ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೀಯ ‘ಭಾರತ್‌ ಜೋಡೋ ಯಾತ್ರೆ’ಯು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 22 ದಿನಗಳ ಕಾಲ ನಡೆಯಲಿದ್ದು, ರಾಜ್ಯದಲ್ಲೇ ಬರೋಬ್ಬರಿ 510 ಕಿ.ಮೀ. ಉದ್ದದವರೆಗೆ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಬೆಂಗಳೂರು (ಜು.15): ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೀಯ ‘ಭಾರತ್‌ ಜೋಡೋ ಯಾತ್ರೆ’ಯು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 22 ದಿನಗಳ ಕಾಲ ನಡೆಯಲಿದ್ದು, ರಾಜ್ಯದಲ್ಲೇ ಬರೋಬ್ಬರಿ 510 ಕಿ.ಮೀ. ಉದ್ದದವರೆಗೆ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದೇ ವೇಳೆ ರಾಹುಲ್‌ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಲ್ನಡಿಗೆ ಮೂಲಕವೇ ಯಾತ್ರೆ ಪೂರೈಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ನಿತ್ಯ ಸರಾಸರಿ 20 ಕಿ.ಮೀ. (ಕೆಲವು ದಿನ 25 ಕಿ.ಮೀ.) ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಗುರುವಾರ ನಡೆದ ಭಾರತ್‌ ಜೋಡೋ ಯಾತ್ರೆ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಬಳಿಕ ರಾಜ್ಯದಲ್ಲಿ ನಡೆಯಲಿರುವ ಯಾತ್ರೆಯ ರೂಪುರೇಷೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಎಐಸಿಸಿ ಅಧಿವೇಶನ ನಡೆಸಿದ್ದರು. ಬಳಿಕವೇ ಗಾಂಧೀಜಿ ಅವರು ನಾಯಕತ್ವ ವಹಿಸಿಕೊಂಡರು. ಇದೀಗ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 

ಸಿದ್ದು ಜನ್ಮದಿನ ಕಾಂಗ್ರೆಸ್‌ನ ಜಯದ ಮೆಟ್ಟಿಲಾಗಲಿ: ಡಿಕೆಶಿ

ಅಕ್ಟೋಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಲಿರುವ ಯಾತ್ರೆ ರಾಜ್ಯಕ್ಕೆ ಯಾವಾಗ ಬರಲಿದೆ ಎಂಬುದು ಇನ್ನೂ ಗೊತ್ತಿಲ್ಲ. ಪಾದಯಾತ್ರೆ ನಡೆಸಲು ಬಳ್ಳಾರಿ ಯಾತ್ರೆ, ಮೇಕೆದಾಟು ಪಾದಯಾತ್ರೆ ಸೇರಿದಂತೆ ಹಲವು ಪಾದಯಾತ್ರೆ ಯಶಸ್ವಿಗೊಳಿಸಿದ ಅನುಭವ ನಮಗಿದೆ. ಈ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನೀಡಿದ್ದೇವೆ. ದೇಶವನ್ನು ಒಗ್ಗೂಡಿಸುವ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಜನ ಬೆಂಬಲ ವ್ಯಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜನಗರದ ಮೂಲಕ ಆಗಮನ: ಭಾರತ್‌ ಜೋಡೋ ಯಾತ್ರೆ ಯಾವ ಮಾರ್ಗದಿಂದ ರಾಜ್ಯಕ್ಕೆ ಬರಬೇಕು ಎಂಬ ಬಗ್ಗೆ ಗೊಂದಲಗಳಿದ್ದವು. ಮುಳಬಾಗಿಲು ಮೂಲಕ ರಾಜ್ಯ ಪ್ರವೇಶಿಸುವುದು, ಹೊಸೂರು, ಕೇರಳದಿಂದ ಬಂದು ಚಾಮರಾಜನಗರದ ಮೂಲಕ ಅಥವಾ ಮಂಗಳೂರು ಮೂಲಕ ಆಗಮಿಸುವ ನಾಲ್ಕು ಆಯ್ಕೆಗಳಿದ್ದವು. ಅಂತಿಮವಾಗಿ ಕೇರಳದ ವಯನಾಡು ಮುಗಿಸಿಕೊಂಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯಕ್ಕೆ ಬರಲು ತೀರ್ಮಾನಿಸಲಾಗಿದೆ ಎಂದರು.

ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಿದ ನಂತರ ಮೈಸೂರು, ಮಂಡ್ಯ ಜಿಲ್ಲೆ, ಕುಣಿಗಲ್‌ ಮೂಲಕ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನ ಮೂಲಕ ಹೈದರಾಬಾದ್‌ಗೆ ಯಾತ್ರೆ ತೆರಳಲಿದೆ. ತನ್ಮೂಲಕ ರಾಜ್ಯದ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗವನ್ನು ರಾಹುಲ್‌ ಗಾಂಧಿ ಅವರು ಯಾತ್ರೆ ಮೂಲಕ ಹಾದು ಹೋಗಲಿದ್ದಾರೆ ಎಂದು ಹೇಳಿದರು. ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗಬಾರದು ಎಂಬ ದೃಷ್ಟಿಯಿಂದ ಬೆಂಗಳೂರ ನಗರಕ್ಕೆ ರಾಹುಲ್‌ ಗಾಂಧಿ ಯಾತ್ರೆ ಪ್ರವೇಶ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಪ್ರವಾಹ ಪ್ರದೇಶಕ್ಕೆ ಸಚಿವರ ಕಾಟಾಚಾರದ ಭೇಟಿ: ಡಿಕೆಶಿ

ಎಚ್‌.ಡಿ.ಕೋಟೆಗೆ ಹೋಗಿ ಸಮೀಕ್ಷೆ: ಭಾರತ್‌ ಜೋಡೋ ಪಾದಯಾತ್ರೆಗೆ ನಕ್ಷೆಯನ್ನು ನಮಗೆ ನೀಡಿದ್ದಾರೆ. ಅಂತಿಮ ಬದಲಾವಣೆ ಮಾಡಿಕೊಳ್ಳಲು ನಮಗೆ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಅಂತಿಮ ಮಾರ್ಗ ಹಾಗೂ ವೇಳಾಪಟ್ಟಿಪ್ರಕಟಿಸುವ ಮೊದಲು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೊಂದಿಗೆ ಚರ್ಚಿಸಲಾಗುವುದು. ಇದಲ್ಲದೆ ಜು.19ರಂದು ಎಚ್‌.ಡಿ.ಕೋಟೆ ಕಡೆ ತೆರಳಿ ಪ್ರಾಥಮಿಕ ಸಮೀಕ್ಷೆ ನಡೆಸಲಾಗುವುದು. ಅದರ ಅಂದಾಜಿನ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.