Asianet Suvarna News Asianet Suvarna News

ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ರಾಹುಲ್‌ ಗಾಂಧಿ ಸಲಹೆ

  • ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ರಾಹುಲ್‌ ಗಾಂಧಿ ಸಲಹೆ
  • ರಾಹುಲ್‌ ಕಣ್ತುಂಬಿಕೊಳ್ಳಲು ನೂಕುನುಗ್ಗಲು
  • ರಾಹುಲ್‌ ಅಪ್ಪಿಕೊಂಡ ಯುವ ಕಾರ್ಯಕರ್ತ
Rahul Gandhi advises to fight elections with unity hubli rav
Author
Hubli, First Published Aug 3, 2022, 9:38 AM IST

ಹುಬ್ಬಳ್ಳಿ (ಆ.3) : ಪರಸ್ಪರ ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಗೋಕುಲ ರಸ್ತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಇದೇ ಮೊದಲ ಬಾರಿಗೆ ನಡೆದ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ರೀತಿ ಎಚ್ಚರಿಕೆ ನೀಡುವ ಮೂಲಕ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ನಾಯಕತ್ವ ಕಿತ್ತಾಟಕ್ಕೆ ಇತಿಶ್ರೀ ಹಾಡಲು ಸೂಚಿಸಿದರು. ಅಲ್ಲದೇ, ಭಿನ್ನಮತದ ರಾಗ ಎಳೆಯುವವರಿಗೆ ಚಾಟಿ ಬೀಸಿದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಸಭೆಯಲ್ಲಿನ ಚರ್ಚೆಯ ವಿಷಯ ಹಂಚಿಜಕೊಂಡ ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌(K.C.Venugopala), ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ಸಂಘಟನೆಗೆ ಹಾಗೂ 2023ರಲ್ಲಿ ಅಧಿಕಾರಕ್ಕೆ ಬರುವಂತೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಒಗ್ಗಟ್ಟಿನಿಂದ ಕೂಡಿರಬೇಕು. ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಏನೇ ಇದ್ದರೂ ಪಕ್ಷದ ಪೂಜೆ ಮಾಡಿ ಎಂದು ಸೂಚನೆ ನೀಡಿದರು. ಸುಮಾರು 1ಗಂಟೆಗೂ ಅಧಿಕ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ, ಚುನಾವಣಾ ತಂತ್ರಗಾರಿಕೆ, ಬಿಜೆಪಿ ವೈಫಲ್ಯಗಳ ಬಗ್ಗೆಯೇ ಚರ್ಚೆ ನಡೆಯಿತು.

ಹುಬ್ಬಳ್ಳಿ: ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್‌ ಗಾಂಧಿ ಶೀಘ್ರ ಭೇಟಿ, ಡಿಕೆಶಿ

ಪಕ್ಷದ ಸಂಘಟನೆ ಹಾಗೂ 2023ರ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆ ಅತ್ಯಂತ ಯಶಸ್ವಿಯಾಗಿದೆ. ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ನಡೆಯಲು ಸಹಮತ ಸೂಚಿಸಿದ್ದಾರೆ. ರಾಜ್ಯದ ಭ್ರಷ್ಟಸರ್ಕಾರದಿಂದ ಜನತೆ ರೋಸಿ ಹೋಗಿದ್ದಾರೆ. ಕಾಂಗ್ರೆಸ್‌ ಪರ ಒಲವು ಎಲ್ಲೆಡೆ ಇದೆ. ಈ ಹಿನ್ನೆಲೆಯಲ್ಲಿ ಈ ಭ್ರಷ್ಟ, ಲೂಟಿಕೋರ ಸರ್ಕಾರ ಇದೆ. ಬಿಜೆಪಿ ವಿರುದ್ಧ ಗಟ್ಟಿಧ್ವನಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದರು.

ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಲಂಚಗುಳಿತನ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವಾಡುತ್ತಿದೆ. ಅದಕ್ಕಾಗಿ ಸಂಘಟಿತ ಹೋರಾಟ ನಡೆಸಲಿದ್ದೇವೆ. ಬಿಜೆಪಿಯಲ್ಲಿ ಪಕ್ಷ ಸಂಘಟನೆಯಲ್ಲಿ ಎಷ್ಟುಒಳ್ಳೆಯ ಮ್ಯಾನೇಜಮೆಂಟ್‌ ಇದೆಯೋ ಅಷ್ಟೇ ಲೂಟಿ ಹೊಡೆಯುವಲ್ಲಿಯೂ ಪ್ಲ್ಯಾನ್‌ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿ ನಾಯಕತ್ವ ವಿಷಯವಾಗಿ ಚರ್ಚೆಯಾಗಿಲ್ಲ. ಸದ್ಯ ಪಕ್ಷ ರಾಜ್ಯದಲ್ಲಿ ಸರಿದಾರಿಯಲ್ಲಿ ನಡೆಯುತ್ತಿದೆ. ಅದೇ ದಾರಿಯಲ್ಲಿ ಮುಂದುವರಿಯುತ್ತದೆ. ನಾಯಕತ್ವ ಕುರಿತಂತೆ ಕೆಲ ನಾಯಕರ ಹೇಳಿಕೆಗಳಿಗೆ ಮಾನ್ಯತೆ ಕೊಡಲ್ಲ. ಇದೆಲ್ಲವೂ ನಾಯಕತ್ವದ ಪ್ರಶ್ನೆಗಳೆಲ್ಲ ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ಯಾವುದೆ ಗೊಂದಲಗಳಿಲ್ಲ ಎಂದು ಪುನರುಚ್ಛಿಸಿದರು.

ಮುಂದಿನ ಚುನಾವಣೆಗೆ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ವಿಚಾರ, ಟಿಕೆಟ್‌ ನೀಡುವ ಬಗ್ಗೆ ಪಕ್ಕಾ ಪ್ಲ್ಯಾನ್‌ ಮಾಡಿಕೊಂಡಿದೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಲೀಂ ಅಹ್ಮದ ಸೇರಿದಂತೆ ಹಲವರಿದ್ದರು.

ರಾಹುಲ್‌ ಕಣ್ತುಂಬಿಕೊಳ್ಳಲು ನೂಕುನುಗ್ಗಲು:

ವಿಮಾನ ನಿಲ್ದಾಣ, ಫಾರ್ಚೂನ್‌ ಹೊಟೇಲ್‌(Fortuner Hotel) ಎದುರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ರಾತ್ರಿ 8.30ಕ್ಕೆ ರಾಹುಲ್‌ ಗಾಂಧಿ ಹುಬ್ಬಳ್ಳಿ(Hubballi) ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಕಾರ್ಯಕರ್ತರಿಂದ ಜಯಘೋಷ ಮೊಳಗಿತು. ರಾಹುಲ್‌ ಕಣ್ತುಂಬಿಕೊಳ್ಳಲು ನೂಕುನುಗ್ಗಲು ಉಂಟಾಯಿತು. ಕಾರಿನಲ್ಲೇ ಅಭಿಮಾನಿಗಳತ್ತ ಕೈ ಬೀಸಿದ ರಾಹುಲ್‌ ಅಲ್ಲಿಂದ ಸಭೆ ನಡೆಯಲಿರುವ ಹೊಟೇಲ…ಗೆ ತೆರಳಿದರು.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಐತಿಹಾಸಿಕ ಸಭೆ

ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ಒಂದೇ ಕಾರಲ್ಲಿ ಹೊಟೆಲ್‌ ತೆರಳಿ ಕೆಲ ಕಾಲ ಚರ್ಚಿಸಿದರು.

ರಾಹುಲ್‌ ಆಗಮಿಸುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಭದ್ರತಾ ಕಾರಣದಿಂದ ಕಾರಿನಲ್ಲೆ ಇದ್ದ ಆಕಾಶ ನೀಲಿ ಬಣ್ಣದ ಅಂಗಿ ಧರಿಸಿದ್ದ ರಾಹುಲ್‌ ಅಭಿಮಾನಿಗಳತ್ತ ಕೈ ಬೀಸುತ್ತಾ ಸಾಗಿದರು. ರಾಹುಲ್‌ ಗಾಂಧಿ ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ಮುನ್ನುಗುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬಾಗಲಕೋಟೆ, ವಿಜಯಪುರ, ಧಾರವಾಡ, ಕೊಪ್ಪಳ, ಬಳ್ಳಾರಿ, ಧಾರವಾಡ ಜಿಲ್ಲೆಯವರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಎತ್ತಿನಬಂಡಿ, ಟ್ರ್ಯಾಕ್ಟರ್‌ ಏರಿ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿದ್ದರು. ಸಂಜೆ 5ರಿಂದಲೇ ಗೋಕುಲ್‌ ರಸ್ತೆಯಲ್ಲಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು ಗುಂಪು ಗುಂಪಾಗಿ ಸೇರಿ ರಸ್ತೆಯುದ್ದಕ್ಕೂ ಬೈಕ್‌ ರಾರ‍ಯಲಿ ನಡೆಸಿದರು. ವಿಮಾನ ನಿಲ್ದಾಣದ ಎದುರು ಜಗ್ಗಲಿಗೆ, ಡೊಳ್ಳು ಕುಣಿತ, ಡಿಜೆ ಸಂಭ್ರಮವಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ರಾಹುಲ್‌ ನೋಡಲು ಕಾದಿದ್ದರು.

ಇದಕ್ಕೂ ಮೊದಲು ವಿಪ ಸದಸ್ಯ ಸಲೀಂ ಅಹ್ಮದ, ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಮಹ್ಮದ್‌ ಹ್ಯಾರಿಸ್‌ ಕಾರ್ಯಕರ್ತರೊಂದಿಗೆ ಸೇರಿ ಗೋಕುಲ್‌ ರಸ್ತೆಯಲ್ಲಿ ಸಂಚರಿಸಿ ರಾಹುಲ್‌ ಗಾಂಧಿ ಸ್ವಾಗತಕ್ಕೆ ಮಾಡಲಾದ ವ್ಯವಸ್ಥೆ ಪರಿಶೀಲಿಸಿದರು. ರಸ್ತೆ ಉದ್ದಗಲಕ್ಕೂ ಕಾಂಗ್ರೆಸ್‌ ಬಾವುಟಗಳು, ಕಾಂಗ್ರೆಸ್‌ ನಾಯಕರ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ನಿಲ್ದಾಣದೊಳಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು.

ರಾಹುಲ್‌ ಅಪ್ಪಿಕೊಂಡ ಯುವ ಕಾರ್ಯಕರ್ತ:

ವಿಮಾನ ನಿಲ್ದಾಣದ ಆವರಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರ ಕಣ್ಣು ತಪ್ಪಿಸಿದ ಯುವ ಮುಖಂಡ, ಬೊಮ್ಮಾಪುರ ಬ್ಲಾಕ್‌ ಸೋಶಿಯಲ್‌ ಮೀಡಿಯಾ ಉಪಾಧ್ಯಕ್ಷ ರೆಹನಾ ರಾಜಾ ಐನಾಪುರಿ ರಾಹುಲ್‌ ಗಾಂಧಿಯವರನ್ನು ಆಲಂಗಿಸಿದರು. ಬೆನ್ನು ತಡವಿದ ರಾಹುಲ್‌ ಗಾಂಧಿ ರುಕೋ, ರುಕೋ, ಛೋಡೊ ಮುಜೆ, ಹಮ್‌ ಜಾಯೆಂಗೆ ಥ್ಯಾಂಕ್ಯೂ ಎನ್ನುತ್ತಾ ಮುಂದೆ ಸಾಗಿದರು.

ಬಳಿಕ ಖಾಸಗಿ ಹೊಟೆಲ್‌ನಲ್ಲೇ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆ ನಡೆಯಿತು. ಪಕ್ಷದ ರಾಜ್ಯ ಮಟ್ಟದ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು. ರಾಹುಲ್‌ ಗಾಂಧಿ ದೆಹಲಿಯಿಂದ ವಿಳಂಬವಾಗಿ ಆಗಮಿಸಿದ್ದರಿಂದ ಸಭೆಯೂ ತಡವಾಗಿ ಆರಂಭವಾಯಿತು

Follow Us:
Download App:
  • android
  • ios