ಬೊಮ್ಮಾಯಿ ಜತೆ ಮೂವರಿಗೆ ಬಂಪರ್: ಶ್ರೀರಾಮುಲು ಕನಸು ನನಸು!
* ರಾಜ್ಯದ ನೂತನ ಮುಖ್ಯಮಂತ್ರಿ ಮೂರು ಉಪಮುಖ್ಯಮಂತ್ರಿ ಆಯ್ಕೆ
* ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮೂವರ ಹೆಸರುಗಳ ಘೋಷಣೆ
* ಬಿಎಸ್‌ವೈ ಆಪ್ತರಿಗೆ ಸಿಕ್ತು ಬಂಪರ್
ಬೆಂಗಳೂರು, (ಜು.27): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು (ಮಂಗಳವಾರ) ನಡೆದ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಇದೇ ವೇಳೆ ಮೂವರು ಉಪಮುಖ್ಯಮಂತ್ರಿಗಳ ಹೆಸರುಗಳನ್ನು ಸಹ ಘೋಷಣೆ ಮಾಡಲಾಗಿದೆ.
ನಾಯಕತ್ವ ಬದಲಾವಣೆ ಮಧ್ಯೆ ಶ್ರೀರಾಮುಲು ಕನಸು ನನಸಾಗುವ ಸಮಯ ಬಂತಾ?
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲು ನಿರ್ಧರಿಸಿದ್ದು, ಲಿಂಗಾಯಿತ ಸಿಎಂ ಆಗಿರುವುದರಿಂದ ಒಕ್ಕಲಿಗರು, ದಲಿತರು ಮತ್ತು ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಘೋಷಣೆ ಮಾಡಲಾಗಿದೆ.
ಗೋವಿಂದ ಕಾರಜೋಳ, ಅಶೋಕ್, ಬಿ. ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ತೀರ್ಮಾನಿಸಲಾಗಿದೆ. ಈ ಮೂವರು ಸಹ ಬಿಎಸ್ ಯಡಿಯೂರಪ್ಪನವರ ಆಪ್ತರು ಕೂಡ. ಈ ಮೂಲಕ ಯಡಿಯೂರಪ್ಪ ವಿರೋಧಿಗಳ ಎದುರು ಮೇಲುಗೈ ಸಾಧಿಸಿದ್ದಾರೆ.
ಆರ್. ಅಶೋಕ್ ಯಡಿಯೂರಪ್ಪ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ರೆ, ಶ್ರೀರಾಮುಲು ಅವರು ಸಮಾಜಿ ಕಲ್ಯಾಣ ಸಚಿವರಾಗಿದ್ರು. ಇನ್ನು ಗೋವಿಂದ ಕಾರಜೋಳ ಡಿಸಿಎಂ ಆಗಿದ್ದರು.
ಶ್ರೀರಾಮುಲು ಅವರಿಗೆ ಈ ಹಿಂದೆಯೇ ಹೈಕಮಾಂಡ್ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಭರವಸೆ ನೀಡಿತ್ತು. ಆದ್ರೆ, ಎರಡು ವರ್ಷ ಆದರೂ ಅದು ಈಡೇರಿರಲಿಲ್ಲ. ಆದ್ರೆ, ಇದೀಗ ಕಾಲ ಕೂಡಿಬಂದಿದ್ದು, ಶ್ರೀರಾಮುಲು ಕನಸು ನನಸಾದಂತಾಗಿದೆ.