ಜನರನ್ನು ನಿಯಂತ್ರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು, ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ದಾಂಡೇಲಿ (ಡಿ.23): ಹಿಂದೂ ಧರ್ಮದ ಪರವಾಗಿ ವಾದ ಮಂಡಿಸುವ ಸಂಘಟನೆ, ನಾಯಕರನ್ನು ಹಾಗೂ ಜನರನ್ನು ನಿಯಂತ್ರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು, ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಎಂದರೆ ಏನು? ಎನ್ನುವುದನ್ನು ಈ ಕಾಯ್ದೆಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ, ಆದರೂ ಕಾಯ್ದೆ ಜಾರಿ ಮಾಡಲಾಗಿದೆ. ಹಿಂದೂ ಧರ್ಮದ ಪರವಾಗಿ ಮತ್ತು ಮಂತಾಂತರ, ಲವ್ ಜಿಹಾದ್ ವಿರುದ್ಧ ಮಾತನಾಡುವುದು ತಪ್ಪಾ? ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ನಮಗೆ ಸಂವಿಧಾನ ಬದ್ಧವಾಗಿ ಮಾತನಾಡುವ ಹಕ್ಕನ್ನು ನೀಡಿದ್ದಾರೆ. ಈ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ಡಿ.31ರಂದು ಹೊಸ ವರ್ಷ ಆಚರಣೆ ಪಾಶ್ಚಿಮಾತ್ಯರ ಅಸಹ್ಯ ಸಂಸ್ಕೃತಿಯಾಗಿದೆ. ನಮ್ಮ ಯುವಕ-ಯುವತಿಯರು ಈ ಸಂಸ್ಕೃತಿಗೆ ಮಾರು ಹೋಗದೆ, ಹಿಂದೂ ಧರ್ಮದ ಪ್ರಕಾರ ಯುಗಾದಿಯಂದು ಹೊಸ ವರ್ಷಾಚರಣೆ ಮಾಡಬೇಕು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಭುಗಿಲೆದ್ದಿದ್ದು, ಎಲ್ಲ ದೇವರು ಸಮಾನರು ಎಂದು ಹೇಳಿದ ಕಾರಣಕ್ಕೆ ದೀಪು ಎನ್ನುವ ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಇಂತಹ ಹಿಂಸೆ ತಡೆಗಟ್ಟಲು ಮತ್ತು ಹಿಂದೂಗಳ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.
ಪಾಶ್ಚಿಮಾತ್ಯ ಹೊಸ ವರ್ಷ ಸಂಸ್ಕೃತಿಗೆ ವಿರೋಧ
ಇನ್ನು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕಾಗಿ ಶಾಲಾ ಮಕ್ಕಳಿಗೆ ಹತ್ತು ದಿನ ರಜೆ ಕೊಡಲಾಗುತ್ತದೆ. ಈ ರಜೆ ಡಿ.25ರಂದು ಒಂದೇ ದಿನಕ್ಕೆ ಸೀಮಿತಗೊಳಿಸಬೇಕು ಎಂದು ಅವರು ರಾಜ್ಯ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು. ಒಂದು ವೇಳೆ 10 ದಿನ ರಜೆ ನೀಡಿದ್ದೇ ಆದರೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಶ್ರೀರಾಮ ಸೇನೆ ಉತ್ತರ ಪ್ರಾಂತದ ಗೌರವಾಧ್ಯಕ್ಷ ಪ್ರಮೋದ್ ಆಚಾರ್ ಮಾತನಾಡಿದರು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ದಾಂಡೇಲಿ ಘಟಕದ ಅಧ್ಯಕ್ಷ ಶ್ರೀನಾಥ್ ಪಾಸಲಕರ, ವಾಸುದೇವ್ ಪ್ರಭು, ಶಿವಾನಂದ ಗಗ್ಗರಿ ಇದ್ದರು.


