ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ‘ಪುತ್ತಿಲ ಹೊಡೆತ’: ಕಾಂಗ್ರೆಸ್ಗೆ ಮತ್ತೆ ಗೆಲುವು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ‘ಪುತ್ತಿಲ ಪರಿವಾರ’ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿಗೆ ಟಕ್ಕರ್ ನೀಡಿದೆ.
ಮಂಗಳೂರು (ಜು.27): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ‘ಪುತ್ತಿಲ ಪರಿವಾರ’ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿಗೆ ಟಕ್ಕರ್ ನೀಡಿದೆ. ಇಲ್ಲಿನ ಎರಡು ಗ್ರಾಮ ಪಂಚಾಯ್ತಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದರಲ್ಲಿ ಮೊದಲ ಗೆಲುವು ದಾಖಲಿಸಿದೆ, ಇನ್ನೊಂದರಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದೇ ವೇಳೆ, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ನೂಕಿದೆ. ಗ್ರಾಮ ಪಂಚಾಯ್ತಿ ಉಪ ಚುನಾವಣೆಯಲ್ಲಿ ಚೊಚ್ಚಲ ಗೆಲುವು ಪಡೆಯುವ ಮೂಲಕ ಪುತ್ತಿಲ ಪರಿವಾರ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಸಿಂಹ ಸ್ವಪ್ನವಾಗುವ ಎಲ್ಲ ಸಾಮರ್ಥ್ಯವನ್ನೂ ತೋರಿಸಿದೆ.
ನಿಡ್ಪಳ್ಳಿ ಒಂದನೇ ವಾರ್ಡ್ ಸದಸ್ಯ ಮುರಳಿಕೃಷ್ಣ ಹಾಗೂ ಆರ್ಯಾಪು ಎರಡನೇ ವಾರ್ಡ್ ಸದಸ್ಯ ರುಕ್ಮ ನಾಯ್ಕ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಇಲ್ಲಿ ಉಪ ಚುನಾವಣೆ ನಡೆದಿತ್ತು. ಇವರಿಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರು. ಈಗ ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸತೀಶ್ ರೈ ನೆಲ್ಲಿಕಟ್ಟೆಹಾಗೂ ಆರ್ಯಾಪಿನಲ್ಲಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಗೆದ್ದಿದ್ದಾರೆ. ಆರ್ಯಾಪಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದು, ದೊಡ್ಡಡ್ಕ ಅವರು 146 ಮತಗಳ ಅಂತರದಿಂದ ಗೆದ್ದಿದ್ದಾರೆ. ನಿಡ್ಪಳ್ಳಿಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ 2ನೇ ಸ್ಥಾನ ಪಡೆದಿದ್ದಾರೆ.
ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್: ಸಚಿವ ದಿನೇಶ್ ಗುಂಡೂರಾವ್
ಅಸೆಂಬ್ಲಿ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಸೋತು ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಅರುಣ್ ಕುಮಾರ್ ಪುತ್ತಿಲ ಅವರ ವಿರೋಚಿತ ಸೋಲು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿತ್ತು. ಈಗ ಗ್ರಾಮ ಪಂಚಾಯ್ತಿ ಉಪ ಚುನಾವಣೆಯಲ್ಲೂ ಬಿಜೆಪಿ ತನ್ನಲ್ಲಿದ್ದ ಎರಡು ಸ್ಥಾನವನ್ನು ಕಳಕೊಂಡಿದ್ದಲ್ಲದೆ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿಯ ಹಲವು ಮುಖಂಡರು ಇಲ್ಲಿ ಪ್ರಚಾರ ನಡೆಸಿದ್ದರು. ಸಂಘಪರಿವಾರ ಕೂಡ ಅಖಾಡಕ್ಕೆ ಇಳಿದಿತ್ತು. ಆದರೂ, ಬಿಜೆಪಿ ಸೋತಿದೆ.
ಇಲ್ಲಿವರೆಗೆ ನಿಡ್ಪಳ್ಳಿ ಗ್ರಾ.ಪಂ.ಆಡಳಿತ ಬಿಜೆಪಿ ಬೆಂಬಲಿಗರ ತೆಕ್ಕೆಯಲ್ಲಿತ್ತು. ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದ್ದರೂ ಬಿಜೆಪಿ ಬೆಂಬಲಿತ ಇನ್ನೋರ್ವ ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್ ಬೆಂಬಲಿತರು ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಆರ್ಯಾಪು ಗ್ರಾ.ಪಂ.ನಲ್ಲಿ ಪುತ್ತಿಲ ಪರಿವಾರ ಗೆದ್ದರೂ ಬಿಜೆಪಿ ಬೆಂಬಲಿತರ ಆಡಳಿತಕ್ಕೆ ತೊಂದರೆಯಾಗಿಲ್ಲ.
ಈ ಮಧ್ಯೆ, ಶೀಘ್ರವೇ ನಡೆಯುವ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿಯ ಆಯ್ಕೆ ಚುನಾವಣೆಯಲ್ಲೂ ಪುತ್ತಿಲ ಪರಿವಾರ ತನ್ನ ಬೆಂಬಲಿಗರನ್ನು ಗೆಲ್ಲಿಸಲು ಚಿಂತನೆ ನಡೆಸಿದೆ. ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯ್ತಿಗಳ ಪೈಕಿ ನಾಲ್ಕೈದು ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಪುತ್ತಿಲ ಪರಿವಾರವನ್ನು ಬೆಂಬಲಿಸುವ ಸದಸ್ಯರಿದ್ದಾರೆ. ಉಳಿದ ಪಂಚಾಯ್ತಿಗಳ ಬಲಾಬಲ ನೋಡಿಕೊಂಡು ಪಂಚಾಯ್ತಿ ಆಡಳಿತವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪುತ್ತಿಲ ಪರಿವಾರ ಯೋಜನೆ ರೂಪಿಸುತ್ತಿದೆ.
ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣವೂ ನಡೆದಿಲ್ಲ, ತನಿಖೆಯೂ ಇಲ್ಲ: ಶಾಸಕ ನಂಜೇಗೌಡ
ರಾಜ್ಯಕ್ಕೂ ವಿಸ್ತರಣೆ: ಬಳಿಕ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರವನ್ನು ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು. ರಾಜ್ಯದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಮಾದರಿ ಆಡಳಿತ ಇರಬೇಕು ಎಂಬುದು ಪರಿವಾರದ ಆಶಯ. ಇದಕ್ಕೆ ಮತದಾರರೂ ಬೆಂಬಲಿಸಿದ್ದಾರೆ. ಸ್ವಾಮೀಜಿಗಳು ಹಾಗೂ ಸಂಘಟನೆಯಲ್ಲಿ ದುಡಿಯುವ ಪದಾಧಿಕಾರಿಗಳು ನಮ್ಮ ಜೊತೆಗಿದ್ದಾರೆ. ಎಲ್ಲರ ಆಶಯದಂತೆ ಪರಿವಾರವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುವುದು. ಎರಡು ರಾಷ್ಟ್ರೀಯ ಪಕ್ಷಗಳ ಬೆಂಬಲಿತರ ನಡುವೆ ಆರ್ಯಾಪುವಿನಲ್ಲಿ ಗೆಲುವು ಹಾಗೂ ನಿಡ್ಪಳ್ಳಿಯಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದೇವೆ. ನಾನು ಯಾವುದೇ ಪಕ್ಷದ ವಿರುದ್ಧ ಹೇಳಿಕೆ ನೀಡುವುದಿಲ್ಲ. ಆದರೆ, ಧರ್ಮಾಧಾರಿತ ಹಾಗೂ ಕಾರ್ಯಕರ್ತರ ಅಪೇಕ್ಷೆಯೊಂದಿಗೆ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.