ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತು ಮತ್ತು ಪ್ರಚಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ₹48.88 ಕೋಟಿ ವೆಚ್ಚ ಮಾಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆ (ಆ.23): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ತಯಾರಿಸುತ್ತಿರುವ ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತು ಮತ್ತು ಪ್ರಚಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ₹48.88 ಕೋಟಿ ವೆಚ್ಚ ಮಾಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಸದನದಲ್ಲಿ ಲಿಖಿತ ಉತ್ತರ ಮಂಡಿಸಿರುವ ಅವರು, ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತಿಗೆ ಸರ್ಕಾರದಿಂದ ಯಾವುದೇ ಹಣ ಖರ್ಚು ಮಾಡಿಲ್ಲ.
ಕೆಎಸ್‌ಡಿಎಲ್‌ನಿಂದಲೇ ಎರಡು ವರ್ಷದಲ್ಲಿ ₹48.88 ಕೋಟಿ ವೆಚ್ಚ ಮಾಡಲಾಗಿದೆ. ಜಾಹೀರಾತು ಮತ್ತು ಪ್ರಚಾರಕ್ಕೆ 2025ರಿಂದ 27ರ ವರೆಗೆ ಬಹುಭಾಷಾ ನಟಿ ತಮ್ಮನ್ನಾ ಭಾಟಿಯಾ ಮತ್ತು ನಟಿ ಐಶಾನಿ ಶೆಟ್ಟಿ ಅವರನ್ನು ರಾಯಭಾರಿಗಳನ್ನಾಗಿ ಬಳಸಿಕೊಂಡಿದ್ದು, ಇವರಿಗೆ ಕ್ರಮವಾಗಿ ₹6.20 ಕೋಟಿ ಮತ್ತು ₹15 ಲಕ್ಷ ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದಲ್ಲದೆ, ಸಂಸ್ಥೆ ಕರ್ನಾಟಕ ಮೂಲದ ಸ್ಥಳೀಯ ವ್ಯಕ್ತಿಗಳಾದ ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನ್ಯಾ ಐಯ್ಯರ್, ಆರಾಧನಾ ಆರ್. ಅವರನ್ನು ದೂರದರ್ಶನ ಜಾಹೀರಾತುಗಳಲ್ಲಿ ಚಿತ್ರೀಕರಣ ಹಾಗೂ ಡಿಜಿಟಲ್ ಮಾಧ್ಯಮಗಳ ರೀಲ್ಸ್‌ನಲ್ಲಿ ಬಳಸಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ₹62.87 ಲಕ್ಷ ವೆಚ್ಚ ತಗುಲಿದೆ. ರಾಯಭಾರಿಗಳು ಹೊಂದಿರುವ ಜನಪ್ರಿಯತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿರುವ ಅನುಯಾಯಿಗಳ ಆಧಾರದ ಮೇಲೆ ಉನ್ನತಾಧಿಕಾರಿಗಳ ಸಮಿತಿ ನೀಡಿದ ಶಿಫಾರಸಿನ ಅನ್ವಯ ಬ್ರಾಂಡ್ ಅಂಬಾಸಿಡರ್ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ಹೊಸ ನಾಲ್ಕು ಡಿಐಜಿಪಿ ಹುದ್ದೆ ಸೃಷ್ಟಿ: ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಹೊಸದಾಗಿ ನಾಲ್ಕು ಡಿಐಜಿಪಿ (ನಾನ್ ಐಪಿಎಸ್) ಹುದ್ದೆಗಳ ಸೃಜನೆಗೆ ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿದೆ. ಕೆಎಸ್‌ಆರ್‌ಪಿಯ ಮೈಸೂರು, ಬೆಳಗಾವಿ, ಮುನಿರಾಬಾದ್ ಹಾಗೂ ಆವತಿ ವಲಯಗಳಿಗೆ ತಲಾ 1 ಸೇರಿ ಒಟ್ಟು ನಾಲ್ಕು ಡಿಐಜಿಪಿ ಹುದ್ದೆಗಳ ಸೃಜನೆಗೆ ಹಣಕಾಸು ಇಲಾಖೆಗೆ ಕೆಎಸ್ಆರ್‌ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಉಮೇಶ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಸಮ್ಮಿತಿಸಿದೆ. ಈ ಹಿನ್ನೆಲೆಯಲ್ಲಿ ಮುಂಬಡ್ತಿ ನಿರೀಕ್ಷೆಯಲ್ಲಿರುವ ಕೆಎಸ್‌ಆರ್‌ಪಿ ಅಧಿಕಾರಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
