ಭಾರತ್‌ ಜೋಡೋ ಯಾತ್ರೆಯ ಲೋಗೋ, ವೆಬ್‌ಸೈಟ್‌ ಬಿಡುಗಡೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ. ಪಾದಯಾತ್ರೆ, ಸೆ.7ರಿಂದ 5 ತಿಂಗಳು 12 ರಾಜ್ಯ 2 ಕೇಂದ್ರಾಡಳಿತ ಪ್ರದೇಶದಲ್ಲಿ ಸಂಚಾರ

ನವದೆಹಲಿ(ಆ.24): ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ನೀಡಲು ಹಮ್ಮಿಕೊಳ್ಳಲಾಗುತ್ತಿರುವ ‘ಭಾರತ್‌ ಜೋಡೋ’ ಪಾದಯಾತ್ರೆಯ ಲೋಗೋ ಟ್ಯಾಗ್‌ಲೈನ್‌, ಲೋಗೋ, ವೆಬ್‌ಸೈಟನ್ನು ಹಾಗೂ ಯಾತ್ರೆಯ ಅನೇಕ ಮಹತ್ವದ ರೂಪರೇಷೆಗಳನ್ನು ಕಾಂಗ್ರೆಸ್‌ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ. ಸೆ.7ರಿಂದ ಆರಂಭವಾಗಲಿರುವ ಈ ಪಾದಯಾತ್ರೆಗೆ ‘ಮಿಲೇ ಕದಂ, ಜುಡೇ ವತನ್‌’ (ಹೆಜ್ಜೆ ಹಾಕೋಣ, ದೇಶ ಒಗ್ಗೂಡಿಸೋಣ) ಎಂಬ ಟ್ಯಾಗ್‌ಲೈನ್‌ ಇರಿಸಲಾಗಿದೆ.

ಇದೇ ವೇಳೆ ಯಾತ್ರಿಕರ ಅಂಕಿ-ಸಂಖ್ಯೆಯ ವಿವರವನ್ನೂ ಪ್ರಕಟಿಸಲಾಗಿದೆ. ರಾಹುಲ್‌ ಗಾಂಧಿ ಸೇರಿದಂತೆ 100 ಯಾತ್ರಿಕರು ‘ಭಾರತ ಯಾತ್ರಿ’ಗಳಾಗಲಿದ್ದಾರೆ. ಅರ್ಥಾತ್‌ ಇವರು ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿ ಕಾಶ್ಮೀರದವರೆಗೂ ಸಾಗುವ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ದಿಗ್ವಿಜಯ ಸಿಂಗ್‌ ಹಾಗೂ ಜೈರಾಂ ರಮೇಶ್‌ ಪ್ರಕಟಿಸಿದರು.

ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!

‘3,570 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಾಗಲಿದೆ. ಯಾತ್ರೆ ಮುಕ್ತಾಯಕ್ಕೆ 5 ತಿಂಗಳು ಹಿಡಿಯಲಿದೆ. ಹಿಂದೆಂದೂ ಕಂಡು ಕೇಳರಿಯದ ಯಾತ್ರೆ ಇದಾಗಲಿದೆ. ಇಷ್ಟೊಂದು ದೊಡ್ಡ ಮಟ್ಟದ ಜನಸಂಪರ್ಕ ಹಿಂದೆಂದೂ ನಡೆದಿರಲಿಲ್ಲ. ಈ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ‘ಭಾರತ ಯಾತ್ರಿ’ ಆಗಲಿದ್ದಾರೆ. ಅರ್ಥಾತ್‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದಾರೆ’ ಎಂದು ದಿಗ್ವಿಜಯ ಸಿಂಗ್‌ ತಿಳಿಸಿದರು.

ಇನ್ನು ಯಾತ್ರೆ ಸಾಗದ ರಾಜ್ಯಗಳಿಗೆ ಸೇರಿದ 100 ಯಾತ್ರಿಕರು ಸೇರಿಕೊಳ್ಳಲಿದ್ದಾರೆ. ಇವರು ‘ಅತಿಥಿ ಯಾತ್ರಿಕರು’ ಎನ್ನಿಸಿಕೊಳ್ಳಲಿದ್ದಾರೆ. ಆಯಾ ರಾಜ್ಯಗಳಲ್ಲಿ ಯಾತ್ರೆ ಸಾಗುವಾಗ ಆಯಾ ರಾಜ್ಯದ ಕನಿಷ್ಠ 100 ಜನರು ಯಾತ್ರೆಯಲ್ಲಿ ಇರಲಿದ್ದಾರೆ. ಇವರು ‘ಪ್ರದೇಶ ಯಾತ್ರಿ’ಗಳು ಎನ್ನಿಸಿಕೊಳ್ಳಲಿದ್ದಾರೆ’. ಹೀಗೆ ಯಾವುದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಕನಿಷ್ಠ 300 ಜನರು ಇರಲಿದ್ದಾರೆ ಎಂದು ಅವರು ವಿವರಿಸಿದರು.

ಆಮ್ ಆದ್ಮಿಗೆ ಮತ್ತೊಂದು ಹೊಡೆತ, ಮದ್ಯ ಜಟಾಪಟಿ ನಡುವೆ ಆಪ್ ಕಾರ್ಯಕರ್ತರು ಬಿಜೆಪಿಗೆ!

‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್‌. ಈಗ ದೇಶದಲ್ಲಿ ಸೌಹಾರ್ದತೆ ಮೂಡಿಸಿ ಒಗ್ಗಟ್ಟಿನ ಮಂತ್ರ ಪಠಿಸುವುದು ಯಾತ್ರೆಯ ಉದ್ದೇಶ. ಇದು ಭಾರತವನ್ನು ಒಗ್ಗೂಡಿಸುವ ಜನಾಂದೋಲನ’ ಎಂದು ಅವರು ಹೇಳಿದರು.

ವೆಬ್‌ಸೈಟ್‌ :

ಇದೇ ವೇಳೆ, ‘ಮಿಲೇ ಕದಂ ಜುಡೇ ವತನ್‌’ ಟ್ಯಾಗ್‌ಲೈನ್‌, ಲೋಗೋ ಹಾಗೂ ಭಾರತ್‌ ಜೋಡೋ ವೆಬ್‌ಸೈಟ್‌ ಅನ್ನು ಅವರು ಬಿಡುಗಡೆ ಮಾಡಿದರು.

ಹೆಜ್ಜೆ ಹಾಕಿ- ರಾಹುಲ್‌:

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಏಕ್‌ ತೇರೇ ಕದಂ, ಏಕ್‌ ಮೇರೇ ಕದಂ, ಮಿಲ್‌ ಜಾಯೇ ಜುಡ್‌ ಜಾಯೇ ಅಪನಾ ವತನ್‌’ (ಒಂದು ನಿನ್ನ ಹೆಜ್ಜೆ, ಒಂದು ನನ ಹೆಜ್ಜೆ, ಇಬ್ಬರೂ ಒಂದಾಗಿ ಭಾರತವನ್ನು ಒಗ್ಗೂಡಿಸೋಣ’ ಎಂದು ಬರೆದಿದ್ದಾರೆ ಹಾಗೂ ರಾಹುಲ್‌ ಮತ್ತು ಪ್ರಿಯಾಂಕಾ ತಮ್ಮ ಟ್ವೀಟರ್‌ ಪ್ರೊಫೈಲ್‌ ಫೋಟೋದಲ್ಲಿ ಲೋಗೋ ಹಾಕಿಕೊಂಡಿದ್ದಾರೆ. ಅನೇಕ ಕಾಂಗ್ರೆಸ್ಸಿಗರು ಇದನ್ನೇ ಅನುಸರಿಸಿದ್ದಾರೆ.

ಯಾತ್ರೆಯ ಸ್ವಾರಸ್ಯ

- 100 ಭಾರತ ಯಾತ್ರಿಗಳು: ಆರಂಭದಿಂದ ಅಂತ್ಯದವರೆಗೆ 100 ಯಾತ್ರಿಕರು ಭಾಗಿ: ಇವರು ಭಾರತ ಯಾತ್ರಿಗಳು
- 100 ಅತಿಥಿ ಯಾತ್ರಿಗಳು: ಯಾತ್ರೆ ಸಾಗದ ರಾಜ್ಯಗಳ ಯಾತ್ರಿಕರು: ಇವರು ಅತಿಥಿ ಯಾತ್ರಿಗಳು
- 100 ಪ್ರದೇಶ ಯಾತ್ರಿಗಳು: ಆಯಾ ರಾಜ್ಯದಲ್ಲಿ ಕನಿಷ್ಠ 100 ಮಂದಿ ಭಾಗಿ: ಇವರು ಪ್ರದೇಶ ಯಾತ್ರಿಗಳು