ಆರ್‌ಎಸ್‌ಎಸ್ ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ದೆವು. ಕೈಕಾಲು ಹಿಡಿದು ವಾಪಸ್ ಬಂದರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯುವ RSS ಆಗ್ರಹವನ್ನು ಖಂಡಿಸಿದರು
ಬೆಂಗಳೂರು (ಜೂ.30): ನಾವು ಈ ಹಿಂದೆ ಆರ್‌ಎಸ್‌ಎಸ್ ಅನ್ನು 2 ಬಾರಿ ಬ್ಯಾನ್ ಮಾಡಿದ್ದೆವು. ಅಮೇಲೆ ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆಗ ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವ ತೀರ್ಮಾನ ಮಾಡುತ್ತೇವೆ ಎಂದು ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡ ಹೊಸಬಾಳೆ ಅವರು ಆಗ್ರಹ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಹೊಸಬಾಳೆ ಅವರು ಯಾವ ಸ್ಕೂಲ್ ಆಫ್ ಥಾಟ್ ಇಂದ ಬರ್ತಾರೆ. ಆರ್‌ಎಸ್‌ಎಸ್ ಹಿನ್ನಲೆಯಿಂದ ಬರುತ್ತಾರೆ. ಆರ್‌ಎಸ್‌ಎಸ್‌ನಲ್ಲಿ ಜಾತ್ಯಾತೀತೆ, ಸಮಾನತೆ, ಸಮಾಜವಾದಿ ಬಗ್ಗೆ ಅಲರ್ಜಿ ಇದೆ. ಆ ಸಂಸ್ಥೆ ಹುಟ್ಟಿದಾಗಿನಿಂದ ಸಂವಿಧಾನ, ಸಮಾನತೆ, ಆರ್ಥಿಕ ಸಮಾನತೆ ಬಗ್ಗೆ ಅಲರ್ಜಿ ಇದೆ. ಈಗ ಅದನ್ನ ಪುನರ್ ಉಚ್ಚಾರ ಮಾಡ್ತಿದ್ದಾರೆ. ಆರ್‌ಎಸ್‌ಎಸ್ ಸಿದ್ದಾಂತವನ್ನ ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡ್ತೀವಿ ಎಂದರು.
ಈ ಹಿಂದೆ ನಾವು ಎರಡು ಬಾರಿ ಆರ್‌ಎಸ್‌ಎಸ್ ಅವರನ್ನ ಬ್ಯಾನ್ ಮಾಡಿದ್ದೆವು. ಅಮೇಲೆ ಅವರು ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆದರೆ, ಆಗ ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ RSS ಬ್ಯಾನ್ ಮಾಡೋ ಬಗ್ಗೆ ನೋಡೋಣ ಎಂದು ಹೇಳಿದರು. ಈ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಸಂವಿಧಾನದಲ್ಲಿ ಸೇರಿಸಲಾಗಿರುವ ಜಾತ್ಯಾತೀತ ಪದದಲ್ಲಿ ಏನ್ ತಪ್ಪಿದೆ.? ಸಮಾಜವಾದದಲ್ಲಿ ಏನ್ ತಪ್ಪಿದೆ? ಇವರಿಗೆ ಯಾಕೆ ಈ ಪದಗಳ ಮೇಲೆ ಅಲರ್ಜಿ. ಇವರ ಸಿದ್ದಾಂತದಲ್ಲಿ ಒಂದೇ ಧರ್ಮ ಇರಬೇಕು. ಅವರೊಬ್ಬರೇ ಇರಬೇಕು. ಆದರೆ, ನಾವು ಸಂವಿಧಾನ ಎತ್ತಿ ಹಿಡಿಯೋ ಕೆಲಸ ಮಾಡುತ್ತೇವೆ. ಅಂಬೇಡ್ಕರ್ ಏನ್ ಹೇಳಿದ್ದಾರೆ ಎನ್ನುವುದನ್ನು ಆರ್‌ಎಸ್‌ಎಸ್‌ನವರು ಓದಲಿ. ಕಾಲ ಕಾಲಕ್ಕೆ ಜನರ ಆಶಯಕ್ಕೆ ತಕ್ಕಂತೆ ಬದಲಾವಣೆ ಅವಶ್ಯಕತೆ ಅಂತ ಹೇಳಿದ್ದಾರೆ.
ಸಂವಿಧಾನ ಲಿವಿಂಗ್ ಡಾಕ್ಯುಮೆಂಟ್ ಆಗಿದೆ. ಸಂವಿಧಾನದ ಅರಿವು ಇವರಿಗೆ ಇದೆಯಾ? ಇವರು 370 ತೆಗೆದು ಹಾಕಿದರು. ಅದು ಸಂವಿಧಾನದಲ್ಲಿ ಇತ್ತಾ ಆಗ? ಈಗ ತಿದ್ದುಪಡಿ ತಂದು ಮಾಡಿದ್ದರು. 371j ಇರಲಿಲ್ಲ. ತಿದ್ದುಪಡಿ ಮಾಡಿ ತಂದಿದ್ದೇವೆ. ಆರ್‌ಎಸ್‌ಎಸ್ ನವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ, ಅವರ ಸ್ವಂತ ಇತಿಹಾಸ ಸೃಷ್ಟಿ ಮಾಡೋಕೆ ಹೊರಟಿದ್ದಾರೆ. ಅದಕ್ಕೆ ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಏನೇನೋ ಬರೆಯುತ್ತಾರೆ. ಇವರು ಮೊದಲು ಅಂಬೇಡ್ಕರ್ ಬಗ್ಗೆ ಓದುಕೊಳ್ಳಲಿ ಎಂದರು.
ಆರ್‌ಎಸ್‌ಎಸ್ ಸಂಘಟನೆಯವರು ಮೊದಲಿನಿಂದಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧಿಗಳು. ಈ ಬಗ್ಗೆ ಸದನದಲ್ಲಿ ಚರ್ಚೆಯನ್ನೂ ಮಾಡಿದ್ದರು. ಈ ಬಗ್ಗೆ ನಾನು ಬಿಜೆಪಿಯವರಿಗೆ ದಾಖಲೆಯನ್ನೂ ಕೊಟ್ಟೆ. ಆದರೆ ಅವರು ರಾಜೀನಾಮೆ ಕೊಡಲಿಲ್ಲ. ನಾಯಿತರಹ ಬೊಗಳುತ್ತಾರೆ ಅಂತ ವಿಷಯ ಡೈವರ್ಟ್ ಮಾಡುತ್ತಾರೆ. ಮೊದಲು ಇವರು ಸಂವಿಧಾನ ಓದಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
