ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದು ಪಂಚಾಯತ್ ರಾಜ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
ಕಲಬುರಗಿ (ನ.25): ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾದರೂ ವಾಸ್ತವದಲ್ಲಿ ಕರ್ನಾಟಕದ ಮಟ್ಟಿಗೆ ಕೇಂದ್ರ ತಿರಸ್ಕೃತ ಯೋಜನೆಯಾಗಿದೆ ಎನ್ನಬಹುದು. ಬಿಜೆಪಿಯ ಕೇಂದ್ರ ಸರ್ಕಾರದ ಕರ್ನಾಟಕದೆಡೆಗಿನ ಮಲತಾಯಿ ಧೋರಣೆ ಹೇಗಿದೆ ಎಂದು ನೋಡುವುದಾದರೆ 2024-25ನೇ ಆರ್ಥಿಕ ಸಾಲಿನಲ್ಲಿ JJM ಯೋಜನೆಗಾಗಿ ₹3,804,41 ಕೋಟಿಯನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿತ್ತು.
ಆದರೆ, ಬಿಡುಗಡೆಯಾದ ಮೊತ್ತ ಕೇವಲ ₹570,66 ಕೋಟಿ ಮಾತ್ರ. ಯೋಜನೆಯ ಜಾರಿಗಾಗಿ ರಾಜ್ಯ ಸರ್ಕಾರವೇ ಆಸಕ್ತಿವಹಿಸಿ ಹಣ ಖರ್ಚು ಮಾಡಿದೆ, ಆದರೆ, ಕೇಂದ್ರ ಸರ್ಕಾರದ ಅನ್ಯಾಯ ಮಾತ್ರ ಮುಂದುವರೆದೇ ಇದೆ. ಈ ಹಿಂದೆಯೂ ಜಲ್ ಜೀವನ ಮಿಶನ್ (JJM) ಯೋಜನೆಯ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒತ್ತಾಯಿಸಿದ್ದರು, ಈಗಲೂ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಇಂತಹ ಅನ್ಯಾಯಗಳಿಂದ, ನಿರ್ಲಕ್ಷ್ಯದಿಂದ, ಕರ್ನಾಟಕದೆಡೆಗಿನ ದ್ವೇಷದಿಂದ ರಾಜ್ಯದ ಆರ್ಥಿಕ ಪ್ರಗತಿಗೆ ಪೆಟ್ಟು ಬೀಳುತ್ತಿದ್ದರೂ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರು ಕರ್ನಾಟಕದ ಪರವಾಗಿ ಧ್ವನಿ ಎತ್ತುವ, ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡದಿರುವುದು ಬಿಜೆಪಿಯ ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದಿದ್ದಾರೆ. ಬಿಜೆಪಿ ಪಕ್ಷದವರಿಗೆ ನಿಜಕ್ಕೂ ರಾಜ್ಯದ ಪರವಾಗಿ ಕಾಳಜಿ ಇದ್ದರೆ ಸರ್ಕಾರದ ಒತ್ತಾಯಕ್ಕೆ ದನಿಗೂಡಿಸಿ ತಮ್ಮ ಬದ್ಧತೆಯನ್ನು ನಿರೂಪಿಸಲಿ ಎಂದು ಸಲಹೆ ನೀಡಿದ್ದಾರೆ.
ನಾವು ಆರೆಸ್ಸೆಸ್ ಗುಲಾಮರಲ್ಲ
‘ಆರ್‌ಎಸ್‌ಎಸ್ ಕೇವಲ ಒಂದು ನೋಂದಣಿ ಆಗದ ಎನ್‌ಜಿಒ. ದೇಶ ಸೇವೆ ಸಲ್ಲಿಸುವುದಾಗಿ ಹೇಳಿ ತೆರಿಗೆ ತಪ್ಪಿಸಿಕೊಳ್ಳುವ ಇವರ ಮಾತು ಕೇಳಲು ನಾವೇನು ಆರ್‌ಎಸ್‌ಎಸ್ ಗುಲಾಮರಾ? ಅಥವಾ ಸರ್ಕಾರದವರೇನು ಅವರ ಆಳು ಮಕ್ಕಳಾ?’ ಎಂದು ಪ್ರಿಯಾಂಕ್ ಹರಿಹಾಯ್ದಿದ್ದಾರೆ. ದೇಶ ಸೇವೆ ಸಲ್ಲಿಸುವುದಾಗಿ ಹೇಳುತ್ತಾ ತೆರಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಅವರನ್ನು ದೇಶ ಭಕ್ತರನ್ನಾಗಿ ಮಾಡಲು ಹೇಗೆ ಸಾಧ್ಯ? ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಾಯಿತ ಸಂಸ್ಥೆಯಲ್ಲ ಎಂದು ಲಿಖಿತವಾಗಿ ತಿಳಿಸಿದೆ. ಆ ಸಂಸ್ಥೆ ನಿಜವಾಗಿಯೂ ದೇಶ ಸೇವೆ ಸಲ್ಲಿಸುತ್ತಿದ್ದರೆ ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು? ನೋಂದಣಿ ಆಗದ ಈ ಸಂಸ್ಥೆ ಮುಖ್ಯಸ್ಥರಿಗೆ ಪ್ರಧಾನಿ, ಗೃಹ ಸಚಿವರಿಗೆ ನೀಡುವ ಪ್ರೊಟೋಕಾಲ್ ಭದ್ರತೆ ಯಾಕೆ ನೀಡಬೇಕು? ಎಂದು ಕಿಡಿಕಾರಿದರು.


