ರಾಜ್ಯ ಸರ್ಕಾರ ಯಡಿಯೂರಪ್ಪ ಅಥವಾ ಬೊಮ್ಮಾಯಿ ಸರ್ಕಾರ ಎನಿಸಿಕೊಳ್ಳದೇ ದಿಲ್ಲಿ ಮಟ್ಟದವರೆಗೆ ಇದೊಂದು 40% ಕಮಿಷನ್‌ ಸರ್ಕಾರ ಎಂದು ಹೆಸರುವಾಸಿಯಾಗಿದೆ: ಪ್ರಿಯಾಂಕ್‌ ಖರ್ಗೆ 

ಕಲಬುರಗಿ(ಏ.15):  ನನ್ನ ಮೇಲೆ 8 ಎಫ್‌ಐಆರ್‌ಗಳಿವೆ. ಆದರೆ, ನನ್ನ ಪ್ರತಿಸ್ಪರ್ಧಿ ಮೇಲೆ 40 ಕೇಸುಗಳಿವೆ ಎಂದು ಇದೇ ಮೊದಲ ಬಾರಿಗೆ ಚಿತ್ತಾಪುರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರಾಠೋಡ್‌ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಸನ್ನತಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದಕ್ಕೆ ನನ್ನ ಮೇಲೆ ಕೇಸಿವೆ. ಆದರೆ ಬಿಜೆಪಿಗರ ಮೇಲೆ ಅಕ್ರಮ ಅಕ್ಕಿ ಸಾಗಾಣಿಕೆ ಹಾಗೂ ಅಕ್ರಮ ಹಾಲಿನಪುಡಿ ಸಾಗಾಣಿಕೆ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಸು ದಾಖಲಾಗಿವೆ ಎಂದು ಆಪಾದಿಸಿದರು. ಯಾದಗಿರಿ ಕೋರ್ಟೊಂದು ಅವರಿಗೆ ಜೈಲು ವಾಸದ ತೀರ್ಪಿತ್ತಿದೆ. ನನ್ನ ಹಾಗೂ ಅವರ ನಡುವೆ ತುಲಾಭಾರ ನಡೆಯಲಿ ಎಂದರು.

ನನ್ನೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿದವರು ಈಗ ಅಂತ ಅಭ್ಯರ್ಥಿ ಪಕ್ಕ ಕೂಡುವ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್‌ ತ್ಯಜಿಸಿದ್ದ ಲಿಂಗಾರೆಡ್ಡಿ ಭಾಸರೆಡ್ಡಿ, ವಿಶ್ವನಾಥ್‌ ಹೆಬ್ಬಾಳ್ಮಾ ಸೇರಿ ಹಲವರಿಗೆ ಹೆಸರು ಹೇಳದೆ ಸಂದೇಶ ರವಾನಿಸಿದರು. ಸ್ವಾಭಿಮಾನ ಇರುವ ಅವರು ಈಗ ಕಾಂಗ್ರೆಸ್‌ ಪಕ್ಷಕ್ಕೆ ಬರುವುದಾದರೆ ಅವರಿಗೆ ಮುಕ್ತವಾಗಿ ಸ್ವಾಗತಿಸುತ್ತೇನೆ. ನಾನು ನಿಮಗೆ ಯಾವುದೇ ಕಪ್ಪು ಚುಕ್ಕೆ ತರವುದಿಲ್ಲ. ಭ್ರಷ್ಟಾಚಾರ ಮಾಡಿಲ್ಲ, ಮಾಡುವುದೂ ಇಲ್ಲ. ಹಾಗಾಗಿ ನಮಗೆ ಈ ಸಲವೂ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

KALABURAGI: ಚುನಾವಣೆ ಹಿನ್ನೆಲೆ, 50 ಸಾವಿರಕ್ಕೂ ಹೆಚ್ಚು ನಗದು ಒಯ್ಯುವಂತಿಲ್ಲ: ಡಿಸಿ ಯಶವಂತ ಗುರುಕರ್ ಸೂಚನೆ

ರಾಜ್ಯ ಸರ್ಕಾರ ಯಡಿಯೂರಪ್ಪ ಅಥವಾ ಬೊಮ್ಮಾಯಿ ಸರ್ಕಾರ ಎನಿಸಿಕೊಳ್ಳದೇ ದಿಲ್ಲಿ ಮಟ್ಟದವರೆಗೆ ಇದೊಂದು 40% ಕಮಿಷನ್‌ ಸರ್ಕಾರ ಎಂದು ಹೆಸರುವಾಸಿಯಾಗಿದೆ. ಬಿಜೆಪಿ ಸರ್ಕಾರ 40% ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರ ಸಂಘ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದೆ ಎಂದು ನೆನಪಿಸಿದ ಅವರು, ಸರ್ಕಾರ ಎಲ್ಲ ಹಂತದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚಿತ್ತಾಪುರದ ಜನರು ಅಭಿವೃದ್ಧಿ ಪರ ಸರ್ಕಾರ ಬೇಕೋ ಅಥವಾ ಭ್ರಷ್ಟಾಚಾರದ ಹಾಗೂ ಭಾವನಾತ್ಮಕ ವಿಚಾರಗಳಿಂದ ಜನರನ್ನು ದಿಕ್ಕು ತಪ್ಪಿಸುವ ಸರ್ಕಾರ ಬೇಕೋ ಎಂದು ನಿರ್ಧರಿಸಬೇಕಾಗಿದೆ ಎಂದು ಎಚ್ಚರಿಸಿದರು.

ಉಮೇಶ್‌ ಜಾಧವ್‌ ಅವರನ್ನು ಆರಿಸಿ ತಂದು ತಪ್ಪು ಮಾಡಿರುವುದಾಗಿ ಜನರು ಅಂದುಕೊಳ್ಳುತ್ತಿದ್ದಾರೆ. ಖರ್ಗೆ ಸಾಹೇಬರು ಕಟ್ಟಿಸಿದ ಕಟ್ಟಡಗಳಿಗೆ ಬಣ್ಣ ಬಳಿಯಲು ಇವರಿಗೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಚಿತ್ತಾಪುರ ತಾಲೂಕಿಗೆ ನಿಮ್ಸ್‌ ನಂತಹ ಪ್ರಮುಖ ಯೋಜನೆ ಹಾಗೂ ಟೆಕ್ಸ್‌ಟೈಲ್‌ ಪಾರ್ಕ್ ಮಂಜೂರು ಮಾಡಿಸಲಾಗಿತ್ತು. ಆದರೆ, ಈ ಯೋಜನೆಗಳು ವಾಪಸ್‌ ಹೋಗಿವೆ ಎಂದು ಆಪಾದಿಸಿದರು.

ವಾಡಿ ಬಳಿ ರೇಲ್ವೆ ಬ್ರಿಜ್‌, ಚಾಮನಾಳ- ನರಿಬೋಳ ಬ್ರಿಜ್‌ ಮುಂತಾದ ಯೋಜನೆಗಳು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರು ತಮ್ಮ ಬಳಿ ಹಣವಿದ್ದರೆ ಕೆಲಸ ಮಾಡಲಿ ಎಂದು ಅಧಿಕಾರಿಗಳು ಹೇಳುತ್ತಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಚಿತ್ತಾಪುರಕ್ಕೆ ಬಿಡುಗಡೆಯಾದ 200 ಕೋಟಿ ರು. ಅನುದಾನ ವಾಪಸ್‌ ಪಡೆದಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಂ ಮೀಸಲಾತಿ ಕಿತ್ತು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ಹಂಚಿದ್ದು ಅವೈಜ್ಞಾನಿಕ ಎಂದು ಸುಪ್ರಿಂ ಕೋರ್ಚ್‌ ಹೇಳಿದೆ. ಜೊತೆಗೆ ಲಿಂಗಾಯತ ಹಾಗೂ ಒಕ್ಕಲಿಗ ಸ್ವಾಮೀಜಿಗಳು ಸರ್ಕಾರದ ನಿರ್ಧಾರ ಒಪ್ಪಿಲ್ಲ. ಅದೇ ಮಾತು ನಾವು ಹೇಳಿದರೆ ಕಾಂಗ್ರೆಸ್‌ನವರು ಮೀಸಲಾತಿ ವಿರೋಧಿಗಳು ಎಂದು ಪಟ್ಟಕಟ್ಟುತ್ತಾರೆ ಎಂದರು.

ಮಾಜಿ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ರಾಜ್ಯದ 224 ಕ್ಷೇತ್ರಗಳಿಗಿಂತ ಬಿಜೆಪಿಗರಿಗೆ ಚಿತ್ತಾಪುರ ಕ್ಷೇತ್ರ ಪ್ರಮುಖವಾಗಿದೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕರಾದ ಪ್ರಿಯಾಂಕ್‌ ಖರ್ಗೆ ಅವರಿಗೆ ತಾಯಿ ಚಂದ್ರಲಾಂಬಿಕೆ ಆಶೀರ್ವಾದ ನೀಡಿದ್ದು ಕರ್ನಾಟಕದಲ್ಲಿಯೇ ಮೊಟ್ಟ ಮೊದಲು ಚಿತ್ತಾಪುರದಲ್ಲಿಯೇ ಫಲಿತಾಂಶ ಬರಲಿದೆ ಎಂದು ಸಿದ್ದರಾಮಯ್ಯ, ಶಿವಕುಮಾರ್‌ ನಂತರ ಪ್ರಿಯಾಂಕ್‌ ಖರ್ಗೆ ಬಲಿಷ್ಠ ನಾಯಕರಾಗಿದ್ದಾರೆ. ಅಂತಹ ನಾಯಕರನ್ನು ನೀವು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಶಾಸಕರಾಗಿ ಹಾಗೂ ಸಚಿವರಾದ ಮೇಲೆ ಚಂದ್ರಲಾಂಬಾ ದೇವಾಲಯದ ಅಭಿವೃದ್ಧಿಗಾಗಿ ತಕ್ಷಣ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿ ಎಂದು ಪ್ರಿಯಾಂಕ್‌ ಅವರಿಗೆ ಮನವಿ ಮಾಡಿದರು.

ಪ್ರಿಯಾಂಕ್ ಖರ್ಗೆ ವಿರುದ್ದದ ಒಗ್ಗಟ್ಟಿನ ಹೋರಾಟದಲ್ಲಿಯೇ ಒಡಕು: ಚಿತ್ತಾಪೂರ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ಪ್ರಿಯಾಂಕ್‌ ಖರ್ಗೆ ಅವರ ಅಭಿವೃದ್ದಿಪರ ಚಿಂತನೆ, ಸಾಧನೆ ಅವರನ್ನು ಮತ್ತಷ್ಟುಎತ್ತರಕ್ಕೆ ಏರಿಸಲಿವೆ. ಕೇವಲ ಮೀಸಲು ಕ್ಷೇತ್ರದಿಂದ ಮಾತ್ರ ಆರಿಸಿ ಬರುತ್ತಾರೆ ಅಲ್ಲದೇ ಮೀಸಲಾತಿ ತೆಗೆದ ಮೇಲೂ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ವೀರನಗೌಡ ಪರಸರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯನ್ನು ತೊರೆದು ಮಲ್ಲಿಕಾರ್ಜುನ ಲಿಂಗನ್ನವರ್‌ ಹಾಗೂ ಬಸವರಾಜ್‌ ಶ್ರೀಮದಿ, ರವಿ ನಾಯ್ಕೋಡಿ, ಸಿದ್ದಪ್ಪ ಸಂಕನೂರು, ಶರಭಣ್ಣ ನಾಟೇಕರ್‌ ಹಾಗೂ, ದೇವಪ್ಪ ಲಗಳಿ ಸೇರಿದಂತೆ ಹಲವರು ಕಾಂಗ್ರೆಸ್‌ ಸೇರ್ಪಡೆಗೊಂಡರು. ಶಾಲು ಹೊದಿಸುವ ಮೂಲಕ ಪ್ರಿಯಾಂಕ್‌ ಖರ್ಗೆ ಅವರೆಲ್ಲರನ್ನೂ ಸ್ವಾಗತಿಸಿದರು.

ವೇದಿಕೆ ಮೇಲೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಭೀಮಣ್ಣ ಸಾಲಿ, ಮಹೇಬೂಬ… ಸಾಹೇಬ, ನಾಗರೆಡ್ಡಿ ಪಾಟೀಲ ಕರದಳ್ಳಿ ಶಿವಾನಂದ ಪಾಟೀಲ, ರಮೇಶ ಮರಗೋಳ, ವೀರನಗೌಡ ಪರಸರೆಡ್ಡಿ, ಟೋಪಣ್ಣ, ಸಿದ್ದುಗೌಡ ಅಫಝಲ್ಪುರಕರ್‌ ಸೇರಿದಂತೆ ಹಲವರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.