ಹಾನಗಲ್ಲ: ಹೊರಗಿನ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಡಿ, ತಹಶೀಲ್ದಾರ

* ಸಿ.ಎಂ. ಉದಾಸಿ ಅಕಾಲಿಕ ನಿಧನದಿಂದ ತೆರವಾದ ಹಾನಗಲ್ಲ ವಿಧಾನಸಭಾ ಕ್ಷೇತ್ರ
* ಹಾವೇರಿ ಜಿಲ್ಲೆಯ ಹಾನಗಲ್ಲ ವಿಧಾನಸಭಾ ಕ್ಷೇತ್ರ
* ಹಾನಗಲ್ಲ ತಾಲೂಕಿನ ಯಾರನ್ನೇ ಅಭ್ಯರ್ಥಿ ಮಾಡಿಡ್ರೂ ಒಟ್ಟಾಗಿ ಗೆಲ್ಲಿಸಲು ಶಪಥ 
 

Former MLA Manohar Tahashildar Talks Over Hangal By election grg

ಹಾನಗಲ್ಲ(ಜೂ.25): ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಹೊರಗಿನವರಿಗೆ ಮಣೆ ಹಾಕುವುದು ಸಾಕು. ತಾಲೂಕಿನಲ್ಲಿರುವ ಸಮರ್ಥರಿಗೆ ಅಭ್ಯರ್ಥಿ ಮಾಡಿ. ಇದರಲ್ಲಿ ಯಾವುದೆ ರಾಜೀ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಖಾರವಾಗಿ ಪ್ರತಿಕ್ರಿಯಿಸಿದರು.

ಗುರುವಾರ ಹಾನಗಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಶ್ರೀನಿವಾಸ ಮಾನೆ ಅವರಿಗೆ ಅಭ್ಯರ್ಥಿ ಮಾಡುವ ಮೂಲಕ ಹಾನಗಲ್ಲ ತಾಲೂಕಿನ ನಾಯಕರ ಅಭಿಪ್ರಾಯಗಳಿಗೆ ಹೈಕಮಾಂಡ್‌ ತಣ್ಣೀರೆರೆಚಿತು. ಪಕ್ಷದ ನಿಷ್ಠೆಯಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದು, ವಿಫಲವಾಯಿತು. ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿದ್ದರೆ ಗೆಲುವು ಖಚಿತವಾಗಿತ್ತು. ಈಗ ಕಾಲ ಮಿಂಚಿದೆ. ಬಿಜೆಪಿಯ ಶಾಸಕ ದಿ. ಸಿ.ಎಂ. ಉದಾಸಿ ಅವರ ಅಕಾಲಿಕ ನಿಧನದಿಂದ ತೆರವಾದ ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಇದೆ. ಆದರೆ, ಅದು ಸ್ಥಳೀಯ ಅಭ್ಯರ್ಥಿ ಇದ್ದರೆ ಮಾತ್ರ ಎಂದು ಖಡಾಖಂಡಿತವಾಗಿ ನುಡಿದರು.

ಬಿಜೆಪಿ ಹಿರಿಯ ಶಾಸಕ ಸಿ.ಎಂ.ಉದಾಸಿ ವಿಧಿವಶ

ಹಾನಗಲ್ಲ ತಾಲೂಕಿನ 25ಕ್ಕೂ ಅಧಿಕ ಕಾಂಗ್ರೆಸ್‌ ನಾಯಕರು ರಾಜ್ಯ ನಾಯಕ ಡಿ.ಕೆ. ಶಿವಕುಮಾರ, ಸಿದ್ಧರಾಮಯ್ಯ, ಸಲೀಂಅಹ್ಮದ, ಸತೀಶ ಜಾರ್ಕಿಹೊಳಿ, ಧೃವನಾರಾಯಣ, ಈಶ್ವರ ಖಂಡ್ರೆ ಅವರುಗಳನ್ನು ಭೇಟಿ ಮಾಡಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಯನ್ನು ಹಾಗೂ ಕಾಂಗ್ರೆಸ್‌ ಪಕ್ಷದಿಂದ ಕ್ಷೇತ್ರದ ಸ್ಥಳಿಯರಿಗೆ ಅಭ್ಯರ್ಥಿ ಮಾಡಬೇಕಾಗಿ ಒಮ್ಮತದ ನಿರ್ಣಯ ತಿಳಿಸಿದ್ದೇವೆ. ಹಾನಗಲ್ಲ ತಾಲೂಕಿನ ಯಾರನ್ನೆ ಅಭ್ಯರ್ಥಿ ಮಾಡಿದರೂ ಒಟ್ಟಾಗಿ ಗೆಲ್ಲಿಸಲು ಶಪಥ ಮಾಡಿದ್ದೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು, ಹಿರಿಯ ನಾಯಕರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಆಶಯ ಸಫಲಗೊಳ್ಳುವ ಭರವಸೆ ಇದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಕೊರೋನಾ ಕಾರಣದಿಂದ ಸಾರ್ವಜನಿಕವಾಗಿ ಈ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಹೋರಾಟ ಸಮಿತಿಯನ್ನು ರಚಿಸಿಕೊಂಡು ಇಡೀ ತಾಲೂಕಿನಾದ್ಯಂತ ಜನಜಾಗೃತಿ ಮೂಡಿಸಿ ಸ್ಥಳಿಯ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ. ರಾಜ್ಯ ನಾಯಕರಿಗೆ ನಮ್ಮ ನಿಲುವು ಸ್ಪಷ್ಟಪಡಿಸಿದ್ದಲ್ಲದೆ ಈ ಬಗ್ಗೆ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ, ಹೈಕಮಾಂಡ್‌ ಇಲ್ಲಿನ ವಾಸ್ತವವನ್ನು ತಿಳಿದುಕೊಳ್ಳಲಿ. ತಾಲೂಕು ಹಾಗೂ ಪಕ್ಷದ ಹಿತಕ್ಕಾಗಿ ನಮ್ಮ ನಿಲುವನ್ನು ರಾಜ್ಯ ಮತ್ತು ರಾಷ್ಟ್ರ ಹೈಕಮಾಂಡ್‌ ಒಪ್ಪಿಕೊಳ್ಳಲೇ ಬೇಕು ಎಂದರು.

ಕಾಂಗ್ರೆಸ್‌ ಮುಖಂಡರಾದ ನಾಗಪ್ಪ ಸವದತ್ತಿ, ಶಿವಯೋಗಿ ಹಿರೇಮಠ, ನಜೀರಸಾಬ ಸವಣೂರ, ಸೋಮಶೇಖರ ಕೋತಂಬರಿ, ಕೆ.ಎಲ್‌. ದೇಶಪಾಂಡೆ, ಮುತ್ತಣ್ಣ ನಾಶಿಕ, ಕೆ.ಟಿ. ಕಲಗೌಡ್ರ, ಎಚ್‌.ಎಚ್‌. ಕಲ್ಲೇರ, ಹಾಶಂಪೀರ ಇನಾಮದಾರ, ರವಿ ಚಿಕ್ಕೇರಿ, ಸುರೇಶ ದೊಡ್ಡಕುರುಬರ, ಶಂಕ್ರಣ್ಣ ಪ್ಯಾಟಿ, ಮಾಲತೇಶ ಸುಂಕದ ಮೊದಲಾದವರು ಇದ್ದರು.
 

Latest Videos
Follow Us:
Download App:
  • android
  • ios