ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳಿಂದ ಆಸಕ್ತಿ ಕಳೆದುಕೊಂಡು ಹಾಸನದ ಪೆನ್‌ಡ್ರೈವ್‌ ಹಗರಣವನ್ನೇ ನೆಚ್ಚಿಕೊಂಡಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿ ಮೇಲೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ಹುಬ್ಬಳ್ಳಿ (ಮೇ.05): ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳಿಂದ ಆಸಕ್ತಿ ಕಳೆದುಕೊಂಡು ಹಾಸನದ ಪೆನ್‌ಡ್ರೈವ್‌ ಹಗರಣವನ್ನೇ ನೆಚ್ಚಿಕೊಂಡಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿ ಮೇಲೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ವಾರದವರೆಗೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಮಾತನಾಡುತ್ತಿದ್ದರು. ಮೊದಲ ಹಂತದ ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈ ಪೆನ್‌ಡ್ರೈವ್‌ ಬಿಡುಗಡೆ ಆಯಿತು. ಆಗಿನಿಂದ ಗ್ಯಾರಂಟಿ ಯೋಜನೆಗಳನ್ನೆಲ್ಲ ಮರೆತು ಬರೀ ಪೆನ್‌ಡ್ರೈವ್‌ ಜಪ ಮಾಡುತ್ತಿದ್ದಾರೆ. 

ಈ ವಿಚಾರವೇ ತಮಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ತಂದುಕೊಂಡು ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಕಾಂಗ್ರೆಸ್ಸಿಗರು ಟೀಕಿಸಿದರು. ಹಾಗಂತ ಪೆನ್‌ಡ್ರೈವ್‌ ಪ್ರಕರಣವನ್ನು ನಾವೇನು ಬೆಂಬಲಿಸುವುದಿಲ್ಲ. ಅದನ್ನು ನಾವಷ್ಟೇ ಅಲ್ಲ. ಯಾರೊಬ್ಬರು ಬೆಂಬಲಿಸುವಂತೆಯೂ ಇಲ್ಲ ಎಂದರು. ಈ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಯಾರೇ ಆಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಅತಿ ಕಠಿಣವಾದ ಶಿಕ್ಷೆಯಾಗಬೇಕು. ಈ ಸಂಬಂಧ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದೂ ಆಗಿದೆ. ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದರು.

ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗಾಗಲಿ, ತಮಗಾಗಲಿ ಯಾವುದೇ ಪತ್ರ ಬಂದಿಲ್ಲ. ಅದನ್ನು ಯಾವ ಪುಣ್ಯಾತ್ಮ ಹೇಳಿದ್ದಾನೋ ಅವರನ್ನೇ ಕೇಳಿ ಎಂದರು. ಕಾಂಗ್ರೆಸ್‌ನವರಿಗೆ ಪೆನ್‌ಡ್ರೈವ್‌ ಬಗ್ಗೆ ಮೊದಲೇ ಗೊತ್ತಿತ್ತು. ಹೀಗಾಗಿ ಚುನಾವಣೆಗೆ ಎರಡ್ಮೂರು ದಿನ ಬಾಕಿಯಿರುವಾಗಲೇ ಪೆನ್‌ಡ್ರೈವ್‌ ಬಿಡುಗಡೆಯಾಗಿದೆ. ಚುನಾವಣೆಯಲ್ಲಿ ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಬೇಕೆಂದು ಕಾಂಗ್ರೆಸ್‌ ಶ್ರಮಿಸುತ್ತಿದೆ. ಆದರೆ ಅದು ಫಲನೀಡುವುದಿಲ್ಲ. ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಬೇಕೆಂದು ಜನತೆಯೇ ಸಂಕಲ್ಪ ಮಾಡಿ ಆಗಿದೆ. ಹೀಗಾಗಿ ಈ ಪೆನ್‌ಡ್ರೈವ್‌ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದರು. 

ಪ್ರಜ್ವಲ್‌ ರೇವಣ್ಣ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ

28 ಕ್ಷೇತ್ರಗಳಲ್ಲಿ ಗೆಲವು: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.‌ ಕಳೆದ ಒಂದು ವಾರದಿಂದ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ.‌ ನಮ್ಮ ನಿರೀಕ್ಷೆಗೆ ಮೀರಿದ ಜನಸ್ಪಂದನೆ ದೊರೆತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜನ ಸಂಕಲ್ಪ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್​ಡಿಎದಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದು ಜನರಿಗೆ ಮನವರಿಕೆ ಆಗಿದೆ ಎಂದರು. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದ ಅವರು, ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಆತ್ಮಹತ್ಯೆ, ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿವೆ. ದಲಿತ ಹೆಣ್ಣುಮಗಳ ಮೇಲೆ ಸದ್ದಾಂ ಹುಸೇನ್‌ ಎಂಬಾತ ನೀಚ ಕೃತ್ಯ ಎಸಗಿದ್ದಾನೆ. ಹೀಗಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.