ಸೋನಿಯಾ ಗಾಂಧಿ ಕೂಡ ಬೆಂಗಳೂರಲ್ಲಿ, ಆನೇಕಲ್‌ನಲ್ಲಿ ಮಧ್ಯಾಹ್ನ 3.45ಕ್ಕೆ ರಾಹುಲ್ ಪ್ರಚಾರ, ಬಳಿಕ ಪುಲಕೇಶಿನಗರ, ಶಿವಾಜಿ ನಗರದಲ್ಲೂ ಪ್ರಚಾರ, ಮೂಡಬಿದಿರೆಯಲ್ಲಿ ಪ್ರಿಯಾಂಕಾ ಗಾಂಧಿ ಸಮಾವೇಶ, ಬಳಿಕ ಬೆಂಗಳೂರಿನ ಮಹದೇವಪುರದಲ್ಲಿ ರೋಡ್ ಶೋ.
ಬೆಂಗಳೂರು(ಮೇ.07): ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಇಂದು(ಭಾನುವಾರ) ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ನಗರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಲಿದ್ದಾರೆ. ಪ್ರಿಯಾಂಕ ರೋಡ್ ಶೋ ನಡೆಸಿದರೆ ರಾಹುಲ್ ಸಾರ್ವಜನಿಕ ಸಮಾವೇಶದ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಭಾನುವಾರ ಬೆಂಗಳೂರಿನಲ್ಲೇ ಇರಲಿದ್ದಾರೆ. ಆದರೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೇ ಎಂಬುದು ಖಚಿತವಾಗಿಲ್ಲ.
ರಾಹುಲ್ ರೋಡ್ ಶೋ ಇಲ್ಲ:
‘ರಾಹುಲ್ ಗಾಂಧಿ ಅವರು ಮೇ 7 ಮತ್ತು 8ರಂದು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ರೋಡ್ ಶೋ ನಡೆಸುತ್ತಿಲ್ಲ. ಬದಲಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೇ 7ರಂದು ಮಧ್ಯಾಹ್ನ 3.45 ಗಂಟೆಗೆ ಆನೇಕಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!
ಬಳಿಕ ಸಂಜೆ 6 ಗಂಟೆಗೆ ಪುಲಕೇಶಿನಗರದಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡಲಿದ್ದಾರೆ. ರಾತ್ರಿ 9 ಗಂಟೆಗೆ ಶಿವಾಜಿನಗರದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಭಾನುವಾರ ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಪ್ರಿಯಾಂಕ ಗಾಂಧಿ ರೋಡ್ ಶೋ:
ಭಾನುವಾರ ಬೆಂಗಳೂರಿನ ವಿವಿದೆಡೆ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಮೊದಲಿಗೆ ಮೂಡಬಿದಿರೆಯಲ್ಲಿ ಸಮಾವೇಶ ನಡೆಸಲಿರುವ ಅವರು ಸಂಜೆ 5.30 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ ಮಹದೇವಪುರ ಕ್ಷೇತ್ರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಶಿವಾಜಿನಗರ ಕ್ಷೇತ್ರದಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
