24 ದಿನಗಳ ಕಾಲ 500 ಕಿ.ಮೀ ನಡಿಗೆ, ಚಾ.ನಗರದಲ್ಲಿ ಆರಂಭ, ರಾಯಚೂರಲ್ಲಿ ಅಂತ್ಯ, ನಿನ್ನೆ ತೆಲಂಗಾಣ ಪ್ರವೇಶ

ರಾಯಚೂರು(ಅ.24): ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಮುಕ್ತಾಯಗೊಂಡಿದ್ದು, ರಾಯಚೂರಿನ ದೇವಸುಗೂರು ಮುಖಾಂತರ ಕೃಷ್ಣಾ ನದಿ ಸೇತುವೆ ದಾಟಿ ಭಾನುವಾರ ತೆಲಂಗಾಣ ರಾಜ್ಯ ಪ್ರವೇಶಿಸಿದೆ. ಈ ವೇಳೆ, ಕರ್ನಾಟಕದ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿಯವರನ್ನು ಅದ್ದೂರಿಯಾಗಿ ಬೀಳ್ಕೊಟ್ಟರು.

ಸೆ.30ರಂದು ಆಗಮನ:

ಸೆ.30ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಆಗಮಿಸಿದ ಯಾತ್ರೆ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 500 ಕಿ.ಮೀ. ದೂರ ಕ್ರಮಿಸಿತು. 24 ದಿನಗಳ ಯಾತ್ರೆ ವೇಳೆ ರಾಹುಲ್‌ ಅವರು ದೇವಾಲಯ, ಚಚ್‌ರ್‍, ಮಸೀದಿಗಳಿಗೆ ಭೇಟಿ ನೀಡಿದರು. ಕೃಷಿಕರು, ಕಾರ್ಮಿಕರು , ರೈತರು, ದಲಿತರು, ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸುವ ಮೂಲಕ ಜನಸಾಮಾನ್ಯರ ಸಂಕಷ್ಟಅರಿಯುವ ಯತ್ನ ನಡೆಸಿದರು. ಬಳ್ಳಾರಿಯಲ್ಲಿ ಅದ್ದೂರಿ ಸಮಾವೇಶ ನಡೆಸಿ, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಿಯೋಜಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್‌, ಜೈರಾಮ್‌ ರಮೇಶ್‌, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರೀಯ ನಾಯಕರು ರಾಹುಲ್‌ ಯಾತ್ರೆಗೆ ಸಾಥ್‌ ನೀಡಿದರು. ಈ ಮಧ್ಯೆ, ಆಂಧ್ರಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಯಾತ್ರೆ ನಡೆಸಿದ ರಾಹುಲ್‌, ಕಳೆದ ಎರಡು ದಿನಗಳ ಹಿಂದೆ ಮಂತ್ರಾಲಯದ ಮೂಲಕ ರಾಯಚೂರಿಗೆ ಆಗಮಿಸುವ ಮೂಲಕ, ರಾಜ್ಯಕ್ಕೆ ಯಾತ್ರೆ ಮರುಪ್ರವೇಶ ಪಡೆದಿತ್ತು.

ರಾಹುಲ್‌ ಟೀಕಾಕಾರರಿಗೆ ಯಾತ್ರೆ ಉತ್ತರ: ಸಿದ್ದರಾಮಯ್ಯ

ಯರಮರಸ್‌ನಿಂದ ಯಾತ್ರೆ ಆರಂಭ:

ಶನಿವಾರ ರಾತ್ರಿ ರಾಯಚೂರಿನ ಯರಮರಸ್‌ ಆನಂದ ಪ್ರೌಢಶಾಲೆಯಲ್ಲಿ ರಾಹುಲ್‌ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಯರಮರಸ್‌ನಿಂದ ಆರಂಭಗೊಂಡ ಯಾತ್ರೆ, ಚಿಕ್ಕಸುಗೂರು, ಹೆಗ್ಗಸನಹಳ್ಳಿ, ಶಕ್ತಿನಗರ,ದೇವಸುಗೂರು ಮುಖಾಂತರ ಕೃಷ್ಣಾ ಸೇತುವೆ ದಾಟಿ ಬೆಳಗ್ಗೆ 9:30ರ ವೇಳೆಗೆ ತೆಲಂಗಾಣವನ್ನು ಪ್ರವೇಶಿಸಿತು. ಈ ವೇಳೆ, ಪಟಾಕಿ ಸಿಡಿಸಿ ಯಾತ್ರೆಯನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು.

ಭಾನುವಾರ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಈಶ್ವರ ಖಂಡ್ರೆ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಅನೇಕ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆ ಸಾಗುತ್ತಿದ್ದಾಗ ಮಾರ್ಗಮಧ್ಯೆ, ರಾಹುಲ್‌ ಗಾಂಧಿ ಅವರನ್ನು ಅನೇಕರು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಇದೇ ವೇಳೆ, ವೈಟಿಪಿಎಸ್‌ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳು, ಭೂಸಂತ್ರಸ್ತರ ಕುರಿತಾದ ಸಮಸ್ಯೆಗಳ ಬಗ್ಗೆಯೂ ಮನವಿ ಪತ್ರ ಸಲ್ಲಿಸಲಾಯಿತು. ಯುವಕನೊಬ್ಬ ವೈಟಿಪಿಎಸ್‌ಗೆ ಭೂಮಿ ನೀಡಿದ್ದೇವೆ. ನಮಗೆ ಉದ್ಯೋಗದ ಭರವಸೆ ನೀಡಿದ್ದರು. ಆದರೆ, ಈವರೆಗೂ ಭರವಸೆ ಈಡೇರಿಲ್ಲ. ಈ ಬಗ್ಗೆ ದಯವಿಟ್ಟು ಕ್ರಮ ವಹಿಸಿ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಹಾಳೆಯಲ್ಲಿ ಬರೆದ ಮನವಿಯನ್ನು ಸಲ್ಲಿಸಿದ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದರೆ 60 ಸಾವಿರ ಹುದ್ದೆ ಭರ್ತಿ: ರಾಹುಲ್‌ ಗಾಂಧಿ

ಚಿಕ್ಕ ಬಾಲಕನೊಬ್ಬ ರಾಹುಲ್‌ ಗಾಂಧಿಯವರ ಕೈ ಹಿಡಿದು ಅವರಿಗಿಂತ ವೇಗವಾಗಿ ನಡೆಯುವ ಮೂಲಕ ಗಮನ ಸೆಳೆದ. ರಾಹುಲ್‌ಗೆ ಚಾಕೋಲೇಟ್‌ ನೀಡಿದ. ರಾಹುಲ್‌ ಅದನ್ನು ಸೇವಿಸದೆ ಬೆಂಬಲಿಗ ಪಡೆಗೆ ನೀಡಿದರು.

3 ದಿನ ಯಾತ್ರೆಗೆ ವಿರಾಮ:

ದೀಪಾ​ವಳಿ ನಿಮಿ​ತ್ತ ಸೋಮವಾರದಿಂದ ಮೂರು ದಿನ​ಗಳ ಕಾಲ ಯಾತ್ರೆಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ, ಅ.26ರಂದು ದಿಲ್ಲಿಗೆ ತೆರಳಲಿರುವ ರಾಹುಲ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗಲಿದ್ದಾರೆ. ರಜೆ ಬಳಿಕ, ಅ.27ರ ಮುಂಜಾ​ನೆ ತೆಲಂಗಾಣದ ಗುಡೆ​ಬೆ​ಲ್ಲೂ​ರಿ​ನಿಂದ ಯಾತ್ರೆ ಪುನ​ರಾ​ರಂಭ​ಗೊ​ಳ್ಳ​ಲಿ​ದೆ.