ಅಂದು ಸತ್ಯ ಮೇವ ಜಯತೆ ಹೋರಾಟಕ್ಕೆ ರಾಹುಲ್‌ ಚಾಲನೆ, ಬೆಂಗಳೂರಿನಲ್ಲಿ ಭಾರತ್‌ ಜೋಡೋ ಭವನ ಉದ್ಘಾಟನೆ, ರಾಜ್ಯ ಕಾಂಗ್ರೆಸ್‌ ಕಚೇರಿ ಇನ್ನು ಭಾರತ್‌ ಜೋಡೋ ಭವನ. 

ಬೆಂಗಳೂರು(ಏ.01): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಏ.5 ರಂದು ಕೋಲಾರದಿಂದ ಶುರುವಾಗಬೇಕಿದ್ದ ಸತ್ಯ ಮೇವ ಜಯತೆ ಹೋರಾಟದ ಚಾಲನಾ ಸಮಾವೇಶ ಏ.9ಕ್ಕೆ ಮುಂದೂಡಿಕೆಯಾಗಿದೆ.

ರಾಹುಲ್‌ ಗಾಂಧಿ ಅವರು ಕೋಲಾರದಲ್ಲಿ ನೀರವ್‌ ಮೋದಿ ಹಾಗೂ ಲಲಿತ್‌ ಮೋದಿಯ ಕಳ್ಳತನ, ಅವರನ್ನು ಬೆಂಬಲಿಸಿದ್ದ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಇದಕ್ಕಾಗಿ ಅವರಿಗೆ ಅನ್ಯಾಯವಾಗಿ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಕಾನೂನು ಬಾಹಿರವಾಗಿ ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಹೀಗಾಗಿ ಏಪ್ರಿಲ್‌ 9ರಂದು ರಾಹುಲ್‌ ಗಾಂಧಿ ಅವರು ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ‘ಸತ್ಯ ಮೇವ ಜಯತೆ’ ಹೋರಾಟ ಆರಂಭಿಸಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ದೇಶದ ಉದ್ದಗಲಕ್ಕೂ ನಡೆಯುವ ಈ ಹೋರಾಟವನ್ನು ಕೋಲಾರದಿಂದ ಶುರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷೆ ಪ್ರಶ್ನಿಸಲು ರಾಹುಲ್‌ ಗಾಂಧಿ ರೆಡಿ: ಮೋದಿ ಉಪನಾಮ ಟೀಕೆ ಕೇಸಲ್ಲಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ

ಈ ನಡುವೆ ಏ.9ರಂದು ನಡೆಯಬೇಕಿರುವ ರಾಹುಲ್‌ ಗಾಂಧಿ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಲು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ್‌ ಜೋಡೋ ಭವನ ಉದ್ಘಾಟನೆ:

ರಾಜ್ಯ ಕಾಂಗ್ರೆಸ್‌ ಪಕ್ಷವು ಕ್ವೀನ್ಸ್‌ ರಸ್ತೆಯಲ್ಲಿ 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಕಾಂಗ್ರೆಸ್‌ ನೂತನ ಕಚೇರಿಯನ್ನೂ ಏ.9 ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉದ್ಘಾಟಿಸಲಿದ್ದಾರೆ. ನೂತನ ಕಾಂಗ್ರೆಸ್‌ ಕಚೇರಿಗೆ ‘ಭಾರತ್‌ ಜೋಡೋ ಭವನ’ ಎಂದು ಹೆಸರಿಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.