ಹುಬ್ಬಳ್ಳಿ: ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್ ಗಾಂಧಿ ಶೀಘ್ರ ಭೇಟಿ, ಡಿಕೆಶಿ
ಇನ್ನೆರಡು ದಿನಗಳಲ್ಲಿ ಖಾದಿ ಗ್ರಾಮೋದ್ಯೋಗದ ಕುರಿತು ವರಿಷ್ಠರಿಗೆ ವರದಿ: ಡಿಕೆಶಿ
ಹುಬ್ಬಳ್ಳಿ(ಜು.23): ರಾಷ್ಟ್ರಧ್ವಜವನ್ನು ಪಾಲಿಸ್ಟರ್‌ನಲ್ಲಿ ರೂಪಿಸಲು ನೀಡಿದ ಅವಕಾಶವನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾನೂನು ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಶೀಘ್ರ ದಿನಾಂಕ ತಿಳಿಸುತ್ತೇನೆ ಎಂದಿದ್ದಾರೆ. ಶುಕ್ರವಾರ ಮಧ್ಯಾಹ್ನ ಇಲ್ಲಿನ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಧ್ವಜ ತಯಾರಿಸುವ ಮಹಿಳಾ ಸಿಬ್ಬಂದಿ, ಕೇಂದ್ರದ ಕಾರ್ಯದರ್ಶಿಗಳಿಂದ ಧ್ವಜಕ್ಕೆ ಈ ಬಾರಿ ಬಂದಿರುವ ಬೇಡಿಕೆ ಕುರಿತು ವಿವರ ಪಡೆದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಡಿ ದೇಶಕ್ಕೆ ಇಲ್ಲಿಂದ ರಾಷ್ಟ್ರಧ್ವಜ ಹೋಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಪಾಲಿಸ್ಟರ್, ಸಿಂಥೆಟಿಕ್‌ನಲ್ಲಿ ಧ್ವಜ ರೂಪಿಸಲು ಅವಕಾಶ ನೀಡಲಾದ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿ ಕುರಿತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ವರದಿ ನೀಡುವಂತೆ ಸಂದೇಶ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರಿಗೆ ವರದಿ ನೀಡುತ್ತೇನೆ. ಅವರು ಇಲ್ಲಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರ ದಿನಾಂಕವನ್ನು ತಿಳಿಸುತ್ತೇವೆ ಎಂದರು.
ಪಾಲಿಸ್ಟರ್ ಧ್ವಜಕ್ಕೆ ಅವಕಾಶ: ಮಾರಾಟವಾಗದ ಧ್ವಜ ಕಾಂಗ್ರೆಸ್‌ನಿಂದ ಖರೀದಿ
ದೇಶದಲ್ಲಿ 1.60 ಕೋಟಿ ಜನರು ಖಾದಿ ಬಟ್ಟೆತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಗಾಂಧಿಯವರು ಚರಕದ ಮೂಲಕ ಸ್ವಾವಲಂಬನೆಯ ಭಾಗವಾಗಿ ಖಾದಿಯನ್ನು ಬಳುವಳಿಯಾಗಿ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಕೇಂದ್ರ ಸರ್ಕಾರಕ್ಕೆ ವರ್ಷಗಳ ಹಿಂದೆ ಅಮೃತ ಮಹೋತ್ಸವ ಬರುತ್ತದೆ ಎಂದು ಗೊತ್ತಿರಲಿಲ್ಲವೆ? ಆಗಲೆ ಇಲ್ಲಿನವರಿಗೆ ಹೆಚ್ಚುವರಿ ಧ್ವಜ ಬೇಕು ಎಂದು ಆರ್ಡರ್ ನೀಡಿದ್ದರೆ ಅಗತ್ಯದಷ್ಟುಪೂರೈಸುತ್ತಿದ್ದರು. ಕಾನೂನು ಬದಲಾವಣೆ ಮಾಡಿ ಪಾಲಿಸ್ಟರ್ ರಾಷ್ಟ್ರಧ್ವಜ ಹಾರಿಸಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಮಾಡಿರುವ ಆದೇಶವನ್ನು ಹಿಂಪಡೆಯಬೇಕು. ಮನೆ-ಮನೆಗೆ ಖಾದಿ ಧ್ವಜ ಹಾರಿಸುವಂತಾಗಬೇಕು. ಮೇಕ್ ಇನ್ ಇಂಡಿಯಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಚೀನಾ, ಇತರೆ ದೇಶಗಳಿಂದ ಬರುವ ಸಿಂಥೆಟಿಕ್, ಪಾಲಿಸ್ಟರ್ ಬಟ್ಟೆಯಲ್ಲಿ ಸೂರತ್‌ನಲ್ಲಿ ಧ್ವಜವನ್ನು ಮಷಿನ್ ಮೂಲಕ ಮಾಡಿಸುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಎಲ್ಲ ಜಿಲ್ಲೆಗಳಲ್ಲಿ ಆ.1ರಿಂದ 10ರ ವರೆಗೆ 15ಕಿಮೀ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆ. 15ರಂದು ಪಕ್ಷಾತೀತವಾಗಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ವರೆಗೆ 1ಲಕ್ಷಕ್ಕಿಂತ ಹೆಚ್ಚಿನ ಜನರು ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಯಲಿದೆ. ನ್ಯಾಷನಲ್ ಕಾಲೇಜು ಮೈದಾನವನ್ನು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಕಾರ್ಯಕ್ರಮಕ್ಕೆ ಬಂದವರಿಗೆ ಧ್ವಜ ನೀಡುತ್ತೇವೆ. ಸ್ವತಂತ್ರ ನಡಿಗೆಗಾಗಿ ಖಾದಿ ಗ್ರಾಮೋದ್ಯೋಗದಿಂದ ಆದಷ್ಟುಧ್ವಜವನ್ನು ಪಡೆಯಲಾಗುವುದು ಎಂದು ಡಿ.ಕೆ. ಶಿವಕುಮಾರ ತಿಳಿಸಿದರು.