ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಂದೆಯ ಹೆಸರು ಹೇಳಲು ಹೆಮ್ಮೆ ಇದೆ, ನಿಮಗೆ ನಿಮ್ಮ ತಂದೆಯ ಹೆಸರು ಹೇಳಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು(ಜುಲೈ.10): ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನನ್ನ ಅಪ್ಪನ ಹೆಸರು ಹೇಳಲು ನನಗೆ ಹೆಮ್ಮೆ ಇದೆ. ನಿಮಗೆ ನಿಮ್ಮ ಅಪ್ಪನ ಹೆಸರು ಹೇಳೋದಕ್ಕೆ ಆಗಿಲ್ಲ ಅಂದರೆ ನಾನೇನು ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿ ವೇಳೆ ಪ್ರತಾಪ್ ಸಿಂಹ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲ ಪ್ರಾಡಕ್ಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಪ್ರಚಾರಕ್ಕೆ ಹೀರೋಗಳನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ಜಾಹೀರಾತು ನೀಡುತ್ತಾರೆ. ಹಾಗೆ ಬಿಜೆಪಿಯ ಕೆಲ ಕಳಪೆ ಪ್ರಾಡಕ್ಟ್‌ಗಳಿಗೆ ಪ್ರಚಾರಕ್ಕಾಗಿ ನಾನು ಕ್ಯಾಂಪೇನ್ ಅಂಬಾಸಿಡರ್ ಆಗಿದ್ದೇನೆ. ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ಮಾಜಿ ಶಾಸಕ ರಾಜೀವ್, ಇತರರ ಪ್ರಚಾರಕ್ಕಾಗಿ ನಾನು ಬೇಕಾಗಿದೆ ಎಂದು ವ್ಯಂಗ್ಯವಾಡಿದರು .
ಪ್ರತಾಪ್ ಸಿಂಹ ಹೇಳಿರುವಂತೆ ಖರ್ಗೆ ಎನ್ನುವುದು ನಮ್ಮ ತಂದೆಯಿಂದ ಬಂದಿರುವ ಬಳುವಳಿ ಎಂಬುದು ನಿಜ. ನನಗೆ ನಮ್ಮಪ್ಪನ ಬಗ್ಗೆ ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಕಷ್ಟಪಟ್ಟು ಗುರಿ ಇಟ್ಟುಕೊಂಡು ಮೇಲೆ ಬಂದವರು ಅವರು. ಅದೇ ರೀತಿ ನೀವು ನಿಮ್ಮಪ್ಪನ ಹೆಸರು ಹೇಳಲು ಆಗುವುದಿಲ್ಲ ಎಂದರೆ ನಾನೇನು ಮಾಡಲಿ ಎಂದರು.
ಪ್ರತಾಪ್ ಸಿಂಹ ತಮಗೆ ಟಿಕೆಟ್ ಸಿಕ್ಕಾಗ ನನ್ನ ಟ್ಯಾಲೆಂಟ್ ನೋಡಿ ಕೊಟ್ರು ಅಂತಿದ್ರು. ಹಾಗಿದ್ದರೆ ಮೋದಿ ಅವರು ನಿಮಗೆ ಈ ಬಾರಿ ಯಾಕೆ ಟಿಕೆಟ್ ಕೊಡಲಿಲ್ಲ? ಸಂಸತ್ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ನಿಮ್ಮ ಮೊಬೈಲ್ ಸೀಸ್ ಮಾಡಿದ್ದಾಗ ಅದರಲ್ಲಿದ್ದ ನಿಮ್ಮ ಆಡಿಯೋ ಏನಾದ್ರೂ ಕೇಳಿದ್ರಾ? ನಾನು ಕೇಳೋ ಯಾವುದೇ ಪ್ರಶ್ನೆಗೆ ಅವರು ಉತ್ತರ ಕೊಡಲ್ಲ ಎಂದರು.
ಆರ್‌ಎಸ್‌ಎಸ್ ನವರು 52 ವರ್ಷ ಯಾಕೆ ರಾಷ್ಟ್ರ ಧ್ವಜ ಹಾರಿಸಿಲ್ಲ ಅಂತ ಕೇಳಿದ್ವಿ. ಉತ್ತರ ಕೊಡಲ್ಲ. ವಿಷಯಾಂತರ ಮಾಡುತ್ತಾರೆ. ಖರ್ಗೆ ಪಿಯುಸಿ ಓದಿರೋದು ಅಂತಾರೆ. ಹೌದು ನಾನು ಪಿಯುಸಿ ಓದಿದ್ದೇನೆ. ಓದಿರುವುದಕ್ಕೆ ನಮ್ಮ ಸ್ನೇಹಿತರು, ಶಿಕ್ಷಕರು, ಕಾಲೇಜು ಎಲ್ಲ ದಾಖಲೆ ಕೊಡುತ್ತೇನೆ. ಹಾಗಾದ್ರೆ ಮೋದಿ ಏನ್ ಓದಿದ್ದಾರೆ. ಅವರ ಜೊತೆ ಓದಿದರು ಯಾರು ಹೇಳಿ? ಅವರಿಗೆ ಪಾಠ ಮಾಡಿದವರು ಯಾರು ದಾಖಲೆ ಕೊಡಿ ಎಂದು ಸವಾಲು ಹಾಕಿದರು.
