Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಕೊಪ್ಪಳದಿಂದ ಸ್ಪರ್ಧೆ?

ಸ್ಥಳೀಯ ಕಾಂಗ್ರೆಸ್ ಘಟಕಕ್ಕೆ ತಿಳಿಸದೆ ಎಐಸಿಸಿ, ಈಗಾಗಲೇ ಕೊಪ್ಪಳ ಕ್ಷೇತ್ರದಲ್ಲಿ ಸಮೀಕ್ಷೆಗಳನ್ನು ನಡೆಸಿದೆ ಮತ್ತು ತೆಲಂಗಾಣದ ಮತ್ತೊಂದು ಸ್ಥಾನದಿಂದ ಪ್ರಿಯಾಂಕಾರನ್ನು ಕಣಕ್ಕಿಳಿಸಲು ಪರಿಗಣಿಸುತ್ತಿದೆ’ ಎಂದು ವರದಿಯಾಗಿದೆ.

Priyanka Gandhi Likely Contest to Koppal in Lok Sabha Elections 2024 grg
Author
First Published Jan 14, 2024, 7:18 AM IST

ನವದೆಹಲಿ(ಜ.14):  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಮತ್ತೆ ದಟ್ಟವಾದ ವದಂತಿ ಹರಡಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕದ ಕೊಪ್ಪಳದಲ್ಲಿ ಅಥವಾ ತೆಲಂಗಾಣದ ಯಾವುದಾದರೂ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಸ್ಥಳೀಯ ಕಾಂಗ್ರೆಸ್ ಘಟಕಕ್ಕೆ ತಿಳಿಸದೆ ಎಐಸಿಸಿ, ಈಗಾಗಲೇ ಕೊಪ್ಪಳ ಕ್ಷೇತ್ರದಲ್ಲಿ ಸಮೀಕ್ಷೆಗಳನ್ನು ನಡೆಸಿದೆ ಮತ್ತು ತೆಲಂಗಾಣದ ಮತ್ತೊಂದು ಸ್ಥಾನದಿಂದ ಪ್ರಿಯಾಂಕಾರನ್ನು ಕಣಕ್ಕಿಳಿಸಲು ಪರಿಗಣಿಸುತ್ತಿದೆ’ ಎಂದು ವರದಿಯಾಗಿದೆ. ‘ಕೊಪ್ಪಳ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಾಂಗ್ರೆಸ್‌ ಹಿಡಿತದಲ್ಲಿವೆ. ಎಐಸಿಸಿ ಕೈಗೊಂಡಿರುವ ಸಮೀಕ್ಷೆಯು ಪ್ರಿಯಾಂಕಾಗೆ ಸುರಕ್ಷಿತ ಕ್ಷೇತ್ರವಿದು ಎಂದು ಸೂಚಿಸಿದೆ’ ಎಂದು ಮೂಲಗಳು ಹೇಳಿವೆ. ಸದ್ಯ ಕೊಪ್ಪಳ ಕ್ಷೇತ್ರವನ್ನು ಬಿಜೆಪಿಯ ಕರಡಿ ಸಂಗಣ್ಣ ಪ್ರತಿನಿಧಿಸುತ್ತಿದ್ದಾರೆ.

ದೇಶದಲ್ಲಿ ಕಾಂಗ್ರೆಸ್‌ನಿಂದ 60 ವರ್ಷ ದುರಾಡಳಿತ: ಸಂಸದ ಸಂಗಣ್ಣ ಕರಡಿ

‘ಪ್ರಿಯಾಂಕಾ ಕರ್ನಾಟಕದಿಂದ ಸ್ಪರ್ಧಿಸಿದರೆ, ಅದು ಕಾಂಗ್ರೆಸ್‌ಗೆ ರಾಜ್ಯಾದ್ಯಂತ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ಬಿಜೆಪಿಯನ್ನು ಎದುರಿಸಲು ಕಾರ್ಯಕರ್ತರನ್ನು ಉತ್ತೇಜಿಸುತ್ತದೆ ಎಂಬುದು ಪಕ್ಷದ ನಾಯಕರ ಅನಿಸಿಕೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಉತ್ತರ-ದಕ್ಷಿಣ ಗೊಂದಲ: ಆದರೆ ಪ್ರಿಯಾಂಕಾ ಸೋದರ ರಾಹುಲ್‌ ಗಾಂಧಿ ಕೂಡ ದಕ್ಷಿಣದ ಅಂದರೆ ಕೇರಳದ ಸಂಸದರಾಗಿದ್ದಾರೆ. ಅವರೂ ಈ ಸಲ ಅಲ್ಲಿಂದಲೇ ಸ್ಪರ್ಧಿಸಿದರೆ ಗಾಂಧಿ ಕುಟುಂಬದ ಯಾರೂ ಉತ್ತರ ಭಾರತದಿಂದ ಕಣಕ್ಕಿಳಿದಂತಾಗುವುದಿಲ್ಲ. ಹೀಗಾಗಿ ಗಾಂಧಿ ಕುಟುಂಬದ ಮೂಲ ನೆಲೆಯಾದ ಉತ್ತರ ಪ್ರದೇಶ ಸೇರಿ ಅನೇಕ ಕಡೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕವೂ ಕಾಂಗ್ರೆಸ್‌ ನಾಯಕರಲ್ಲಿದೆ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ವರದಿಗಳು ಹೇಳಿವೆ.

ತಾಯಿ ಸೋನಿಯಾ ಈ ಸಲ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಉತ್ತರ ಪ್ರದೇಶದ ಸಾಂಪ್ರದಾಯಿಕ ರಾಯ್‌ಬರೇಲಿಯಿಂದ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಅಲ್ಲಿಂದಲೂ ಪ್ರಿಯಾಂಕಾ ಅಥವಾ ರಾಹುಲ್‌ ಕಣಕ್ಕಿಳಿಯಬಹುದು ಎಂಬ ಊಹಾಪೋಹವೂ ಇದೆ.

ಬಿಜೆಪಿಯವ್ರು ರಾಮಮಂದಿರ ಜಪ ಮಾಡುವ ಮೊದಲು ಜನರಿಗೆ ಅನ್ನ ನೀಡಲಿ: ಸಚಿವ ತಂಗಡಗಿ ಆಕ್ರೋಶ

ಇತ್ತೀಚೆಗೆ ಪ್ರಿಯಾಂಕಾರನ್ನು ಉತ್ತರ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಹುದ್ದೆಯಿಂದ ಹಿಂಪಡೆಯಲಾಗಿತ್ತು. ಅದು ಪ್ರಿಯಾಂಕಾರನ್ನು ಲೋಕಸಭೆ ಚುನಾವಣೆಗೆ ತಯಾರು ಮಾಡುವ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿತ್ತು. ಆಗ ಕೆಲವರು ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ತಮ್ಮ ಮೊದಲ ಚುನಾವಣೆಯಲ್ಲೇ ಇಂಥ ರಿಸ್ಕ್‌ ತೆಗೆದುಕೊಳ್ಳಲು ಪ್ರಿಯಾಂಕಾ ಸಿದ್ಧರಿಲ್ಲ ಎಂದು ಇತ್ತೀಚೆಗೆ ವರದಿಯಾಗಿತ್ತು.

ಗಾಂಧಿ ಕುಟುಂಬಕ್ಕೆ ಕರ್ನಾಟಕ ನಂಟು:

ಗಾಂಧಿ ಕುಟುಂಬಕ್ಕೂ ಕರ್ನಾಟಕಕ್ಕೂ ಹಳೆಯ ನಂಟಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1978ರಲ್ಲಿ ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ರಾಜಕೀಯ ಪುನರ್ಜನ್ಮ ಪಡೆದಿದ್ದರು.
ಇನ್ನು ಸೋನಿಯಾ ಗಾಂಧಿ ಅವರು 1999ರಲ್ಲಿ ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದ ದಿ. ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರು. ಈ ಹಿಂದೆ, ರಾಜ್ಯ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಯಾರಾದರೂ ಕರ್ನಾಟಕದಿಂದ ಸ್ಪರ್ಧಿಸಬೇಕು ಅದು ಪಕ್ಷಕ್ಕೆ ಲಾಭದಾಯಕ ಎಂದು ಹೇಳಿದ್ದರು.

Follow Us:
Download App:
  • android
  • ios