ಮತ್ತೆ ಕಾಂಗ್ರೆಸ್‍ನಲ್ಲಿ ರಾಹುಲ್ ಗಾಂಧಿಯವರ ಜಪ| ಹೊಸಬರು ಹೊರಗಡೆಯಿಂದ ಬರಲಿ ಪಕ್ಷದ ಸೂತ್ರ ಹಿಡಿಯಲಿ ಅಂಥ ಹಲವು ಬಾರಿ ರಾಹುಲ್ ಗಾಂಧಿ ಖುದ್ದೂ ಹೇಳಿದ್ದರೂ ಅದ್ಯಾಕೋ ಮತ್ತೆ ಆ ಎಐಸಿಸಿ ಪಟ್ಟ ರಾಹುಲ್ ಕಡೆ ವಾಲುತ್ತಿದೆ.
ಡೆಲ್ಲಿ ಮಂಜು, ಇಂಡಿಯಾ ಗೇಟ್
ನವದೆಹಲಿ(ಡಿ.21) : ಆ 23 ಮಂದಿಯ ಟೀಕೆಗೆ ಸಭೆ..! ಮತ್ತೆ ಅದೇ ರಾಹುಲ್ ಗಾಂಧಿಯ ಜಪ..! ಹಳೇ ವಿಚಾರಗಳ ಪೋಸ್ಟ್ ಮಾರ್ಟಂ..! ಜೊತೆಗೆ ಓಕೆ ಅಂದ್ರು ರಾಹುಲ್ ಗಾಂಧಿ ಅನ್ನೋ ಮಾತು..?
ಮತ್ತೆ ಕಾಂಗ್ರೆಸ್‍ನಲ್ಲಿ ರಾಹುಲ್ ಗಾಂಧಿಯವರ ಜಪ ಶುರುವಾಗಿದೆ. ಹೊಸಬರು ಹೊರಗಡೆಯಿಂದ ಬರಲಿ ಪಕ್ಷದ ಸೂತ್ರ ಹಿಡಿಯಲಿ ಅಂಥ ಹಲವು ಬಾರಿ ರಾಹುಲ್ ಗಾಂಧಿ ಖುದ್ದೂ ಹೇಳಿದ್ದರೂ ಅದ್ಯಾಕೋ ಮತ್ತೆ ಆ ಎಐಸಿಸಿ ಪಟ್ಟ ರಾಹುಲ್ ಕಡೆ ವಾಲುತ್ತಿದೆ. ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಚುನಾವಣೆ ನಡೆಯಲಿದೆ. ನಾನು ಸೇರಿದಂತೆ ಹಲವರ ಬೇಡಿಕೆ ಎಂದರೆ ರಾಹುಲ್ ಜೀ ಪಕ್ಷದ ನಾಯಕತ್ವ ವಹಿಸಲಿ ಅನ್ನೋದು. ಆದರೆ ಅಂತಿಮ ತೀರ್ಮಾನ ಅವರದ್ದೇ ಅಂಥ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೀವಾಲ ಶನಿವಾರ ಮತ್ತೆ ಅದೇ ಅಭಿಪ್ರಾಯ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಬಲವರ್ಧನೆಯಾಗಬೇಕು, ಹಲವು ಹಂತಗಳಲ್ಲಿ ಬದಲಾವಣೆಗಳು ಆಗಬೇಕು ಅಂಥ ಬರೆದಿದ್ದ ಪತ್ರದ ಸಲುವಾಗಿ ಹೆಚ್ಚು ಕಡಿಮೆ ನಾಲ್ಕು ತಿಂಗಳ ನಂತರ ಜನಪತ್ 10 ರಲ್ಲಿ ಇವತ್ತೊಂದು ಸಭೆ ನಡೆಯಿತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆಚ್ಚುಕಮ್ಮಿ ಚರ್ಚೆಯಾಗಿದ್ದು ಮುಂದಿನ ಎಐಸಿಸಿ ಅಧ್ಯಕ್ಷರು ಯಾರಾಗಬೇಕು ಅಂಥ. ಉಳಿದಂತೆ ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸ್ವಪಕ್ಷೀಯ ಟೀಕಾರರು ಎತ್ತಿದ ಪ್ರಶ್ನೆಗಳು ಒಂದು ಹಂತದಲ್ಲಿ ಚರ್ಚೆಗೆ ಬಂದವು ಎನ್ನುತ್ತಿವೆ ಎಐಸಿಸಿ ಉನ್ನತ ಮೂಲಗಳು.
ಸೋನಿಯಾ ಗಾಂಧಿಯವರು ಕರೆದಿದ್ದ ಉನ್ನತಮಟ್ಟದ ಸಭೆಗೆ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್, ರಾಜಸ್ತಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‍ನಾಥ್, ಅಂಬಿಕಾ ಸೋನಿ, ಆನಂದ್ ಶರ್ಮಾ, ಭೂಪೇಂದ್ರ ಸಿಂಗ್ ಹೂಡ, ಪಿ.ಚಿದಂಬರಂ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದರು.
ನಾಲ್ಕು ತಿಂಗಳ ಹಿಂದೆ 23 ಮಂದಿ ರೆಬಲ್ ನಾಯಕರು ಪತ್ರ ಬರೆದು ಪಕ್ಷದ ಸಂಘಟನೆ, ಪಕ್ಷಕ್ಕೆ ಪೂರ್ಣಪ್ರಮಾಣದ ನಾಯಕತ್ವ, ವಿವಿಧ ಹಂತಗಳಲ್ಲಿ ಆಗಬೇಕಿರುವ ಬದಲಾವಣೆಗಳು, ಪಕ್ಷದ ಬಲವರ್ಧನೆಗಾಗಿ ಮಾಡಬೇಕಿರುವ ಕೆಲಸಗಳ ಬಗ್ಗೆ ಹೈಕಮಾಂಡ್ ವಿರುದ್ಧ ಧ್ವನಿ ಎತ್ತಿದ್ದರು. ಇನ್ನು ಸಭೆ ಮುಗಿಸಿ ಹೊರ ಬಂದ ನಾಯಕರು ಎಲ್ಲರೂ ಹೇಳಿದ್ದು ಒಂದೇ ಮಾತು ಎಂದರೆ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯ ಬಗ್ಗೆ ಚರ್ಚೆ ನಡೆಯಿತು ಅಂತ.
ಓಕೆ ಅಂದ್ರಾ ರಾಹುಲ್ ಗಾಂಧಿ..?
ಐದು ತಾಸುಗಳ ಮೀಟಿಂಗ್‍ನಲ್ಲಿ ರಾಹುಲ್ ಗಾಂಧಿ ಟೀಂ, ರಾಹುಲ್ ಜೀ ಮತ್ತೆ ಕಾಂಗ್ರೆಸ್ ಸಾರಥ್ಯದ ಬಾವುಟ ಹಿಡಿಯಬೇಕು ಅಂಥ ಬಿಗಿಪಟ್ಟು ಹಿಡಿದರಂತೆ. ಅದಕ್ಕೆ ಒಲ್ಲದ ಮನಸ್ಸಿನಿಂದಲೇ ರಾಹುಲ್ ಗಾಂಧಿ ಓಕೆ ಅಂದಿದ್ದಾರೆ ಎನ್ನುತ್ತಿವೆ ಎಐಸಿಸಿ ಉನ್ನತ ಮೂಲಗಳು. ಆದ್ರೆ ವಿರೋಧಿ ಪಾಳಯ ಮುಖಂಡರು ಮಾತ್ರ ಪಕ್ಷಕ್ಕೆ ಫುಲ್ ಟೈಂ ಅಧ್ಯಕ್ಷರು ಬೇಕು, ಜೊತೆಗೆ 24 ತಾಸು ಸಿಗುವ ಪ್ರಧಾನ ಕಾರ್ಯದರ್ಶಿಗಳು ಸಿಗಬೇಕು ಅನ್ನೋ ವಿಚಾರಕ್ಕೆ ಕಟ್ಟುಬಿದ್ದರಂತೆ. ಹಾಗಾಗಿ ಮತ್ತಷ್ಟು ಚರ್ಚೆಗಳು ಮಾಡೋಣ ಅಂಥ ಸೋನಿಯಾ ಮೇಡಂ ಹೇಳಿದರು ಎನ್ನುತ್ತಿವೆ ಉನ್ನತ ಮೂಲಗಳು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 21, 2020, 7:08 AM IST