Pay CM Posters: ಕಾಂಗ್ರೆಸ್, ಬಿಜೆಪಿ ಪೋಸ್ಟರ್ ಫೈಟ್: ಪೇ ಸಿಎಂಗೆ ಕಮಲ ಪಡೆ ಕೌಂಟರ್
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಬೆಂಗಳೂರು (ಸೆ.22): ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ಕಾಂಗ್ರೆಸ್ ಪಕ್ಷವು ‘ಪೇಟಿಎಂ’ ಕ್ಯೂ ಆರ್ ಕೋಡ್ ಲೋಗೋ ಮರು ವಿನ್ಯಾಸಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಹಾಗೂ ‘ಇಲ್ಲಿ 40 ಪರ್ಸೆಂಟ್ ಸ್ವೀಕರಿಸಲಾಗುತ್ತದೆ’ ಎಂಬ ಟ್ಯಾಗ್‌ಲೈನ್ ಹೊಂದಿರುವ ‘ಪೇ-ಸಿಎಂ’ ಪೋಸ್ಟರ್‌ಗಳನ್ನು ಬೆಂಗಳೂರು ನಗರದ ವಿವಿಧೆಡೆ ಅಂಟಿಸುವ ಮೂಲಕ ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷವು ಇದಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಅಧಿಕೃತವಾಗಿ ಹರಿಬಿಟ್ಟಿದೆ. ಆದರೆ, ಪ್ರತಿಯಾಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಬಿಂಬಿಸುವ ಪೋಸ್ಟರ್‌ಗಳನ್ನು ಬಿಜೆಪಿ ಕಾರ್ಯಕರ್ತರು ಹರಿಬಿಟ್ಟಿದ್ದಾರೆ.
ಪೇ ಸಿಎಂ ಪೋಸ್ಟರ್ ವಾರ್: ಮುಖ್ಯಮಂತ್ರಿಗಳ ನಿವಾಸವಿರುವ ಬೆಂಗಳೂರಿನ ಆರ್.ಟಿ. ನಗರ, ಮೇಖ್ರಿ ವೃತ್ತ ಹಾಗೂ ಬೆಂಗಳೂರು ಕೇಂದ್ರ ಭಾಗದಲ್ಲಿ ‘ಪೇ-ಸಿಎಂ’ ಪೋಸ್ಟರ್‌ಗಳನ್ನು ಅಂಟಿಸಿದ್ದರ ಜತೆಗೆ ರಾಜ್ಯ ಸರ್ಕಾರವು ವಿವಿಧ ಕಾಮಗಾರಿಗಳಲ್ಲಿ ಪಡೆಯುವ ಭ್ರಷ್ಟಾಚಾರದ ಪರ್ಸೆಂಟೇಜ್ ಬಗ್ಗೆ ‘ರೇಟ್ ಕಾರ್ಡ್’ ಬ್ಯಾನರ್‌ಗಳನ್ನು ಕೆಪಿಸಿಸಿ ಕಚೇರಿ ಎದುರು ಸೇರಿದಂತೆ ಹಲವು ಕಡೆಗಳಲ್ಲಿ ಜನರಿಗೆ ಕಾಣುವಂತೆ ಹಾಕಿದೆ. 40 ಪರ್ಸೆಂಟ್ ಭ್ರಷ್ಟಸರ್ಕಾರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಕಾಂಗ್ರೆಸ್ ದೂರಿದೆ. ಕಾಂಗ್ರೆಸ್‌ನ ಈ ಅಭಿಯಾನ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರಿಯಾಂಕ್ ವಿರೋಧವೇಕೆ: ಸಿಎಂ ಬೊಮ್ಮಾಯಿ
ಬಿಜೆಪಿ ಪೋಸ್ಟರ್‌ನಿಂದಲೇ ತಿರುಗೇಟು: ಕಾಂಗ್ರೆಸ್ ಪಕ್ಷದ ಈ ನಡೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸ್ ಠಾಣೆಯಲ್ಲಿ ಲಗತ್ತಿಸುವ ‘ಬೇಕಾಗಿದ್ದಾರೆ’ ಫೋಟೋ ಫಲಕದ ಮಾದರಿಯಲ್ಲಿ ‘ಬೇಡಾಗಿದ್ದಾರೆ’ ಎಂಬ ಫಲಕಗಳ ಪೋಸ್ಟರ್‌ಗಳನ್ನು ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರನ್ನು ‘ರಿಡೂ ಸಿದ್ದರಾಮಯ್ಯ’ ಎಂದು ಹಾಗೂ ಶಿವಕುಮಾರ್ ಅವರನ್ನು ‘ಇ.ಡಿ. ಡಿಕೆಶಿ’ ಎಂದು ವ್ಯಂಗ್ಯವಾಡಲಾಗಿದೆ. ಅಲ್ಲದೆ, ‘ಸಾರ್ವಜನಿಕರ ಗಮನಕ್ಕೆ.. ನಿಮ್ಮ ಹತ್ತಿರ ಇವರನ್ನು ಸುಳಿಯಲು ಬಿಡಬೇಡಿ’ ಎಂಬ ಎಚ್ಚರಿಕೆ ರೂಪದ ಸಂದೇಶವನ್ನೂ ಬರೆಯಲಾಗಿದೆ. ಅಲ್ಲದೆ, ‘ರಾಜ್ಯವನ್ನು ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕಾ್ಯನ್ ಮಾಡಿ’ ಎಂಬ ಸಾಲುಗಳೊಂದಿಗೆ ಉಭಯ ನಾಯಕರ ಫೋಟೋಗಳನ್ನು ಒಳಗೊಂಡ ಕ್ಯೂಆರ್ ಕೋಡ್ ಲೋಗೋ ಮಾದರಿಯನ್ನೂ ಸೃಷ್ಟಿಸಲಾಗಿದೆ. ಅಲ್ಲದೆ, ಬರ್ನಾಲ್ ಬ್ರದರ್ಸ್ ಎಂಬಿತ್ಯಾದಿ ಲೇವಡಿ ಮಾಡುವ ಪೋಸ್ಟ್‌ಗಳನ್ನೂ ಹರಿಬಿಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲೂ: ಇನ್ನು ರಾಜ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಜಾಲತಾಣದಲ್ಲಿ ‘ಪೇ-ಸಿಎಂ’ ಅಭಿಯಾನದಡಿ ‘420ಗಳಿಗೆ ಅಧಿಕಾರ, 40 ಪರ್ಸೆಂಟ್ ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ, ಎಲ್ಲೆಲ್ಲೂ ಲಂಚಾವತಾರ, ಸರ್ಕಾರಿ ಹುದ್ದೆಗಳ ವ್ಯಾಪಾರ, ವಿಧಾನಸೌಧದಲ್ಲಿ ಅನಾಚಾರ, ಕಾಮಗಾರಿಗಳಲ್ಲಿ ಕಾಟಾಚಾರ, ಸಿಡಿಯಲ್ಲಿ ಬಂತು ಅತ್ಯಾಚಾರ’ ಎಂದು ಟೀಕಾಪ್ರಹಾರ ನಡೆಸಿ ಸರಣಿ ಪೋಸ್ಟ್‌ಗಳನ್ನು ಹಾಕಲಾಗಿದೆ. ಜತೆಗೆ ವಿವಿಧೆಡೆ ಅಂಟಿಸಿರುವ ರೇಟ್ ಕಾರ್ಡ್ ಪಟ್ಟಿಯಲ್ಲಿ ‘ಕೊವಿಡ್ ಕಿಟ್ ಪೊರೈಕೆ 75%, ಪಿಡಬ್ಲ್ಯೂಡಿ ಒಪ್ಪಂದ 40%, ಮಠಕ್ಕೆ ಅನುದಾನ 40%, ಉಪಕರಣಗಳ ಪೂರೈಕೆ 40%’ ಮೊಟ್ಟೆಪೂರೈಕೆ 30%, ಸಹಾಯಕ ಪ್ರಾಧ್ಯಾಪಕ ನೇಮಕ 50-70 ಲಕ್ಷ ರು., ಹೀಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಲೂಟಿ’ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದೆ.
ನೆರೆ ಪರಿಹಾರಕ್ಕೆ 3600 ಕೋಟಿ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ
ನನ್ನ, ರಾಜ್ಯದ ಹೆಸರು ಕೆಡಿಸಲು ಷಡ್ಯಂತ್ರ; ತನಿಖೆಗೆ ಆದೇಶ: ಪ್ರತಿಪಕ್ಷ ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ವ್ಯವಸ್ಥಿತವಾಗಿ ನಡೆಸಿರುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ‘ಆಧಾರರಹಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಮಾಡುವುದಕ್ಕೆ ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ರಾಜ್ಯದ ಹೆಸರು ಕೆಡಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು’ ಎಂದು ಹೇಳಿದ್ದಾರೆ. ಅಲ್ಲದೆ, ‘ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದೂ ಹೇಳಿದ್ದಾರೆ.