Bharat Jodo Yatra: ಜಡಿ ಮಳೆಗೂ ಬಗ್ಗಲಿಲ್ಲ Rahul Gandhi, ಸುರಿವ ಮಳೆಯಲ್ಲೇ ಭಾಷಣ; ಜನರಿಗೆ ಭೇಷ್ ಎಂದ ರಮ್ಯಾ
Rahul Gandhi rain viral video: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ 24 ದಿನಗಳಿಂದ ಭಾರತ ಐಕ್ಯತಾ ಯಾತ್ರೆ ನಡೆಸುತ್ತಿದ್ದಾರೆ. ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಾಗ ಮಳೆ ಆರಂಭವಾಗಿದೆ. ಜಡಿ ಮಳೆಯಲ್ಲೂ ರಾಹುಲ್ ಗಾಂಧಿ ಮಾತು ನಿಲ್ಲಿಸಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೈಸೂರು: ಭಾರತ ಜೋಡೊ ಯಾತ್ರೆ ತಮಿಳುನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕಕ್ಕೆ ಬಂದು ತಲುಪಿದೆ. ಕಳೆದೆರಡು ದಿನಗಳಿಂದ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಭಾನುವಾರ ಮೈಸೂರು ಜಿಲ್ಲೆಯ ಬಂಡಿಪಾಳ್ಯ ಸಮೀಪ ರಾಹುಲ್ ಗಾಂಧಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ರಾಹುಲ್ ಗಾಂಧಿ ಮಾತನಾಡುವ ವೇಳೆ ಜೋರು ಮಳೆ ಆರಂಭವಾಗಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ರಾಹುಲ್ ಗಾಂಧಿ ಮಳೆಯಲ್ಲೇ ಮಾತು ಮುಂದುವರೆಸಿದ್ದಾರೆ. ಭಾರತ ಜೋಡೊ ಯಾತ್ರೆ ಮಳೆ - ಗಾಳಿ ಅಥವಾ ಸುನಾಮಿ ಬಂದರೂ ನಿಲ್ಲುವುದಿಲ್ಲ. ಏನೇ ಬಂದರೂ ಭಾರತದ ಏಕತೆಗಾಗಿ ಯಾತ್ರೆ ಮುಂದುವರೆಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಜೋರು ಮಳೆಯಲ್ಲಿ ನಿಂತು ಮಾತನಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ನಾಯಕರು ಶೇರ್ ಮಾಡಿದ್ಧಾರೆ. ಈ ವಿಡಿಯೋ ವೈರಲ್ ಆಗಿದ್ದು ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ. ಮಾಜಿ ಸಂಸದೆ, ನಟಿ ದಿವ್ಯ ಸ್ಪಂದನ ಅಕಾ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ. ಆದರೆ ರಾಹುಲ್ ಗಾಂಧಿ ಮಾತನ್ನು ಅಂತಾ ಮಳೆಯಲ್ಲೂ ನಿಂತು ಜನ ಕೇಳಿಸಿಕೊಳ್ಳುತ್ತಿದ್ದಾರಲ್ಲ ಅದು ನಿಜವಾದ ಸುದ್ದಿ ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್ ಭಾರತ್ ಜೋಡೊ ಯಾತ್ರೆ ಯಶಸ್ಸು ಕಂಡಿದೆ ಮತ್ತು ಜನ ರಾಹುಲ್ ಗಾಂಧಿ ಅವರ ಮಾತನ್ನು ಮಳೆಯಲ್ಲೂ ನಿಂತು ಆಲಿಸುತ್ತಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಅವರು ಪಾದಯಾತ್ರೆ ಆರಂಭಿಸಿ 24 ದಿನಗಳು ಕಳೆದಿವೆ. ತಮಿಳುನಾಡಿನ ನಂತರ ಕೇರಳದಲ್ಲಿ ಪಾದಯಾತ್ರೆ ಮುಗಿಸಿ ಈಗ ಕರ್ನಾಟಕಕ್ಕೆ ಬಂದಿದ್ದಾರೆ. ದ್ವೇಷ, ಕೋಮುವಾದ, ಜಾತೀಯತೆ ಎಲ್ಲವನ್ನೂ ಮೀರಿ ದೇಶದ ಜನತೆ ಒಂದಾಗಿ ಬಾಳಬೇಕು. ಸಹನೆ, ಸಹಬಾಳ್ವೆ, ಭ್ರಾತೃತ್ವವನ್ನು ಸದೃಢಗೊಳಿಸುವುದೇ ಯಾತ್ರೆಯ ಮೂಲ ಉದ್ದೇಶ ಹೊರತು ರಾಜಕೀಯವಲ್ಲ ಎಂದು ರಾಹುಲ್ ಗಾಂಧಿ ಪಾದಯಾತ್ರೆಯುದ್ದಕ್ಕೂ ಪುನರುಚ್ಚರಿಸುತ್ತಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆ ಆರಂಭವಾದ ದಿನದಿಂದ ಕೆಲವೊಂದು ವಿಚಾರಗಳಿಗೆ ಟ್ರೋಲ್ ಆಗುತ್ತಿದ್ದರೆ ಕೆಲವೊಂದು ವಿಚಾರಗಳಿಂದ ಪ್ರಶಂಸೆಗೂ ಒಳಗಾಗುತ್ತಿದ್ದಾರೆ.
ರಾಜ್ಯಕ್ಕೆ ಸೋನಿಯಾ ಭೇಟಿ:
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಕೊಡಗಿನ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಒಂದೆಡೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನಡುವೆ ಚುನಾವಣೆ ನಡೆಯಲಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿದ್ದಾರೆ. ಯಾತ್ರೆ ಇಂದು ಜೆಡಿಎಸ್‌ನ ಭದ್ರಕೋಟೆ ಹಾಸನಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಸಹ 6ನೇ ತಾರೀಕು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮರುದಿನ ಅಂದರೆ 7ನೇ ತಾರೀಕು ಪ್ರಿಯಾಂಕಾ ಗಾಂಧಿ ವಾದ್ರಾ ನಾಗಮಂಗಲ ತಾಲೂಕಿನಲ್ಲಿ ಪಾದಯಾತ್ರೆ ಮಾಡಲಿದ್ದಾರೆ.
ಇದನ್ನೂ ಓದಿ: Bharat Jodo Yatra: ಮೋದಿ ಶ್ರೀಮಂತರ ಪರ: ರಾಹುಲ್ ವಾಗ್ದಾಳಿ
ಮಧ್ಯಾಹ್ನ 12:30ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಸೋನಿಯಾ ಗಾಂಧಿ ಆಗಮಿಸಲಿದ್ದು, ಕೆಲ ಕಾಲ ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆಶಿ ಜೊತೆ ಮಾತುಕತೆ ನಡೆಸಲಿದ್ದಾರೆ. 1:00 ಗಂಟೆಗೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು 1:20ಕ್ಕೆ ಮಡಿಕೇರಿ ತಲುಪಲಿದ್ದಾರೆ. ಮಡಿಕೇರಿ ನಗರದ ಹೊರವಲಯದ ಗಾಲ್ಫ್ ಹೆಲಿಪ್ಯಾಡ್‌ಗೆ ಸೋನಿಯಾ ಆಗಮಿಸಲಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಮೇಕೇರಿಯ ರೆಸಾರ್ಟ್‌ಗೆ ತೆರಳುತ್ತಾರೆ.
ಇದನ್ನೂ ಓದಿ: ಆಕ್ಸಿಜನ್ ದುರಂತ: ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ನೌಕರಿ ಭರವಸೆ ಕೊಟ್ಟ ರಾಹುಲ್ ಗಾಂಧಿ