡಿದರು.
ದ್ವೇಷದ ಕೇಸಿಂದ ಕಾಂಗ್ರೆಸ್ ಧ್ವನಿ ಅಡಗಿಸಲು ಅಸಾಧ್ಯ: ಡಿಕೆಶಿ
ಮೊದಲು ಬಿಜೆಪಿ ದಲಿತ ಸಿಎಂ ಘೋಷಿಸಲಿ: ದಲಿತ ಮುಖ್ಯಮಂತ್ರಿ ಕೂಗು ಎಬ್ಬಿಸಿರುವ ಬಿಜೆಪಿ ಈ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಅವರು ಮೊದಲು ಬಿಜೆಪಿ ದಲಿತ ಸಿಎಂ ಘೋಷಿಸಲಿ. ನಂತರ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕಾಂಗ್ರೆಸ್ ಎಲ್ಲ ಸಮುದಾಯದವರಿಗೂ ಆದ್ಯತೆ ನೀಡಿದೆ, ಅಧಿಕಾರ ಕೊಟ್ಟಿದೆ. ಆದರೆ, ಬಿಜೆಪಿಯವರ ತತ್ವ, ಮುಖವಾಡ ಕಳಚಿ ಬೀಳಲಿದೆ ಎಂದು ಕಿಡಿಕಾರಿದರು.
ಡಿಕೆಶಿ ಎದುರು ಟಿಕೆಟ್‌ಗಾಗಿ ಅನ್ಸಾರಿ, ನಾಗಪ್ಪ ಬೆಂಬಲಿಗರ ಪೈಪೋಟಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಹಲವು ನಾಯಕರು ಕಸರತ್ತು ನಡೆಸಿದ್ದು, ಪೈಪೋಟಿಗೆ ಇಳಿದಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಎದುರಿನಲ್ಲಿಯೇ ಬಹಿರಂಗವಾಯಿತು. ಸೋಮವಾರ ತಾಲೂಕಿನ ಬಸಾಪುರ ವಿಮಾನ ತಂಗುದಾಣಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಖದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ ಅವರು ಪ್ರತ್ಯೇಕವಾಗಿ ಕೆಲಹೊತ್ತು ಮಾತನಾಡಿದರು.
ಬಚ್ಚೇಗೌಡರಿಗೆ ಗಾಳ ಹಾಕಿದ್ರೆ ಮರಿ ಮೀನು ಶರತ್ ಗಾಳಕ್ಕೆ ಸಿಕ್ರು: ಡಿಕೆಶಿ
ಈ ನಡುವೆ ಗಂಗಾವತಿ ಮಾರ್ಗವಾಗಿ ತೆರಳುವ ವೇಳೆ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಡಿ.ಕೆ.ಶಿವಕುಮಾರ ಅವರ ಕಾರನ್ನು ನಿಲ್ಲಿಸಿ, ಟಿಕೆಟ್ ಘೋಷಿಸುವಂತೆ ಆಗ್ರಹಿಸಿದರು. ಇದಾದ ಮೇಲೆ ಮರಳಿ ಬರುವ ಸಮಯದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಬೆಂಬಲಿಗರು ಸಹ ಡಿಕೆಶಿ ಅವರಿಗೆ ಮನವಿ ಮಾಡಿದರು. ಮಲ್ಲಿಕಾರ್ಜುನ ನಾಗಪ್ಪ ಅವರ ಪರವಾಗಿ ಘೋಷಣೆ ಹಾಕಿದ್ದು, ಅಲ್ಲದೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಇದೆಲ್ಲವನ್ನು ಆಲಿಸಿದ ಡಿಕೆಶಿ ಅವರು ಇದ್ಯಾವುದಕ್ಕೂ ನೇರವಾಗಿ ಉತ್ತರ ನೀಡಲಿಲ್ಲ. ಆದರೆ, ಜು. 3ರಂದು ಬೆಂಗಳೂರಿಗೆ ಆಗಮಿಸುವಂತೆ ಇಕ್ಬಾಲ್ ಅನ್ಸಾರಿ ಅವರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.