ಕಾಲ್ತುಳಿತಕ್ಕೆ ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿ ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೀಡಿರುವ ವರದಿ ಸರಿಯಿಲ್ಲ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿ (ಜು.13): ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತಕ್ಕೆ ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿ ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೀಡಿರುವ ವರದಿ ಸರಿಯಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಪ್ರತಿಷ್ಠೆಯ ಸಲುವಾಗಿ ಅವಶ್ಯಕತೆ ಇಲ್ಲದಿದ್ದರೂ ಸಮಾರಂಭ ಮಾಡಲು ನಿರ್ಧರಿಸಿದರು. ಜನರನ್ನು ವಿಜಯೋತ್ಸವಕ್ಕೆ ಯಾರು ಕರೆದಿದ್ದರು? ಯಾರು ಆಯೋಜಿಸಿದ್ದರು ಎಂದು ಪ್ರಶ್ನಿಸಿದರು.
ಡಿಸಿಪಿ ವಿಜಯೋತ್ಸವ ಬೇಡ ಎಂದರೂ ಒತ್ತಾಯ ಪೂರ್ವಕವಾಗಿ ಅನುಮತಿ ಪಡೆದು ಈಗ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇದನ್ನು ನಾನು ಒಪ್ಪುವುದಿಲ್ಲ. ರಾಜಕೀಯ ಮುಖಂಡರು ನಿರ್ಧಾರ ತೆಗೆದುಕೊಳ್ಳದೆ ಇಂತಹ ಸಮಾರಂಭ ಆಯೋಜನೆ ಸಾಧ್ಯವಿಲ್ಲ. ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡುವುದು ತಪ್ಪು. ಆಯೋಗ ರಚಿಸುವ ಮೊದಲು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ಅನುಮತಿ ಪಡೆದಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಕೇಂದ್ರ ಸರ್ಕಾರ ಯೋಜನೆಯಡಿ ಹಲವು ನಿಯಮಗಳ ಜಾರಿಗೆ ತಂದಿದ್ದು, ಉಳಿದ ರಾಜ್ಯಗಳು ಅನುಸರಿಸುತ್ತಿವೆ. ಆದರೆ, ಕರ್ನಾಟದಲ್ಲಿ ಅನುಸರಿಸುತ್ತಿಲ್ಲ ಎಂದರು.ಕಾಂಗ್ರೆಸ್ ಕೆಲವು ನಾಯಕರು ಯಾವಾಗಲೂ ಟ್ರಂಪ್, ಬೈಡನ್, ಮೋದಿ ಹಾಗೂ ಇಸ್ರೇಲ್ ಬಗ್ಗೆ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಏನು ನಡೆದಿದೆ ಎಂಬುವುದರ ಬಗ್ಗೆ ಮಾತನಾಡುವುದಿಲ್ಲ. ಶಾಸಕರು, ಗೃಹ ಸಚಿವ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷರೂ ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಂವಿಧಾನ ಕೊಲೆ ಮಾಡಿಸುವುದೇ ಕಾಂಗ್ರೆಸ್ ಸಾಧನೆ: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಆದರ ಆಶಯಗಳನ್ನು ಕೊಲೆ ಮಾಡಿ ಅದನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂದಿನಿಂದಲೂ ಬಂದಿದೆ. ಕಾಂಗ್ರೆಸ್ ಡಿಎನ್ಎದಲ್ಲಿರುವ ದೇಶ, ಸಂವಿಧಾನ ವಿರೋಧಿ ಮನಸ್ಥಿತಿ ಜನರಿಗೆ ತಿಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಜೋಶಿ ಹೇಳಿದರು. 1951ರಿಂದಲೇ ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತ ಬಂದಿದೆ. 1971ರಲ್ಲಿ ಕಾಂಗ್ರೆಸ್ಸಿನ ವಿರೋಧಿ ಪಕ್ಷಗಳು ಒಂದಾಗಿ ರಾಯಬರೇಲಿ ಕ್ಷೇತ್ರದಲ್ಲಿ ರಾಜನಾರಾಯಣ ಎಂಬುವರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ಚುನಾವಣೆಯಲ್ಲಿ ಇಂದಿರಾಗಾಂಧಿ ಗೆಲ್ಲುತ್ತಾರೆ. ರಾಜನಾರಾಯಣ ಅವರು ಕೋರ್ಟ್ ಮೆಟ್ಟಿಲೇರಿದರು. ಇಂದಿರಾಗಾಂಧಿ ಗೆಲವು ಅನೂರ್ಜಿತಗೊಂಡು, 6 ವರ್ಷ ಚುನಾವಣೆ ನಿಲ್ಲದಂತೆ ಆದೇಶಿಸಿತು.
ಮುಂದೆ ಇಂದಿರಾಗಾಂಧಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತೀರ್ಪು ಬಂದು, ಇಂದಿರಾಗಾಂಧಿ ಚುನಾವಣೆ ಸ್ಪರ್ಧಿಸಬಹುದು ಆದರೆ, ಮತ ಹಾಕುವಂತಿಲ್ಲ ಎಂದು ತೀರ್ಪು ನೀಡಿತು. ಇದರಿಂದ ಇಂದಿರಾಗಾಂಧಿ ವಿಚಲಿತಗೊಂಡರು. ಇದರಿಂದ ಸಂವಿಧಾನ ಕಲಂ 38, 40, 41ಕ್ಕೆ ತಿದ್ದುಪಡಿ ತಂದು ತಮ್ಮ ಆಯ್ಕೆಯನ್ನು ಎಲ್ಲೂ ಪ್ರಶ್ನಿಸಿದಂತೆ ಚಕ್ರವ್ಯೂಹ ರೂಪಿಸಿಕೊಂಡರು. ಜೂ.25, 1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಜನರನ್ನು ಬೌದ್ಧಿಕ ಆಘಾತಕ್ಕೆ ಒಳಪಡಿಸಲಾಯಿತು. ಜಯಪ್ರಕಾಶ ನಾರಾಯಣ ಅವರನ್ನು ಬಂಧಿಸಲಾಯಿತು. ಅವರಿಗೆ ಔಷಧಿ ಪೂರೈಸಲಿಲ್ಲ. ಕಾಂಗ್ರೆಸ್ಸಿನ ನಕಲಿ ಗಾಂಧಿ ಕುಟುಂಬದವರಿಂದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
