ಬಿಬಿಎಂಪಿ ವಿಭಜನೆ, ಸುರಂಗ ರಸ್ತೆ ನಿರ್ಮಾಣ, ಇ-ಖಾತಾ ಸಮಸ್ಯೆ ಸೇರಿದಂತೆ ನಗರದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಹೋರಾಡುವ ಬಗ್ಗೆ ಆರ್.ಅಶೋಕ್ ಮತ್ತು ಬಿ.ವೈ.ವಿಜಯೇಂದ್ರ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಯಿತು.
ಬೆಂಗಳೂರು (ಜು.27): ಬಿಬಿಎಂಪಿ ವಿಭಜನೆ, ಸುರಂಗ ರಸ್ತೆ ನಿರ್ಮಾಣ, ಇ-ಖಾತಾ ಸಮಸ್ಯೆ ಸೇರಿದಂತೆ ನಗರದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಹೋರಾಡುವ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಗರದ ಬಿಜೆಪಿ ಶಾಸಕರ ಸಭೆಯಲ್ಲಿ ಚರ್ಚಿಸಲಾಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ವಿಭಜನೆ ಮಾಡಿದೆ. ಇದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು.
ಬೆಂಗಳೂರನ್ನು ಅತಂತ್ರವಾಗಿ ಐದು ಭಾಗ ಮಾಡಲಾಗಿದೆ. ರಾಜಕೀಯ ದೃಷ್ಟಿ ಹಾಗೂ ಕಾಂಗ್ರೆಸ್ ಗೆಲ್ಲಬೇಕೆಂಬ ಗುರಿಯಿಂದ ವಿಭಜಿಸಲಾಗಿದೆ. ಐದು ಪಾಲಿಕೆಗಳ ನಡುವೆ ತಾರತಮ್ಯ ಉಂಟಾಗಲಿದೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿ ಹೋರಾಡುತ್ತೇವೆ. ಬೆಂಗಳೂರನ್ನು ಒಡೆಯಿರಿ ಎಂದು ಜನರು ಕೇಳಿಲ್ಲ. ಈಗಾಗಲೇ ನಗರದಲ್ಲಿ ತೆರಿಗೆ, ಸೆಸ್, ಇ- ಖಾತಾದಿಂದ ಸಮಸ್ಯೆ ಉಂಟುಮಾಡಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗಿದೆ. ಅದನ್ನು ತಪ್ಪಿಸಲು ಹೀಗೆ ಭಾಗ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬ್ಲ್ಯಾಕ್ ಲಿಸ್ಟ್ ಕಂಪನಿಗೆ ಯೋಜನೆ: ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆಯನ್ನು ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್ ಕೂಡ ಇರುವುದರಿಂದ ಶ್ರೀಮಂತರು ಮಾತ್ರ ಇದನ್ನು ಬಳಸಬಹುದು. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ದುಡ್ಡು ಕೊಳ್ಳೆ ಹೊಡೆಯುವ ಯೋಜನೆಗಳನ್ನು ವಿರೋಧಿಸುತ್ತೇವೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು ಎಂದು ಹೇಳಿದರು. ಹೆಬ್ಬಾಳ ಮೇಲ್ಸೇತುವೆ ಬಳಿಯ ಜಂಕ್ಷನ್‌ಗೆ ಎಲ್ಲ ಕಡೆಯಿಂದ ವಾಹನಗಳು ಬರುತ್ತವೆ. ಅಂತಹ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ.
ಇದನ್ನು ವಿರೋಧಿಸಿ ಸದನದಲ್ಲಿ ಚರ್ಚಿಸಲಾಗುವುದು. ಇ ಖಾತಾ ವಿಚಾರದಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಹಣ ಲೂಟಿ ಮಾಡಲು ಬೆಂಗಳೂರನ್ನು ಬಳಸಬಾರದು ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟುಗಳನ್ನು ಗೆದ್ದಿರುವ ಬಗ್ಗೆ ನಮಗೂ ಅನುಮಾನವಿದೆ ಎಂದು ನಾವು ಹೇಳಬಹುದು. ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸಿನವರು ಸಾಕ್ಷಿ ಕೇಳುತ್ತಾರೆ. ಭಯೋತ್ಪಾದಕರ ಮೇಲೆ ದಾಳಿ ಮಾಡಿದಾಗಲೂ ಹೀಗೆ ಸಾಕ್ಷಿ ಕೇಳಿದ್ದರು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬೆಂಗಳೂರು ಮಹಾನಗರದ ಬಿಜೆಪಿಯ ಎಲ್ಲ ಹಿರಿಯ ಶಾಸಕರು ಒಂದೆಡೆ ಕುಳಿತು ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಗರದ ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಆಲೋಚಿಸಿಲ್ಲ. ಸುರಂಗ ರಸ್ತೆ, ಬಿಬಿಎಂಪಿಯನ್ನು ಐದು ವಿಭಾಗವಾಗಿ ಮಾಡುವ ಅವೈಜ್ಞಾನಿಕ ತೀರ್ಮಾನ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಟೀಕಿಸಿದರು.
ಬೆಂಗಳೂರು ಮಹಾನಗರವನ್ನು ಐದು ವಿಭಾಗವಾಗಿ ಮಾಡುವ ಮೂಲಕ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಮುಂಬೈ ಮತ್ತಿತರ ಮಹಾನಗರಗಳಲ್ಲಿ ಇಂತಹ ಪ್ರಯೋಗ ಮಾಡಿ ಅವೆಲ್ಲವೂ ವಿಫಲವಾಗಿವೆ. ಬಿಜೆಪಿ ಇದನ್ನು ಹಿಂದೆಯೂ ವಿರೋಧಿಸಿದ್ದು, ಮುಂದೆಯೂ ವಿರೋಧಿಸಲಿದೆ ಎಂದು ಹೇಳಿದರು. ಸುರಂಗ ರಸ್ತೆಯ ಸಾಧಕ ಬಾಧಕಗಳನ್ನು ಚರ್ಚಿಸದೆ ತರಾತುರಿಯಲ್ಲಿ ಟೆಂಡರ್ ಕರೆಯಲು ಹೊರಟಿದ್ದು ಖಂಡಿತ ಸರಿಯಲ್ಲ. ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗಳನ್ನು ಸೇರಿಸಿಕೊಂಡು ಆತುರದಿಂದ ರಾಜ್ಯ ಸರ್ಕಾರ, ಡಿ.ಕೆ.ಶಿವಕುಮಾರ್ ಟೆಂಡರ್ ಕರೆಯಲು ಹೊರಟ್ಟಿದ್ದಾರೆ. ಇದರ ಹಿಂದೆ ಅಭಿವೃದ್ಧಿಯ ಚಿಂತನೆ ಇದೆಯೇ ಅಥವಾ ಬೇರೆ ಆಲೋಚನೆಗಳಿವೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು.
