ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಮಾಡುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ (ಅ.04): ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಮಾಡುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಹೇಳಿದರು. ಮುಂದಿನ ಅವಧಿಗೂ ನಾನೇ ಸಿಎಂ ಎಂದು ಮೈಸೂರಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಎಲ್ಲ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲಿ ಆಗುತ್ತವೆ ಎಂದರು.

ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುವೆ, ಮುಂದಿನ ದಸರಾ ಆಚರಣೆಯ ನೇತೃತ್ವವನ್ನು ನಾನೇ ಮಾಡಬಹುದು ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರು ಸಿಎಂ ಇದ್ದಾರೆ. ಜನರು‌ ಕೇಳಿದಾಗ ಹಾಗೇ ಹೇಳಬೇಕಾಗುತ್ತದೆ. ಜನರು‌ ಕೇಳಿದಾಗ ನಾನು ಬಿಡುತ್ತೇನೆ ಎಂದು‌ ಹೇಳುತ್ತಾರೆಯೇ? ಎಂದರು. ಅಕ್ಟೋಬರ್‌ ಕ್ರಾಂತಿ ಅಂದರು, ಈಗ ನವೆಂಬರ್‌ ಕ್ರಾಂತಿ ಎನ್ನುತ್ತಾರೆ. ಮುಂದೆ ಡಿಸೆಂಬರ್‌ ಬರುತ್ತದೆ. ಪವರ್‌ ಶೇರಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಗೊತ್ತು. ಒಂದು ವೇಳೆ ಪವರ್‌ ಶೇರಿಂಗ್ ಆಗಿದ್ದರೆ ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತು. ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿದರು.

ಸಿಎಂ ಬದಲಾವಣೆಯ ಮಾತು ಆಡಿದ್ರೆ ಶಾಸ್ತಿ

‘ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆ ಕುರಿತು ಮಾತನಾಡುವವರ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಸೇರಿ ಸರ್ಕಾರದಲ್ಲಿ ಬದಲಾವಣೆ ತರುವಂತಹ ಯಾವುದೇ ಚರ್ಚೆಗಳೂ ಹೈಕಮಾಂಡ್‌ ಮಟ್ಟದಲ್ಲಿಲ್ಲ. ಆದರೂ ಪಕ್ಷದ ಶಿಸ್ತು ಉಲ್ಲಂಘಿಸಿ ಕೆಲವರು ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಭಾವನಾತ್ಮವಾಗಿ ಮಾತನಾಡುತ್ತಿದ್ದಾರೆ.

ಅವರನ್ನು ಪಕ್ಷದ ಚೌಕಟ್ಟಿನಲ್ಲಿರುವಂತೆ ನೋಡಿಕೊಳ್ಳುವ ಅಧಿಕಾರ ಡಿ.ಕೆ.ಶಿವಕುಮಾರ್‌ ಅವರಿಗಿದ್ದು, ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಯಾರೇ ಆದರೂ ಪಕ್ಷದ ಚೌಕಟ್ಟು ಮೀರಿ ಮಾತನಾಡಬಾರದು. ತಮ್ಮ ಭಾವನೆಗಳನ್ನು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು. ಅವರನ್ನು ಹದ್ದುಬಸ್ತಿನಲ್ಲಿಡುವುದು ಮತ್ತು ಪಕ್ಷದ ಶಿಸ್ತಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವಂತೆ ಮಾಡಲು ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚಿಸಲಾಗಿದೆ. ಕರ್ನಾಟಕದ ಜನರಿಗೆ ಉತ್ತಮ ಆಡಳಿತ ನೀಡುವುದರತ್ತ ಎಲ್ಲರ ಗಮನವಿರಬೇಕು. ಜನರ ಜೀವನ ಬದಲಿಸುವಂತಹ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ, ಫಲಾನುಭವಿಗಳಿಗೆ ತಲುಪುವಂತೆ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.