* ನವದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕ ಸಭೆ* ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕರ ಜತೆ ಸಭೆ ಮಾಡಿದ ರಾಹುಲ್ ಗಾಂಧಿ* ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ
ನವದೆಹಲಿ, (ಫೆ.24): ರಾಹುಲ್ ಗಾಂಧಿ(Rahul Gandhi) ಇಂದು (ಗುರುವಾರ) ಕರ್ನಾಟಕ ಕಾಂಗ್ರೆಸ್ (Karnataka Congress) ನಾಯಕರೊಂದಿಗೆ ಸಭೆ ನಡೆಸಿದರು. ರಾಹುಲ್ ನಿವಾಸದ ಲಾಂಜ್ನಲ್ಲಿ ಕುಳಿತು ಪರಸ್ಪರ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (DK Shivakumar) ಅವರೊಂದಿಗೆ ಸಭೆ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸುಮಾರು 20 ನಾಯಕರು ಪಾಲ್ಗೊಂಡಿದ್ದರು. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಸಹ ಭಾಗವಹಿಸಿದ್ದ ಸಭೆಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಕಾಂಗ್ರೆಸ್ ನಲ್ಲಿ ಒಳಬೇಗುದಿ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡ ರಾಹುಲ್
ಸಭೆಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ , ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗರೆಡ್ಡಿ,ಸತೀಶ್ ಜಾರಕಿಹೊಳಿ,ಧ್ರುವ ನಾರಾಯಣ್, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಮಾಜಿ ಅಧ್ಯಕ್ಷರುಗಳಾದ ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ,ವಿಪಕ್ಷ ಉಪನಾಯಕ ಯುಟಿ ಖಾದರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಭಾಗಿಯಾಗಿದ್ದರು.
ಸಭೆಯಲ್ಲಿ ರಾಜ್ಯ ನಾಯಕರ ನಡುವಿನ ಅಸಮಾಧಾನ ಶಮನಕ್ಕೆ ಪ್ರಯತ್ನ ಮಾಡಲಾಗಿದ್ದು, ಅದರಲ್ಲೂ ಪ್ರಮುಖವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಕೋಲ್ಡ್ ವಾರ್ ಗೆ ಮುಲಾಮು ಹಚ್ಚುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, 2023 ರ ಚುನಾವಣೆಗೆ ಸಿದ್ದತೆ ಮಾಡಿ, ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಇಲ್ಲಿಯೇ ಬಿಡ. ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು ಎರಡು ತಾಸು ನಡೆದ ಸಭೆಯಲ್ಲಿ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಬೊಮ್ಮಾಯಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಸರ್ಕಾರ ಶೇ 40 ಕಮಿಷನ್ ಸರ್ಕಾರ. ಬಿಟ್ಕಾಯಿನ್ ಹಗರಣ ಬೊಮ್ಮಾಯಿ ಮನೆಬಾಗಿಲಿಗೆ ಬಂದು ನಿಂತಿದೆ. ಈ ಎಲ್ಲಾ ವಿಚಾರವನ್ನ ರಾಜ್ಯದ ಜನರ ಗಮನಕ್ಕೆ ತರುವ ಕೆಲಸ ಕಾಂಗ್ರೆಸ್ ಮಾಡಲಿದೆ. ಒಗ್ಗಟ್ಟಿನಿಂದ ಬಿಜೆಪಿ ವಿರುದ್ದ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ
ರಾಹುಲ್ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳ ಜಗಳಗಳು ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. ಮೇಕೆದಾಟು 2ನೇ ಹಂತದ ಪಾದಯಾತ್ರೆಗೆ ಸುರ್ಜೇವಾಲ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಕರ್ನಾಟಕದಲ್ಲಿ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರವೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣವಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ರಾಹುಲ್ ಸಭೆ ನಡೆಸಿ ಕರ್ನಾಟಕದಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಲು ನಾಯಕರುಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಆಗಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.
ಮುಂದಿನ ಮುಖ್ಯಮಂತ್ರಿಯಾಗಲು ಡಿಕೆಶಿ ಹಾಗೂ ಸಿದ್ದು ತಮ್ಮದೇ ಹಾದಿಯಲ್ಲಿ ರಾಜಕೀಯ ಆಟ ನಡೆಸಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಈ ಇಬ್ಬರ ನಡವಳಿಕೆಗೆ ಬೇಸರಗೊಂಡಿದ್ದಾರೆ. ಈಗ ರಾಹುಲ್ ಎಲ್ಲಾವನ್ನು ಇಲ್ಲೇ ಬಿಡಿ ಎಂದು ಕಿವಿ ಮಾತು ಹೇಳಿದ್ದು, ಮುಂದೆ ಯಾವ ರೀತಿಯಲ್ಲಿ ಇರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
