ಬಳ್ಳಾರೀಲಿ ಕಾಂಗ್ರೆಸ್‌ ಅಬ್ಬರ: 'ಕೈ' ಪಾಳೆಯಕ್ಕೆ ಹುಮ್ಮಸ್ಸು

ರಾಜ್ಯದಲ್ಲಿ ರಾಹುಲ್‌ ಪಾದಯಾತ್ರೆಯ ಪ್ರಮುಖ ಘಟ್ಟ, 12 ವರ್ಷ ನಂತರ ಗಣಿನಾಡಲ್ಲಿ ರಣಕಹಳೆ, ಭಾರೀ ಜನಸ್ತೋಮದೆದುರು ರಾಹುಲ್‌, ಸಿದ್ದು, ಡಿಕೆಶಿ ಶಕ್ತಿ ಪ್ರದರ್ಶನ

Congress Convention Held on October 15th in Ballari grg

ಕೆ.ಎಂ.ಮಂಜುನಾಥ್‌

ಬಳ್ಳಾರಿ(ಅ.16):  ಬರೋಬ್ಬರಿ 12 ವರ್ಷಗಳ ಬಳಿಕ ಕಾಂಗ್ರೆಸ್‌ ಪಕ್ಷವು ಗಣಿನಾಡಲ್ಲಿ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ‘ಭಾರತ್‌ ಜೋಡೋ’ ಪಾದಯಾತ್ರೆಯ ಅಂಗವಾಗಿ ತನ್ನ ವರಿಷ್ಠ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ 2023ರ ಚುನಾವಣೆಗೆ ರಣಕಹಳೆ ಮೊಳಗಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಹಾಗೂ ಹುಮ್ಮಸ್ಸು ಮೂಡಿಸಿದೆ.

ಭಾರತ ಜೋಡೋ ಪಾದಯಾತ್ರೆ ಅಂಗವಾಗಿ ಶನಿವಾರ ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್‌ ಸಮಾವೇಶ, 2010ರ ‘ಬಳ್ಳಾರಿ ಕಡೆಗೆ ಕಾಂಗ್ರೆಸ್‌ ನಡಿಗೆ’ ಸಮಾವೇಶವನ್ನು ನೆನಪಿಸಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬೃಹತ್‌ ಜನಸ್ತೋಮವು ಕಾಂಗ್ರೆಸ್‌ನ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

BHARAT JODO YATRA: ಬಳ್ಳಾರಿಗೆ 1 ರು.ಕೆಲಸವನ್ನೂ ಬಿಜೆಪಿ ಮಾಡಿಲ್ಲ: ಸಿದ್ದು ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್‌, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಪಕ್ಷದ ಪ್ರಮುಖ ನಾಯಕ ಜೈರಾಮ್‌ ರಮೇಶ್‌, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌, ಪಕ್ಷದ ಹಿರಿಯ ನಾಯಕ ವೇಣುಗೋಪಾಲ್‌ ಸೇರಿದಂತೆ ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡು, ಒಗ್ಗಟ್ಟು ಪ್ರದರ್ಶಿಸಿದರು. ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ರಾಜ್ಯದಲ್ಲಿನ ಭ್ರಷ್ಟಆಡಳಿತ ಕೊನೆಗಾಣಿಸಿ, ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಎಂದು ಜನತೆಗೆ ಮನವಿ ಮಾಡಿದರು. ಸಿದ್ದರಾಮಯ್ಯ ಎಂದಿನ ತಮ್ಮ ಶೈಲಿಯಲ್ಲಿ ಬಿಜೆಪಿ, ಸಚಿವ ಶ್ರೀರಾಮುಲು, ರೆಡ್ಡಿ ಸಹೋದರರ ವಿರುದ್ಧ ಅಬ್ಬರಿಸಿ ಗುಡುಗಿದರೆ, ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿಕೆಶಿ, ಈ ಯಾತ್ರೆ ಹಾಗೂ ಸಮಾವೇಶವನ್ನು ‘ಕ್ವಿಟ್‌ ಇಂಡಿಯಾ ಚಳವಳಿ’ಗೆ ಹೋಲಿಸಿದರು.

2010ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್‌ ಆಡಳಿತದ ಅಬ್ಬರ ಜೋರಾಗಿತ್ತು. ಆಗ ‘ತಾಕತ್ತಿದ್ದರೆ ಬಳ್ಳಾರಿಗೆ ಬಂದು ತೋರಿಸಿ’ ಎಂದು ರೆಡ್ಡಿ ಸಹೋದರರು ಕಾಂಗ್ರೆಸ್‌ಗೆ ಸವಾಲು ಹಾಕಿದ್ದರು. ಅದಕ್ಕೆ ‘ನಾವು ಬಂದೇ ತೋರಿಸುತ್ತೇವೆ’ ಎಂದು ತೊಡೆ ತಟ್ಟಿದ್ದ ಸಿದ್ದರಾಮಯ್ಯ, ಬಳ್ಳಾರಿಗೆ ಪಾದಯಾತ್ರೆ ನಡೆಸಿ, ಇದೇ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಿದ್ದರು. ನಂತರ, ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಕೂಡ ಆದರು. ಅದಕ್ಕೂ ಮೊದಲು, 1999ರಲ್ಲಿ ಲೋಕಸಭೆಗೆ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ, ಇದೇ ಮೈದಾನದಲ್ಲಿ ಸಮಾವೇಶ ನಡೆಸಿ ಗೆದ್ದು ಬಂದಿದ್ದರು.

ಬಳ್ಳಾರಿಯಲ್ಲಿ ಶನಿವಾರ ‘ಭಾರತ್‌ ಜೋಡೋ’ ಯಾತ್ರೆ ಅಂಗವಾಗಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್‌, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮುಂತಾದವರು ಪಾಲ್ಗೊಂಡಿದ್ದರು.
 

Latest Videos
Follow Us:
Download App:
  • android
  • ios