‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರು (ಆ.06): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಸಾಕು ಮಾಡಿ ಈ ನಾಟಕ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.
ಅಧಿಕಾರ ಇದ್ದಾಗ ಹಗಲು ವೇಷ, ವಿರೋಧ ಪಕ್ಷದಲ್ಲಿದ್ದಾಗ ರೋಷಾವೇಶ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ. ನಿಮ್ಮ ದಿವಾಳಿತನಕ್ಕೆ ಸಾರಿಗೆ ನೌಕರರು ಎಷ್ಟು ದಿನ ನಷ್ಟ ಅನುಭವಿಸಬೇಕು? ನಿಮ್ಮ ದುರಾಡಳಿತಕ್ಕೆ ಜನಸಾಮಾನ್ಯರು ಯಾಕೆ ದಿನನಿತ್ಯ ಪರದಾಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಾರಿಗೆ ಸಂಸ್ಥೆಗಳು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಲಾಭದಲ್ಲಿದೆ ಎಂದು ಸುಳ್ಳು ಹೇಳಿಕೊಂಡು ಪುಟಗಟ್ಟಲೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೇ ನಿಮ್ಮ ಏಕೈಕ ಸಾಧನೆ. ಅವೈಜ್ಞಾನಿಕ ಯೋಜನೆಗಳ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿದ ಕುಖ್ಯಾತಿ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನಿಮ್ಮ ದುರಾಡಳಿತದಿಂದ ಬಸ್ ನಿಲ್ದಾಣಗಳನ್ನೂ ಲೀಸ್‌ಗಿಡುವ ಹೀನಾಯ ಸ್ಥಿತಿಗೆ ಇಂದು ಕೆಎಸ್‌ಆರ್‌ಟಿಸಿ ಸಂಸ್ಥೆ ತಲುಪಿದೆ. ನಿಮ್ಮ ಕಾರ್ಯವೈಖರಿಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಹರಿಹಾಯ್ದಿದ್ದಾರೆ.
2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಸಾರಿಗೆ ಸಂಸ್ಥೆಗಳಲ್ಲಿ ಒಂದು ಸಾವಿರ ಕೋಟಿ ರು.ಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಸಾರಿಗೆ ನಿಗಮಗಳಲ್ಲಿ 25 ಸಾವಿರ ಜನರಿಗೆ ಕಾಯಂ ಉದ್ಯೋಗ ಕೊಟ್ಟಿದ್ದೆ. ಪ್ರಯಾಣಿಕರಿಗೆ ಗುಣಮಟ್ಟದ ನಿಲ್ದಾಣ ಮತ್ತು ಬಸ್ ಸೇವೆ, ಇಂಧನ ಉಳಿತಾಯ, ಜೈವಿಕ ಇಂಧನ ಬಳಕೆ ಮತ್ತಿತರ ಕಾರ್ಯದಕ್ಷತೆ ಗಮನಿಸಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ 30ಕ್ಕೂ ಹೆಚ್ಚು ಪ್ರಶಸ್ತಿ ನೀಡಿತ್ತು ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಆಗಿದ್ದು ನಿಜ. ಆದರೆ ಬೇರೆ ರಾಜ್ಯಗಲ್ಲಿ ಸಾರಿಗೆ ನೌಕರರಿಗೆ ಸಂಬಳವೂ ಕೊಡದಿದ್ದ ಸಂದರ್ಭದಲ್ಲೂ ನಾವು ವೇತನ ಕೊಟ್ಟಿದ್ದೇವೆ. ಅದು ಕಾರ್ಮಿಕರ ಕಲ್ಯಾಣದ ಬಗ್ಗೆ ನಮ್ಮ ಪಕ್ಷದ ಬದ್ಧತೆ. ನಮ್ಮ ಪಕ್ಷವಾಗಲಿ, ನಾನಾಗಲಿ ತಮ್ಮಿಂದ ಆಡಳಿತದ ಪಾಠ ಕಲಿಯಬೇಕಿಲ್ಲ ಎಂದು ಅಶೋಕ್ ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
