Asianet Suvarna News Asianet Suvarna News

ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ತೀರ್ಪಿಗೆ ತಡೆ ಕೋರಿ ಹೈಕೋರ್ಟ್‌ಗೆ

ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. 
 

Prajwal Revanna is disqualified High Court seeks stay of judgment gvd
Author
First Published Sep 5, 2023, 3:20 AM IST

ಬೆಂಗಳೂರು (ಸೆ.05): ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ನ್ಯಾಯಮೂರ್ತಿ ಕೆ. ನಟರಾಜನ್‌ ಅವರ ಪೀಠ ಸೆ.1ರಂದು ಆದೇಶಿಸಿತ್ತು. ಈ ಆದೇಶದ ಪ್ರತಿಯನ್ನು ಸಂಸತ್‌ ಸ್ಪೀಕರ್‌ಗೆ ಕಳುಹಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿತ್ತು.

ಆದರೆ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದರ ಒಳಗೆ ಸಂಸತ್‌ ಸ್ಪೀಕರ್‌ ಅವರು ಲೋಕಸಭೆ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದರೆ ಕಷ್ಟವಾದೀತು ಎಂಬ ಕಾರಣದಿಂದ ಪ್ರಜ್ವಲ್‌ ಅವರು ಮೇಲ್ಮನವಿ ಸಲ್ಲಿಸುವವರೆಗೆ ಸೆ.1ರ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಸೋಮವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್‌ ಪರ ವಕೀಲ ಎಂ.ಕೇಶವ ರೆಡ್ಡಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್‌ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಹಲವು ಅಕ್ರಮ ನಡೆಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ.ಮಂಜು ಹಾಗೂ ಬಿಜೆಪಿ ಮುಖಂಡರೂ ಆದ ವಕೀಲ ದೇವರಾಜೇಗೌಡ ಹೈಕೋರ್ಟ್‌ಗೆ 2019ರಲ್ಲಿ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಕಾವೇರಿ ನೀರನ್ನು ನೀಡದಂತೆ ಡಿಕೆಶಿ ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ: ದೇವೇಗೌಡ ಆರೋಪ

ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದ್ದ ಹೈಕೋರ್ಟ್‌, ಪ್ರಜ್ವಲ್‌ ರೇವಣ್ಣ ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ತೀರ್ಮಾನಿಸಿತು. ಜತೆಗೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಸೆ.1ರಂದು ಆದೇಶಿಸಿತ್ತು. ಇದೇ ವೇಳೆ ಚುನಾವಣಾ ಅಕ್ರಮದಲ್ಲಿ ಶಾಮೀಲಾಗಿರುವ ಕಾರಣಕ್ಕೆ ಪ್ರಜ್ವಲ್‌ ಅವರ ತಂದೆ ಎಚ್‌.ಡಿ. ರೇವಣ್ಣ ಮತ್ತು ಸಹೋದರ ಸೂರಜ್‌ ರೇವಣ್ಣಗೆ ನೋಟಿಸ್‌ ಜಾರಿಗೊಳಿಸಿತ್ತು.

Follow Us:
Download App:
  • android
  • ios