ಚಿತ್ರದುರ್ಗ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ರಘು ಆಚಾರ್
ನನ್ನ ಎಲ್ಲಾ ನಿರೀಕ್ಷೆಗಳು ಹುಸಿಯಾಗಿ, ಪಕ್ಷದಿಂದ ಟಿಕೆಟ್ ಕೈತಪ್ಪಿದೆ. ಹೀಗಾಗಿ ನನ್ನ ಕುಟುಂಬ ವರ್ಗ, ಸ್ನೇಹಿತರು, ಹಿತೈಷಿಗಳು ಹಾಗೂ ಅಪಾರ ಬೆಂಬಲಿಗರ ಮನಸಿಗೆ ತೀವ್ರ ನೋವುಂಟಾಗಿದೆ ಎಂದ ರಘು ಆಚಾರ್.
ಚಿತ್ರದುರ್ಗ(ಏ.11): ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದ ರಘು ಆಚಾರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಈ ಸಂಬಂಧ ಸೋಮವಾರ ಎಐಸಿಸಿ ಹಾಗೂ ಕೆಪಿಸಿಸಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳಿಸಿ ಅಂಗೀಕರಿಸುವಂತೆ ಕೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದೆ. ಅಲ್ಲದೇ, ಪಕ್ಷದ ವರಿಷ್ಠರು ಹಾಗೂ ಹಿರಿಯ ನಾಯಕರು ಸೂಚಿಸಿದ್ದರಿಂದಲೇ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಅವಿರತ ಶ್ರಮವಹಿಸಿದ್ದೆ. ಆದರೆ ನನ್ನ ಎಲ್ಲಾ ನಿರೀಕ್ಷೆಗಳು ಹುಸಿಯಾಗಿ, ಪಕ್ಷದಿಂದ ಟಿಕೆಟ್ ಕೈತಪ್ಪಿದೆ. ಹೀಗಾಗಿ ನನ್ನ ಕುಟುಂಬ ವರ್ಗ, ಸ್ನೇಹಿತರು, ಹಿತೈಷಿಗಳು ಹಾಗೂ ಅಪಾರ ಬೆಂಬಲಿಗರ ಮನಸಿಗೆ ತೀವ್ರ ನೋವುಂಟಾಗಿದೆ ಎಂದರು.
ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್
ಈ ನಿಟ್ಟಿನಲ್ಲಿ ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಮಹತ್ವದ ತೀರ್ಮಾನಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.