ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಅಮೃತ ಮಹೋತ್ಸವವು ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುವಂತಹ ಕಾರ್ಯಕ್ರಮವಾಗಬೇಕು. ನಮ್ಮೆಲ್ಲರ ಗುರಿ 2023ಕ್ಕೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದಲ್ಲಿ ಅಧಿಕಾರಕ್ಕೆ ತರುವುದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಜು.14): ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಅಮೃತ ಮಹೋತ್ಸವವು ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುವಂತಹ ಕಾರ್ಯಕ್ರಮವಾಗಬೇಕು. ನಮ್ಮೆಲ್ಲರ ಗುರಿ 2023ಕ್ಕೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದಲ್ಲಿ ಅಧಿಕಾರಕ್ಕೆ ತರುವುದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಿದ್ದರಾಮೋತ್ಸವ ಎಂದು ಮಾಡುತ್ತಿರುವುದು ಮಾಧ್ಯಮಗಳ ಸೃಷ್ಟಿ. ಸಮಿತಿಯು ಎಲ್ಲೂ ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಕಾರ್ಯಕ್ರಮವನ್ನು ಪಕ್ಷದ ನಾಯಕರೇ ಮಾಡುತ್ತಿದ್ದು, ಖುದ್ದು ರಾಹುಲ್‌ಗಾಂಧಿ ಅವರೂ ಆಗಮಿಸುತ್ತಿದ್ದಾರೆ.
ಹೀಗಾಗಿ ಪಕ್ಷದ ಗೆಲುವಿಗೆ ಪೂರಕವಾಗಿಯೇ ಕಾರ್ಯಕ್ರಮ ಇರಲಿದೆ’ ಎಂದರು. ಕಾಂಗ್ರೆಸ್ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನನಗೆ ಆ ವಿಚಾರದ ಬಗ್ಗೆ ಗೊತ್ತಿಲ್ಲ. ಅವರು ವೈಯಕ್ತಿಕ ವಿಚಾರವಾಗಿ ಭೇಟಿ ನೀಡಿದ್ದಾರೋ ಅಥವಾ ರಾಜಕೀಯ ವಿಚಾರವಾಗಿ ಭೇಟಿ ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ. ಶಾಸಕರು ಬೇರೆ ಪಕ್ಷಗಳ ನಾಯಕರನ್ನು ಭೇಟಿ ಮಾಡುವುದು ಸಹಜ. ಹಿರಿಯ ನಾಯಕರಿಗೆ ಗೌರವ ಸಲ್ಲಿಸಲು ಹೋಗಿರಬಹುದು’ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿಗೆ ಗುಂಡಿಕ್ಕಿ ಎಂಬ ಬೆದರಿಕೆ ಇದ್ದರೂ ಕೇಸ್ ಏಕಿಲ್ಲ?
ಪ್ರವಾಹ ಪ್ರದೇಶಕ್ಕೆ ಸಚಿವರ ಕಾಟಾಚಾರದ ಭೇಟಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸರ್ಕಾರದ ಸಚಿವರು, ಶಾಸಕರು ಹಾಗೂ ನಾಯಕರು ನೆಪ ಮಾತ್ರಕ್ಕೆ ಭೇಟಿ ನೀಡುತ್ತಿದ್ದಾರೆಯೇ ಹೊರತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಲವು ದಿನದಿಂದ ತೀವ್ರ ಮಳೆಯಿಂದಾಗಿ ಜನರು ಸಂಕಷ್ಟಅನುಭವಿಸುತ್ತಿದ್ದಾರೆ. ಹೀಗಿದ್ದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಮುಖ್ಯಮಂತ್ರಿಗಳು ಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ಮಂತ್ರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಕಿಡಿಕಾರಿದರು. ‘ಕೊಡಗು, ದಕ್ಷಿಣ ಕನ್ನಡ ಭಾಗದ ಸ್ಥಿತಿ ಶೋಚನೀಯವಾಗಿದೆ. ಯಾರೊಬ್ಬರಿಗೂ ಈ ಸರ್ಕಾರ ನೆರವು ನೀಡಿಲ್ಲ. ಅಧಿಕಾರಿಗಳು ಕೂಡ ಯಾವುದೇ ಕೆಲಸ ಮಾಡಿಲ್ಲ. ನೆಪ ಮಾತ್ರಕ್ಕೆ ಬೆರಳೆಣಿಕೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರಿಗೆ ಸಹಾಯ ಮಾಡುವ ಯಾವುದೇ ಉದ್ದೇಶದಿಂದ ಈ ಸರ್ಕಾರ ಕೆಲಸ ಮಾಡುತ್ತಿಲ್ಲ. ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡ ಬಳಿಕ ಫೋಟೋಗಳಿಗೆ ಪೋಸು ನೀಡಿ ಪ್ರಚಾರ ಪಡೆಯಲಷ್ಟೇ ಹೋಗುತ್ತಿದ್ದಾರೆ. ಇವರಿಂದ ಜನರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಗೆ 1 ಲಕ್ಷ ಜನ: ಡಿ.ಕೆ.ಶಿವಕುಮಾರ್
ಭಾರತ ಜೋಡೋ ಸಭೆಗೆ ಇಂದು ಡಿಕೆಶಿ ದೆಹಲಿಗೆ: ಎಐಸಿಸಿಯು ದೆಹಲಿಯಲ್ಲಿ ಗುರುವಾರ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಬುಧವಾರ ದೆಹಲಿಗೆ ತೆರಳಿದರು. ಭಾರತ್ ಜೋಡೋ ಯಾತ್ರೆಯ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರೊಂದಿಗೆ ಹೈಕಮಾಂಡ್ ಗುರುವಾರ ಸಭೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವ ದಿನಾಂಕದಂದು ಭಾರತ್ ಜೋಡೋ ಯಾತ್ರೆ ನಡೆಯಲಿದೆ ಹಾಗೂ ಯಾವ ಮಾರ್ಗ ಆಯ್ಕೆ ಮಾಡಲಾಗಿದೆ ಎಂಬುದು ಸೇರಿದಂತೆ ಪೂರ್ವ ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ.
