Asianet Suvarna News Asianet Suvarna News

ಹಾನಗಲ್ಲ ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಗಾಳಿ..!

* ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ಲ ವಿಧಾನಸಭಾ ಕ್ಷೇತ್ರ
* ಈಗಾಗಲೇ ಜೆಡಿಎಸ್‌ ಅಭ್ಯರ್ಥಿ ಘೋಷಣೆ, ಬಿಜೆಪಿ ಇನ್ನೂ ನಿಗೂಢ
* ಕಾಂಗ್ರೆಸ್‌ನಲ್ಲಿ ಎಂದಿನಂತೆ ಕಚ್ಚಾಟ ಶುರು
 

Politics Started in Hangal Before Announce Byelection Date grg
Author
Bengaluru, First Published Jun 26, 2021, 12:31 PM IST

ನಾರಾಯಣ ಹೆಗಡೆ

ಹಾವೇರಿ(ಜೂ.26): ಹಾನಗಲ್ಲ ವಿಧಾನಸಭಾ ಕ್ಷೇತ್ರದ ಚುನಾವಣೆ ಇನ್ನೂ ಪ್ರಕಟವಾಗುವ ಮೊದಲೇ ರಾಜಕೀಯ ಬಿರುಗಾಳಿ ಬೀಸುತ್ತಿದೆ. ಕಾಂಗ್ರೆಸ್‌ನಲ್ಲಿ ಈಗಲೇ ಟಿಕೆಟ್‌ಗಾಗಿ ಕಚ್ಚಾಟ ಶುರುವಾಗಿದ್ದು, ಬಿಜೆಪಿ ನಡೆ ನಿಗೂಢವಾಗಿದೆ. ಜೆಡಿಎಸ್‌ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದು, ಎಲ್ಲ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ.

ಶಾಸಕ ಸಿ.ಎಂ. ಉದಾಸಿ ಅವರ ನಿಧನದಿಂದಾಗಿ ತೆರವಾದ ಶಾಸಕ ಸ್ಥಾನಕ್ಕೆ ಹಲವು ಲೆಕ್ಕಾಚಾರಗಳು ಹರಿದಾಡುತ್ತಿದೆ. ಆರು ತಿಂಗಳೊಳಗಾಗಿ ಆಯೋಗ ಚುನಾವಣೆ ನಡೆಸಬೇಕಿದೆ. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಆಯೋಗ ಯಾವಾಗ ಚುನಾವಣೆ ಘೋಷಣೆ ಮಾಡಲಿದೆ ಎಂಬುದು ಗೊತ್ತಿಲ್ಲ. ಆದರೆ, ಈಗಲೇ ಚುನಾವಣಾ ಚರ್ಚೆ ಜೋರಾಗಿ ನಡೆದಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಿಂದಿನ ಚುನಾವಣೆಯಲ್ಲಿ ಸೋತರೂ ಹಾನಗಲ್ಲ ಕ್ಷೇತ್ರದಲ್ಲಿ ಸಂಘಟನೆಯ ಮೂಲಕ ಬೀಡು ಬಿಟ್ಟಿರುವ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿದ್ದಾರೆ. ಆದರೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಬಣ ಹೊರಗಿನವರಿಗೆ ಅವಕಾಶ ಬೇಡ ಎಂದು ಪಟ್ಟು ಹಿಡಿದು ಈಗಲೇ ಹೋರಾಟಕ್ಕೆ ಕಿಚ್ಚು ಹಚ್ಚಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಹಾನಗಲ್ಲ ಕ್ಷೇತ್ರ ಬಿಜೆಪಿ ಹಾಗೂ ಸಿ.ಎಂ.ಉದಾಸಿಯವರ ಭದ್ರ ಕೋಟೆಯಾಗಿ ಬೇರಾರೂ ಆಕಾಂಕ್ಷಿಗಳು ಇದುವರೆಗೆ ಪೈಪೋಟಿ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಅವರ ನಿಧನದ ನಂತರ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಚರ್ಚೆಯ ವಸ್ತುವಾಗಿದೆ.

ಹಾನಗಲ್ಲ: ಹೊರಗಿನ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಡಿ, ತಹಶೀಲ್ದಾರ

ಸಿ.ಎಂ. ಉದಾಸಿಯವರ ನಿಧನದ ಅನುಕಂಪದ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೇ ಅವಕಾಶ ನೀಡಬಹುದು ಎಂಬ ಬಲವಾದ ಸುದ್ದಿಯೂ ಇದೆ. ಸಂಸದ ಶಿವಕುಮಾರ ಉದಾಸಿ ಕೇಂದ್ರದ ಮಂತ್ರಿಯಾಗುವರೆಂಬ ಸುದ್ದಿಯೂ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇರುವುದರಿಂದ ಈಗಲೇ ಶಿವಕುಮಾರ ಉದಾಸಿಯವರಿಗೆ ವಿಧಾನಸಭೆಗೆ ಕಳುಹಿಸಿದರೆ ಲೋಕಸಭಾ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಸಬೇಕಾಗಲಿದೆ. ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಬರುವರೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಉದಾಸಿ ಕುಟುಂಬ ಬಿಟ್ಟರೆ ಬೇರೆಯವರಿಗಾದರೆ ಯಾರಿಗೆ ಮಣೆ ಹಾಕಬಹುದು ಎಂಬ ಸುಳಿವು ಸಿಗುತ್ತಿಲ್ಲ.

ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದ ನಿಯಾಜ್‌ ಶೇಖ್‌ ಒಮ್ಮಿಂದೊಮ್ಮಲೆ ಪಕ್ಷ ತೊರೆದು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಅವರನ್ನೇ ಹಾನಗಲ್ಲ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಕಟಿಸಿದ್ದರೂ ಸ್ಥಳೀಯ ಕಾರ್ಯಕರ್ತರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ಜನಹಿತ ರಕ್ಷಣಾ ವೇದಿಕೆಯ ಬಿ.ಕೆ. ಮೋಹನಕುಮಾರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕ್ಷೇತ್ರದಲ್ಲಿ ತಮ್ಮದೇ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಜನರ ನಡುವೆ ಇದ್ದಾರೆ.

ಬಿಜೆಪಿಯಲ್ಲಿ ಎಬಿವಿಪಿ ಮೂಲಕ ಸಂಘ ಪರಿವಾರದ ಸಂಬಂಧದಲ್ಲಿ ರಾಜಕೀಯ ನೆಲೆ ಕಂಡುಕೊಂಡ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಪಕ್ಷ ಈ ಬಾರಿ ನನಗೆ ಅಭ್ಯರ್ಥಿಯಾಗುವ ಅವಕಾಶ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಸಂಘಟನೆ, ಸಂಘ ಪರಿವಾರದ ಆಶೀರ್ವಾದದಿಂದ ಅವಕಾಶ ಸಿಕ್ಕರೂ ಸಿಗಬಹುದು ಎಂಬ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಕೂಡ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಇದೆ.

ಹಾನಗಲ್ಲಿನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡಿದ ಮೋಟೆಬೆನ್ನೂರಿನ ಸಿ.ಆರ್‌. ಬಳ್ಳಾರಿ ನನಗೆ ಪಕ್ಷದ ಹಿರಿಯರ ಆಶೀರ್ವಾದವಿದೆ. ನಾನು ಹಾನಗಲ್ಲ ಅಭ್ಯರ್ಥಿ ಎಂದು ಮಠ ಮಂದಿರಗಳಿಗೆ ಓಡಾಡುತ್ತಿದ್ದಾರೆ. ಈ ನಡುವೆ ಕೃಷ್ಣ ಈಳಿಗೇರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ ಅವರು ಪಕ್ಷಕ್ಕಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದು, ನಮಗೆ ಅವಕಾಶ ಬೇಕೆಂದು ಪಕ್ಷದ ಕದ ತಟ್ಟಲು ಶುರು ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರ ಆಂತರಿಕ ಗೊಂದಲದಿಂದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಅಭ್ಯರ್ಥಿಯಾದರು. ಅಲ್ಲದೇ ಅಂದಿನಿಂದಲೂ ಕ್ಷೇತ್ರದ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ನಿರಂತರವಾಗಿ ಓಡಾಡಿದ್ದಾರೆ. ಆದರೆ, ಈವರೆಗೆ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲವಾದರೂ ಮತ್ತೊಂದು ಬಣ ಈಗಲೇ ಮಾನೆ ಅವರನ್ನು ಪರೋಕ್ಷವಾಗಿ ವಿರೋಧಿಸಲು ಆರಂಭಿಸಿದೆ. ಮಾಜಿ ಸಚಿವ ಮನೋಹರ ತಹಶೀಲ್ದಾರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಶಿವಯೋಗಿ ಹಿರೇಮಠ, ನಾಗಪ್ಪ ಸವದತ್ತಿ, ಸೋಮಶೇಖರ ಕೋತಂಬರಿ, ನಜೀರಸಾಬ ಸವಣೂರ ಮುಂತಾದವರು ಆಕಾಂಕ್ಷಿಗಳಿದ್ದಾರೆ. ಆದರೆ, ಶ್ರೀನಿವಾಸ ಮಾನೆ ಪಾಳಯದಲ್ಲಿ ಅವರ ಹೆಸರು ಮಾತ್ರ ಚಾಲ್ತಿಯಲ್ಲಿದೆ.

ಹಾನಗಲ್ ಬೈ ಎಲೆಕ್ಷನ್ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್?

ಹಾನಗಲ್ಲ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಎಂದರೆ ಅದು ಕೇವಲ ಸಿ.ಎಂ.ಉದಾಸಿ ಹಾಗೂ ಮನೋಹರ ತಹಶೀಲ್ದಾರ ನಡುವಿನ ಜಿದ್ದಾಜಿದ್ದಿಯ ಅಖಾಡವಾಗಿ ಹೆಸರು ಮಾಡಿದೆ. ಉಳಿದ ಯಾರೇ ಅಭ್ಯರ್ಥಿಯಾದರೂ ನೆಪ ಮಾತ್ರಕ್ಕೆ ಎಂಬಂತಿತ್ತು. ಆದರೆ, ಸಿ.ಎಂ.ಉದಾಸಿ ಅವರ ನಿಧನದಿಂದ ಕ್ಷೇತ್ರದಲ್ಲಿ ಹೊಸ ರಾಜಕೀಯ ಗಾಳಿ ಬೀಸುವುದಂತೂ ನಿಶ್ಚಯವಾಗಿದೆ. ಮುಂಬರುವ ಉಪ ಚುನಾವಣೆಗೆ ಹೊಸ ಮುಖಗಳು, ಪಕ್ಷಕ್ಕಾಗಿ ಶ್ರಮಪಟ್ಟವರು, ಯುವಕರಿಗೆ ಆದ್ಯತೆ ದೊರೆತು ಹಾನಗಲ್ಲ ಚುನಾವಣಾ ಇತಿಹಾಸಕ್ಕೆ ಹೊಸ ನೀರು ಬರಬಹುದೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಪಕ್ಷದ ಹಿರಿಯರೂ, ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದ ಸಿ.ಎಂ. ಉದಾಸಿ ಅವರ ನಿಧನದಿಂದ ನಾವಿನ್ನೂ ಹೊರಬಂದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್‌ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಪಕ್ಷದ ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ಸೂಚಿಸುವ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ತಿಳಿಸಿದ್ದಾರೆ. 

ಹಾನಗಲ್ಲ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಯಾರಾಗಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ. ಕ್ಷೇತ್ರದ, ಹೊರಗಿನ ಎಂಬ ಯಾವ ಅಂಶವೂ ಬರುವುದಿಲ್ಲ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಎಲ್ಲರನ್ನೂ ಕೂರಿಸಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಹೇಳಿದ್ದಾರೆ. 
 

Follow Us:
Download App:
  • android
  • ios