ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇಕೆಂದು ಹೇಳುತ್ತಿರುವ ಗುಲಾಂ ನಬಿ ಮತ್ತವರ ಗೆಳೆಯರು, ರಾಹುಲ್ ನೇತೃತ್ವ ಒಪ್ಪಲು ತಯಾರಿಲ್ಲ. ಒಂದು ವೇಳೆ ರಾಹುಲ್ ರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ಬಂಡಾಯ ಹೂಡಿ, ಇನ್ನೊಂದು ಪಕ್ಷ ರಚಿಸಿ, ಚಿಹ್ನೆಗಾಗಿ ಕೋರ್ಟ್‌ ಮೆಟ್ಟಿಲು ಹತ್ತುವ ತಯಾರಿಯಲ್ಲಿದ್ದಾರೆ. 

ನವದೆಹಲಿ (ಜ. 08): ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿರುವುದು ರೈತರ ವಿಷಯದಲ್ಲೇ. ಹೀಗಾಗಿ ಮೋದಿ ಅವರನ್ನು ವಿರೋಧಿಸುವ ಬಹುತೇಕ ರಾಜಕೀಯ ಮತ್ತು ಇತರ ವಿಚಾರದ ಪರಿವಾರಗಳು ರಸ್ತೆಗೆ ಇಳಿದಿವೆ. ಆದರೆ ವಿಪರ್ಯಾಸ ನೋಡಿ, ಚಳಿಗೆ ರೈತ ನಡುಗುತ್ತಿದ್ದರೆ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷ ಆಚರಿಸಲು ಇಟಲಿಯ ಮಿಲಾನ್‌ಗೆ ಹಾರಿದ್ದಾರೆ.

ಯಾರು ಎಲ್ಲಿ ರಜೆ ಕಳೆಯಬೇಕು ಎನ್ನುವುದು ಅವರವರ ಇಷ್ಟಹೌದು. ಆದರೆ ಬೆಳಗಾದರೆ ಮೋದಿ ಅವರನ್ನು ಟೀಕಿಸುವ ರಾಹುಲ್‌, ರೈತರು ರಸ್ತೆಯಲ್ಲಿ ಕುಳಿತಾಗ ಹೊರಗೆ ಹೋಗಿರುವುದು ರಾಜಕೀಯ ಜಾಣತನವೇನೂ ಅಲ್ಲ. ಮೋದಿ ಅವರ ಅರ್ಧ ಸಾಮರ್ಥ್ಯವೇ ರಾಹುಲ್‌ರಂಥ ಒಲ್ಲದ ಮನಸ್ಸಿನ, ಅಪರಿಪಕ್ವ, ಅಪ್ರಬುದ್ಧ, ಅರೆ ಮನಸ್ಸಿನ ರಾಜಕಾರಣಿ. ಅದಕ್ಕೇ ಹೇಳುವುದು ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ.

ಗುಲಾಂ ನಬಿ ಮತ್ತು 22 ಗೆಳೆಯರು

ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇಕೆಂದು ಹೇಳುತ್ತಿರುವ ಗುಲಾಂ ನಬಿ ಮತ್ತವರ ಗೆಳೆಯರು ರಾಹುಲ್ ನೇತೃತ್ವ ಒಪ್ಪಲು ತಯಾರಿಲ್ಲ. ಒಂದು ವೇಳೆ ರಾಹುಲ್ ಅವರನ್ನು ಚುನಾವಣೆ ಇಲ್ಲದೇ ಅಧ್ಯಕ್ಷರನ್ನಾಗಿ ಮಾಡಿದರೆ ಗುಲಾಂ ನಬಿ, ಕಪಿಲ್ ಸಿಬಲ್ ಮನೀಶ್‌ ತಿವಾರಿ ಇವರೆಲ್ಲ ಬಂಡಾಯ ಹೂಡಿ, ಇನ್ನೊಂದು ಪಕ್ಷ ರಚಿಸಿ, ಚಿಹ್ನೆಗಾಗಿ ಕೋರ್ಟ್‌ ಮೆಟ್ಟಿಲು ಹತ್ತುವ ತಯಾರಿಯಲ್ಲಿದ್ದಾರೆ. ಇವರಿಗೆ ಚಿದಂಬರಂ ಬೆಂಬಲವೂ ಇದೆಯಂತೆ. ಇದೆಲ್ಲ ಗೊತ್ತಿದ್ದೇ ಎ.ಕೆ.ಆ್ಯಂಟನಿ ಮಧ್ಯಸ್ಥಿಕೆ ವಹಿಸಿ ಕಾರ್ಯಕಾರಿ ಸಮಿತಿಯಲ್ಲಿ ಜಿ-23 ನಾಯಕರ ಬೇಡಿಕೆಯಂತೆ ಚುನಾವಣೆ ನಡೆಸಲು ಒಪ್ಪಿಗೆ ಕೊಡಿಸಿದ್ದಾರೆ.

ವಿಪಕ್ಷಗಳು ರೈತರ ದಿಲ್ಲಿ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತವೆಯೇ?

ಆದರೆ ಈಗ ರಾಹುಲ್ ಏನಾದರೂ ಅಧ್ಯಕ್ಷಗಿರಿಗೆ ಸ್ಪರ್ಧಿಸಿದರೆ ಜಿ-23ಯಿಂದ ಪರ್ಯಾಯ ಅಭ್ಯರ್ಥಿ ಹಾಕಿ ಮುಜುಗರ ಉಂಟುಮಾಡಿ ಪಕ್ಷ ಒಡೆಯುವ ಸಂಕೇತಗಳು ಸಿಗುತ್ತಿವೆ. ಅಂದರೆ ಯಾವುದೇ ಪರಿಸ್ಥಿತಿಯಲ್ಲಿ ರಾಹುಲ… ಗಾಂಧಿ ನೇತೃತ್ವ ಒಪ್ಪಿಕೊಳ್ಳಲು ಗುಲಾಂ ನಬಿ ಮತ್ತು ಮಿತ್ರರು ತಯಾರಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬಳಿ ಉಳಿಯುವ ವಿಕಲ್ಪಗಳು ಎರಡು. 1.ಸೋನಿಯಾರನ್ನು ಔಪಚಾರಿಕ ಚುನಾವಣೆ ಮೂಲಕ ಅವಿರೋಧವಾಗಿ ಆಯ್ಕೆ ಮಾಡುವುದು. 2.ಗಾಂಧಿ ಪರಿವಾರ ಹೊರತುಪಡಿಸಿ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡುವುದು. ಆದರೆ ಆಗ ನರಸಿಂಹರಾವ್‌ ಕಾಲದಲ್ಲಿ ಆದಂತೆ ಪಕ್ಷ ಅನೇಕ ಹೋಳಾಗಿ ಬಿಡಬಹುದು. ಆಗ ದಿಲ್ಲಿಯಲ್ಲಿ ಅಧಿಕಾರವಾದರೂ ಇತ್ತು, ಈಗ ಅದೂ ಇಲ್ಲ.

ಬೇಸರದಲ್ಲಿರುವ ರಾಹುಲ್‌ ಗಾಂಧಿ

ಒಂದು ಕಡೆ ಚುನಾವಣಾ ಸೋಲುಗಳು, ಇನ್ನೊಂದು ಕಡೆ ತನ್ನನ್ನು ಮಾತ್ರ ಇಷ್ಟಪಡದ ಬಹುಕಾಲದ ಗಾಂಧಿ ನಿಷ್ಠರ ಬಂಡಾಯದ ಭೀತಿ ನಡುವೆ ರಾಹುಲ್ ಗಾಂಧಿ ಬೇಸರದಲ್ಲಿ ಇದ್ದಾರೆ. ಕಳೆದ ವಾರದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ‘ನೀವು ಮಾತಾಡಿ’ ಎಂದು ಹೇಳಿದಾಗ ರಾಹುಲ್‌, ‘ನಾನು ಏನು ಹೇಳಲಿ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೇ’ ಎಂದು ಹೇಳಿ ಮೌನವಾಗಿ ಕುಳಿತರಂತೆ. ಹೀಗಾಗಿ ಸಭೆ ಮುಗಿದ ಕೂಡಲೇ ರಾಹುಲ್ ಮಿಲಾನ್‌ಗೆ ಹಾರಿದ್ದಾರೆ. ರಾಹುಲ್‌ರ ಮೂಲ ಸಮಸ್ಯೆ ಬಂಡಾಯ ಅಲ್ಲ. ಇಂದಿರಾ, ರಾಜೀವ್‌ ಅವರನ್ನು ಆಗಿನ ಯುವ ಮತದಾರ ಇಷ್ಟಪಟ್ಟಂತೆ ರಾಹುಲ್‌ ಅವರನ್ನು ಈಗಿನ ಹೊಸ ಮತದಾರ ಇಷ್ಟಪಡುತ್ತಿಲ್ಲ. ರಾಜನನ್ನು ಜನರೇ ಇಷ್ಟಪಡುವುದಿಲ್ಲವಾದರೆ ದರ್ಬಾರಿಗಳು ಬಂಡಾಯ ಮಾಡುವುದು ಸಹಜ ನೋಡಿ.

ರಾಹುಲ್‌ ಮಾಡ್ತಿರುವ ತಪ್ಪೇನು?

1947ರಲ್ಲಿ ಸ್ವಾತಂತ್ರ್ಯ ಸಿಗುವ ಮೊದಲು ಮಹಾತ್ಮಾ ಗಾಂಧಿ ಕಾರಣದಿಂದ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ಎದುರಿಸಿತ್ತು. ಆದರೂ ಆಂದೋಲನಗಳ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್‌ಗೆ ಈಗ ಸುದೀರ್ಘ ರಾಜಸತ್ತೆಯ ಕಾರಣದಿಂದ ಆಂದೋಲನ, ಚಳವಳಿ ಮೂಲಕ ಸಂಘಟನೆ ರೂಪಿಸುವ ಮೊದಲಿನ ಶಕ್ತಿ ಉಳಿದಿಲ್ಲ. 80ರಲ್ಲಿ ಜನತಾ ಪಾರ್ಟಿಯ ವಿಘಟನೆಯಿಂದ, 84ರಲ್ಲಿ ಇಂದಿರಾ ಹತ್ಯೆ, 91ರಲ್ಲಿ ರಾಜೀವ್‌ ಹತ್ಯೆ ಕಾರಣದಿಂದ ಮತ್ತು 2004ರಲ್ಲಿ ಬಿಜೆಪಿಯ ವೈಫಲ್ಯದಿಂದ ಕಾಂಗ್ರೆಸ್‌ಗೆ ಅಧಿಕಾರ ಮರಳಿ ಸಿಕ್ಕಿತೇ ಹೊರತು, ಚಳವಳಿ ರೂಪಿಸಿ ರಸ್ತೆಗೆ ಇಳಿದು ಅಲ್ಲ.

ಮತ್ತೆ ರಾಹುಲ್ ಜಪ, ಹಳೇ ವಿಚಾರಗಳ ಪೋಸ್ಟ್ ಮಾರ್ಟಂ..!

1979ರಲ್ಲಿ ಇಂದಿರಾ ಆನೆಯ ಮೇಲೆ ಕುಳಿತು ಹೋಗಿ ಸಂಚಲನ ಮೂಡಿಸಿದಂತೆ ಮಾಡಲು ರಾಹುಲ್ ಒಮ್ಮೆ ಭಟ್ಟಾಪರಸೋಲಲ್ ಇನ್ನೊಮ್ಮೆ ಹಾಥ್ರಸ್‌, ಮಗದೊಮ್ಮೆ ಮಂದಾಸೋರ್‌ಗೆ ಹೋಗುತ್ತಾರೆ ಹೌದು. ಆದರೆ ಒಂದು ಮೀಡಿಯಾ ಇವೆಂಟ್‌ ನಂತರ ಅದರ ಬಗ್ಗೆ ಸೊಲ್ಲೇ ಇರುವುದಿಲ್ಲ. ಚಳವಳಿ ಕಟ್ಟಬೇಕು ಅಂದರೆ ಒಂದು ವೈಚಾರಿಕ ಹಿನ್ನೆಲೆ ಗೊತ್ತಿರುವ ಜನರ ನಾಡಿಮಿಡಿತ ಬಲ್ಲ ಪಕ್ಕಾ ಪೊಲಿಟಿಕಲ್ ನೇತೃತ್ವ ಬೇಕು. ಆದರೆ ಕಾಂಗ್ರೆಸ್‌ ಬಳಿ ಇವು ಯಾವುವೂ ಸದ್ಯಕ್ಕೆ ಕಾಣುತ್ತಿಲ್ಲ.

ಕಾಂಗ್ರೆಸ್‌ ಪ್ಲಾನ್‌ ಬಿ ಏನು?

ಒಂದು ವೇಳೆ ಭಿನ್ನರು ರಾಹುಲ್ ಗಾಂಧಿ ನೆಪ ಮುಂದೆ ಮಾಡಿ ಬಂಡಾಯ ಏಳುವುದೇ ಆದಲ್ಲಿ ಪುನರಪಿ ಔಪಚಾರಿಕ ಚುನಾವಣೆ ನಡೆಸಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರಾಗಿ ಮುಂದುವರೆಸಲು ಕಸರತ್ತು ನಡೆಯುತ್ತಿದೆ. ಸೋನಿಯಾರಿಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರಿಗೆ ಸಹಾಯ ಮಾಡಲು ನಾಲ್ಕು ಉಪಾಧ್ಯಕ್ಷರನ್ನು ನೇಮಕ ಮಾಡುವುದು. ಒಬ್ಬೊಬ್ಬ ಉಪಾಧ್ಯಕ್ಷರು ಮೂರು ಪ್ರಧಾನ ಕಾರ್ಯದರ್ಶಿಗಳನ್ನು ಸಂಭಾಳಿಸುವುದು. ಪಕ್ಷ ನಡೆಸಲು ಇವೆಲ್ಲ ಸರಿ. ಆದರೆ ಕಾಂಗ್ರೆಸ್ಸನ್ನು ಬಿಟ್ಟು ಹೋಗಿರುವ ಮತ್ತು ಇನ್ನೂ ಹೋಗುತ್ತಿರುವ ಮತದಾರರನ್ನು ಮರಳಿ ಸೆಳೆಯಲು ಪ್ಲಾನ್‌ ಯಾವುದೂ ಕಾಂಗ್ರೆಸ್‌ ಬಳಿ ಇದ್ದಂತೆ ಕಾಣುವುದಿಲ್ಲ. ಗಾಂಧಿಗಳ ಸುತ್ತ ಸುತ್ತಿದರೆ ಸಾಕು ಅಧಿಕಾರ ಬರುತ್ತದೆ ಎನ್ನುವ ಕಾಲ ಸದ್ಯಕ್ಕಂತೂ ದೇಶದಲ್ಲಿ ಇಲ್ಲವೇ ಇಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ