ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಚಿಕ್ಕಬಳ್ಳಾಪುರ ನಗರದಲ್ಲಿ ಎಲ್ಲ ಆಟೋ ಚಾಲಕರಿಗೆ ತಲಾ 5 ಸಾವಿರ ರೂ. ಧನಸಹಾಯ ನೀಡಿದರು. ಈ ವೇಳೆ ಖಾಕಿ ಧರಿಸಿ ಆಟೋ ಚಾಲನೆ ಮಾಡಿದರು.

ಚಿಕ್ಕಬಳ್ಳಾಪುರ (ಜು.30): ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರದಲ್ಲಿ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ, ಹಾಲಿ ಸಚಿವರನ್ನೇ ಸೋಲಿಸಿದ ಶಾಸಕ ಪ್ರದೀಪ್‌ ಈಶ್ವರ್‌ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಂಕರ್‌ನಾಗ್‌ ವೇಷ ಧರಿಸಿ ಆಟೋ ಚಾಲನೆ ಮಾಡಿದರು. ನಂತರ, ಚಿಕ್ಕಬಳ್ಳಾಪುರ ನಗರದ ಎಲ್ಲ ಆಟೋ ಚಾಲಕರಿಗೂ ತಮ್ಮಸ್ವಂತ ವೆಚ್ಚದಲ್ಲಿ ತಲಾ 5 ಸಾವಿರ ರೂಪಾಯಿ ಸಹಾಯಧನವನ್ನು ನೀಡಿದರು.

ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಲ್ಲಿ ಆಟೋ ಚಾಲಕರಿಗೆ ನೆರವು ನೀಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಪ್ರದೀಪ್‌ ಈಶ್ವರ್‌ ಅವರು, ಕನ್ನಡ ಚಿತ್ರರಂಗದ ಮೇರು ನಟ ಆಟೋರಾಜ ಶಂಕರ್‌ ನಾಗ್‌ ಮಾದರಿಯಲ್ಲಿ ಆಟೋ ಡ್ರೈವರ್‌ ವೇಷವನ್ನು ಧರಿಸಿ ಆಟೋ ಚಾಲನೆ ಮಾಡಿದರು. ಇದಾದ ನಂತರ, ಕಾರ್ಯಕ್ರಮದಲ್ಲಿ ಎಲ್ಲ ಆಟೋ ಚಾಲಕರು ಕೂಡ ಕೋವಿಡ್‌ ಹಾಗೂ ನಂತರದ ಅವಧಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳುತ್ತಾ ಮೈದಾನದಲ್ಲಿ ನೆರೆದಿದ್ದ ಎಲ್ಲ ಆಟೋ ಚಾಲಕರಿಗೂ ತಲಾ 5 ಸಾವಿರ ರೂ. ಸಹಾಯಧನವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಪ್ರದೀಪ್ ಈಶ್ವರ್ ಅವರೇ ತುಂಬಾ ದೊಡ್ಡ ವ್ಯಕ್ತಿಯಾದ್ರಿ; ಬಿಗ್‌ಬಾಸ್‌ ಖ್ಯಾತಿಯ ರೂಪೇಶ್‌ ರಾಜಣ್ಣ

ನಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲಾ ಆಟೋ ಚಾಲಕರಿಗೆ 5 ಸಾವಿರ ರೂಪಾಯಿಗಳ ಸಹಾಯಧನ ನೀಡಿದರು. ಸಹಾಯ ಮಾಡಿ ಮಾತನಾಡಿದ ಪ್ರದೀಪ್ ಈಶ್ವರ್, ತಾವು ನೀಡಿರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದರೆ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ಇದೇ ರೀತಿ ಪ್ರತಿ ವರ್ಷವೂ ನಮ್ಮ ಕ್ಷೇತ್ರದ ಎಲ್ಲ ಆಟೋ ಚಾಲಕರಿಗೆ ನನ್ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದರು.

ರಾಜಿನಾಮೆ ನೀಡಿ ಮತ್ತೊಮ್ಮೆ ಗೆದ್ದು ತೋರಿಸು: ಸುಧಾಕರ್‌ ಸವಾಲು: ಚಿಕ್ಕಬಳ್ಳಾಪುರ (ಜು.30): ಧೈರ್ಯವಿದ್ರೆ ಪ್ರದೀಪ್‌ ಈಶ್ವರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಶಾಸಕ ಪ್ರದೀಪ್‌ ಈಶ್ವರ್‌ಗೆ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಸವಾಲು ಹಾಕಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕ ಪ್ರದೀಪ್‌ ಈಶ್ವರ್‌ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್‌ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸ್ವತಂತ್ರವಾಗಿ ಸ್ಪರ್ಧಿಸಿ ಶಕ್ತಿ ತೋರಿಸಲಿ: ಧೈರ್ಯ ಇದ್ರೆ ಪ್ರದೀಪ್‌ ಈಶ್ವರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಲಿ. ನಾನು ಕೂಡ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆಸುತ್ತೇನೆ. ನಿನಗೆ ಎಷ್ಟುವೋಟ್‌ ಬರುತ್ತೆ, ನನಗೆ ಎಷ್ಟುವೋಟ್‌ ಬರುತ್ತೆ ನೋಡೋಣ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ. ಹಿಂದೆ ನಾನು ಒಂದೇ ವರ್ಷದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೆ. ರಾಜೀನಾಮೆ ನೀಡಿ ಬಿಜೆಪಿ ಇಲ್ಲದ ಕಡೆ ಗೆದ್ದು ನನ್ನ ಶಕ್ತಿ ತೋರಿಸಿದ್ದೇನೆ. ನೀನೂ ಸ್ವತಂತ್ರವಾಗಿ ಸ್ಪರ್ಧಿಸಿ ಶಕ್ತಿ ತೋರಿಸು. ಪ್ರದೀಪ್‌ ಈಶ್ವರ್‌ ಮುಖ ನೋಡಿದರೆ 5 ಸಾವಿರ ವೋಟು ಬರಲ್ಲ ಎಂದು ಕಿಡಿಕಾರಿದ್ದಾರೆ.

ಧೈರ್ಯವಿದ್ರೆ ಪ್ರದೀಪ್‌ ರಾಜೀನಾಮೆ ಕೊಟ್ಟು ಸ್ಪರ್ಧಿಸಲಿ: ಮಾಜಿ ಸಚಿವ ಸುಧಾಕರ್‌

ಕಷ್ಟ ಬಂದಾಗ ನನ್ನ ನೆನಪಿಸಿಕೊಳ್ಳಿ
ನಿಮ್ಮೆಲ್ಲರ ಪ್ರೀತಿ ನನ್ನ ಮೇಲೆ ಇರಲಿ. ನನ್ನ ಸ್ನೇಹಿತ ಕೂಡ ಆಟೋ ಇಟ್ಟುಕೊಂಡಿದ್ದ. ಆಟೋ ಡ್ರೈವರ್​​ಗಳ ಜೀವನ ನನಗೆ ಗೊತ್ತು. ಕಷ್ಟ ಬಂದಾಗ ನನ್ನನ್ನು ನೆನಪಿಸಿಕೊಳ್ಳಿ. ನಾನು ಯಾವುದೇ ಚುನಾವಣೆ ಗಿಮಿಕ್ ಮಾಡುತ್ತಿಲ್ಲ. ನಿಮ್ಮ ಕಷ್ಟಕ್ಕೆ ನಾನು ಸದಾ ಇದ್ದೇನೆ.
- ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಶಾಸಕ