ನೆರೆ ಪರಿಹಾರಕ್ಕೆ 3600 ಕೋಟಿ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ
ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯನ್ನು ಸರಿಪಡಿಸಲು ಒಟ್ಟು 3600 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ವಿಧಾನಸಭೆ (ಸೆ.20): ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯನ್ನು ಸರಿಪಡಿಸಲು ಒಟ್ಟು 3600 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸದನದಲ್ಲಿ ಸೋಮವಾರ ಮಳೆ ಹಾನಿ ವಿಷಯದ ಮೇಲಿನ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಅವರು, ಮಳೆಯಿಂದಾಗಿ ಉಂಟಾಗಿರುವ ಅಪಾರ ಹಾನಿ ಸರಿಪಡಿಸಲು ಈ ದೊಡ್ಡ ಮೊತ್ತದ ಅಗತ್ಯವಿದ್ದು, ಬಜೆಟ್ ಪೂರಕ ಅಂದಾಜಿನಲ್ಲಿ ಇದಕ್ಕೆ ಸದನದ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
ಈಗಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಈ ಬಾರಿ ಮಳೆಯಿಂದಾಗಿ ಒಟ್ಟು 10.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬೆಳೆ ಹಾನಿ ಸಂಬಂಧ ರೈತರಿಗೆ ಸೂಕ್ತ ಪರಿಹಾರ ಒದಗಿಸಲು 1550 ಕೋಟಿ ರು. ಅನುದಾನ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಅದೇ ರೀತಿ ಈ ವರ್ಷ 42,040ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇವುಗಳಿಗೆ ಪರಿಹಾರ ಒದಗಿಸಲು ಅಂದಾಜು 850 ಕೋಟಿ ರು. ಅಗತ್ಯವಿದೆ ಎಂದರು. ಜೊತೆಗೆ ಹಾಳಾಗಿರುವ ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ದುರಸ್ತಿ ಕಾರ್ಯಕ್ಕೆ 1200 ಕೋಟಿ ರು. ಬೇಕೆಂದು ಅಂದಾಜು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರಿಯಾಂಕ್ ವಿರೋಧವೇಕೆ: ಸಿಎಂ ಬೊಮ್ಮಾಯಿ
ಒಟ್ಟಾರೆ ಮಳೆ ಹಾನಿ ಪರಿಹಾರ ಕಾರ್ಯಕ್ಕೆ 3600 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಅಗತ್ಯವಿದ್ದು, ಈ ಸಂಬಂಧ ಸದನದಲ್ಲಿ ಪೂರಕ ಅಂದಾಜು ಮಂಡಿಸಿ ಒಪ್ಪಿಗೆ ಪಡೆದು ಹಣ ಬಿಡುಗಡೆ ಮಾಡುತ್ತೇನೆ. ಜೊತೆಗೆ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ 1645 ಕೋಟಿ ರು.ಗಳನ್ನು ರಾಜ್ಯಕ್ಕೆ ಮಳೆಹಾನಿ ಪರಿಹಾರವಾಗಿ ಪಡೆಯುತ್ತೇವೆ ಎಂದು ತಿಳಿಸಿದರು. ಈ ಮಧ್ಯೆ, ಈಗಾಗಲೇ ಬೆಳೆ ಹಾನಿ ಪರಿಹಾರಕ್ಕೆ ಮೊದಲ ಹಂತದಲ್ಲಿ 3.25 ಲಕ್ಷಕ್ಕೂ ಹೆಚ್ಚು ರೈತರಿಗೆ 377 ಕೋಟಿ ರು.ಗಳನ್ನು ನೇರ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ನೀರು ನುಗ್ಗಿರುವ ಮನೆಗಳಿಗೆ ತಲಾ 10 ಸಾವಿರ ರು., ಭಾಗಶಃ ಹಾಗೂ ಪೂರ್ಣ ಹಾನಿಯಾಗಿರುವ ಮನೆಗಳ ಪರಿಹಾರಕ್ಕೆ ಮೊದಲ ಹಂತವಾಗಿ 196 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ.
ಮೂಲ ಸೌಕರ್ಯಗಳ ಹಾನಿ ಸರಿಪಡಿಸಲು ಗ್ರಾಮೀಣ ಭಾಗಕ್ಕೆ ಈಗಾಗಲೇ 500 ಕೋಟಿ ರು. ಬಿಡುಗಡೆ ಮಾಡಿದ್ದೇವೆ. ಇನ್ನೂ 600 ಕೋಟಿ ರು.ಗಳನ್ನು ವಿವಿಧ ಇಲಾಖೆಗಳಿಂದ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಮಳೆ ಹಾನಿಯಾದ ಒಂದೂವರೆ ತಿಂಗಳಲ್ಲೇ ನಮ್ಮ ಸರ್ಕಾರ ಪರಿಹಾರ ನೀಡಿದೆ. ಮಳೆಯಿಂದ ಹೆಚ್ಚಿನ ಹಾನಿಯಾಗದಂತೆ ಜಲಾಶಯಗಳನ್ನು ಸಮರ್ಥವಾಗಿ ನಮ್ಮ ಅಧಿಕಾರಿಗಳು ನಿರ್ವಹಿಸಿದ್ದಾರೆ. ಇದರ ಜೊತೆಗೆ 2019-20ರಿಂದ 2021-22ರವರೆಗೆ ಮೂರು ವರ್ಷಗಳಲ್ಲಿ ಮಳೆಹಾನಿಗೊಳಗಾಗಿರುವ ಮನೆಗಳಿಗೆ ಇದುವರೆಗೆ 3104 ಕೋಟಿ ರು. ಬಿಡುಗಡೆ ಮಾಡಿದ್ದು, ಬಾಕಿ ಇರುವ ಪರಿಹಾರ ನೀಡಲು ಇನ್ನೂ 1527 ಕೋಟಿ ರು.ಗಳು ಬೇಕು. ಇದೆಲ್ಲದಕ್ಕೂ ಪೂರಕ ಅಂದಾಜಿನಲ್ಲಿ ಒಪ್ಪಿಗೆ ಪಡೆದು ಮಳೆ ಹಾನಿ ಪರಿಹಾರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದರು.
ಗುಡ್ಡ ಕುಸಿತ ಮತ್ತು ಕಡಲ್ಕೊರೆತ ತಡೆಗೆ ಹೊಸ ವಿಧಾನ: ಕಳೆದ ಎರಡು ವರ್ಷಗಳಿಂದ ಕರಾವಳಿ ಭಾಗದಲ್ಲಿ ಗುಡ್ಡಕುಸಿತ ಮತ್ತು ಕಡಲ್ಕೊರೆತ ಹೆಚ್ಚಾಗಿದೆ. ಇದನ್ನು ತಡೆಯಲು ಹೊಸ ವಿಧಾನಗಳನ್ನು ಅನುಸರಿಸಲಾಗುವುದು. ಕೆಲವೆಡೆ ಗುಡ್ಡಗಳನ್ನು ಅರ್ಧ ಅಗೆದು ಮೈನಿಂಗ್ ಮಾಡಿರುವೆಡೆ ಕುಸಿತ ಹೆಚ್ಚಾಗಿದೆ. ಇದರಿಂದ ಆ ಗುಡ್ಡದ ಕೆಳಗಿರುವ ಊರು, ಮನೆಗಳಿಗೂ ಸಮಸ್ಯೆಯಾಗುತ್ತಿದೆ. ಇದನ್ನು ಯಾವ ರೀತಿ ತಡೆಯಬಹುದು ಎಂದು ಕೆಲ ಸಂಸ್ಥೆಗಳಿಂದ ವರದಿ ಪಡೆದಿದ್ದೇವೆ. ಅದನ್ನು ಅನುಷ್ಠಾನಗೊಳಿಸಲಾಗುವುದು. ಅದೇ ರೀತಿ ‘ಸೀವೇವ್ ಬ್ರೇಕರ್’ ತಂತ್ರಜ್ಞಾನ ಬಳಸಿ ಹೊಸ ವಿಧಾನದ ಮೂಲಕ ಕಡಲ ಕೊರತೆ ತಡೆಯಲು ಉಳ್ಳಾಲದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ. ಇದು ಯಶಸ್ವಿಯಾದರೆ ಎಲ್ಲ ಕಡೆ ಈ ವಿಧಾನ ವಿಸ್ತರಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಅನುದಾನ: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು ಕೆರೆಗಳ ಬಗ್ಗೆ ಭಾರಿ ಜಟಾಪಟಿ: ಬೆಂಗಳೂರಿನ ಕೆರೆಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಭರ್ಜರಿ ವಾಕ್ಸಮರ ನಡೆದಿದೆ. ಬೆಂಗಳೂರಿನಲ್ಲಿ 1963ರಿಂದ 2004ರವರೆಗೆ ಒಟ್ಟು 42 ಕೆರೆಗಳನ್ನು ಮುಚ್ಚಲಾಗಿದೆ. ಬಹುತೇಕ ಕೆರೆಗಳು ಕಾಂಗ್ರೆಸ್ ಅವಧಿಯಲ್ಲಿ ಮುಚ್ಚಲ್ಪಟ್ಟಿವೆ ಎಂದು ಸಚಿವ ಅಶೋಕ್ ಹೇಳಿದ್ದು ಜಟಾಪಟಿಗೆ ಕಾರಣವಾಯಿತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಯಾರ ಅವಧಿಯಲ್ಲಿ ಎಷ್ಟುಕೆರೆ ಮುಚ್ಚಲಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.