ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಕಾಳಿ, ದೂದಗಂಗಾ, ವೇದಗಂಗಾ, ತುಂಗಭದ್ರಾ, ವರದಾ, ಮಹದಾಯಿ, ಭೀಮಾ ನದಿಗಳ ವ್ಯಾಪ್ತಿಯನ್ನು ಹಸಿರುಗೊಳಿಸುವ ಉತ್ಸುಕತೆಯನ್ನು ಈಗ ರಾಜಕೀಯ ಪಕ್ಷಗಳು ತೋರುತ್ತಿವೆ.
ಕರ್ನಾಟಕದಲ್ಲಿ ಇದು ಚುನಾವಣೆಯ ವರ್ಷ. ರಾಜಕೀಯ ಪಕ್ಷಗಳು ಚುನಾವಣಾ ತಂತ್ರಗಳನ್ನು ಶುರುವಿಟ್ಟುಕೊಂಡಿವೆ. ಅಧಿಕಾರಕ್ಕೆ ಏರಬೇಕು ಎಂಬ ಒಂದೇ ಗುರಿಯನ್ನು ಇಟ್ಟುಕೊಂಡು ಮತದಾರನತ್ತ ನಾನಾ ಭರವಸೆಗಳ ಬಾಣ ಬಿಡಲು ಆರಂಭಿಸಿವೆ. ಚುನಾವಣೆ ಬರುವಷ್ಟರಲ್ಲಿ ಈ ಭರವಸೆಗಳು ಮತಗಳಾಗಲಿ ಎಂಬ ಆಲೋಚನೆ ಪಕ್ಷಗಳದ್ದು. ಈ ಬಾರಿ ಉತ್ತರ ಕರ್ನಾಟಕದತ್ತ ಎಲ್ಲ ಪಕ್ಷಗಳು ಹೆಚ್ಚು ಗಮನ ನೀಡುತ್ತಿರುವುದು ಪ್ರಮುಖ ಬೆಳವಣಿಗೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿರುವ ಒಟ್ಟು 96 ವಿಧಾನಸಭೆ ಕ್ಷೇತ್ರಗಳಲ್ಲಿ ಎಷ್ಟುಸಾಧ್ಯವೋ ಅಷ್ಟುಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಮೂರು ಪಕ್ಷಗಳು ತಂತ್ರ ಹೆಣೆಯುತ್ತಿವೆ. ಅದಕ್ಕೆ ಆಯ್ದುಕೊಂಡಿದ್ದು ಕ್ಷೇತ್ರ ನೀರಾವರಿ. ಇದೊಂದನ್ನೇ ವಿಷಯವನ್ನಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ 96ರ ಗಂಟಿನಲ್ಲಿ ಎಷ್ಟುಸಾಧ್ಯವೋ ಅಷ್ಟನ್ನು ಪಕ್ಷಕ್ಕೆ ಎಳೆದುಕೊಳ್ಳಲು ಕಾತುರರಾಗಿದ್ದಾರೆ.
ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ 31 ಶಾಸಕರ ಕ್ಷೇತ್ರಗಳು, ಕಿತ್ತೂರು ಕರ್ನಾಟಕ, ಕರಾವಳಿ ಭಾಗದಲ್ಲಿರುವ 64 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಹಿಂದಿರುವ ಮರ್ಮ ಇಷ್ಟೆ. ಇಲ್ಲಿ ಗೆದ್ದು ಬರುವ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ 128 ಕ್ಷೇತ್ರಗಳಲ್ಲಿ (ದಕ್ಷಿಣ ಮತ್ತು ಕರಾವಳಿ ಭಾಗ) ಎಷ್ಟುಸಾಧ್ಯವೋ ಅಷ್ಟನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಅಧಿಕಾರಕ್ಕೇರುವ ದೂರದ ಗುರಿ ರಾಜಕೀಯ ಪಕ್ಷಗಳದ್ದು.
Land Slides:ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ
ಏನೇನು ನಡೆದಿದೆ ಕಸರತ್ತು?
ಉತ್ತರ ಕರ್ನಾಟಕದಲ್ಲಿ (ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಸೇರಿ) ನೀರಿನ ಮೂಲ ಸಾಕಷ್ಟಿದೆ. ಆದರೆ, ಸದ್ಬಳಕೆ ಆಗುತ್ತಿಲ್ಲ. ಕಾರಣ ಅದರ ಸದ್ಬಳಕೆಗೆ ಬೇಕಾದ ಅಗತ್ಯ ಯೋಜನೆಗಳಿಲ್ಲ. ಅದರ ಅನುಷ್ಠಾನವಿಲ್ಲ. ಕೃಷಿಯನ್ನೇ ನಂಬಿಕೊಂಡು ತಮ್ಮ ಬದುಕು ಕಟ್ಟಿಕೊಂಡ ಲಕ್ಷಾಂತರ ಕುಟುಂಬಗಳಿವೆ ಉ.ಕ. ಭಾಗದಲ್ಲಿ. ಆದರೆ, ಈ ಕೃಷಿ ಕುಟುಂಬಗಳು ಮಳೆಯನ್ನೇ ಆಧರಿಸಿಕೊಂಡಿವೆ. ಒಂದು ವೇಳೆ ನೀರಾವರಿಯನ್ನು ಸಮರ್ಪಕವಾಗಿ ಜಾರಿ ಮಾಡಿದರೆ ಈ ಕುಟುಂಬಗಳ ಆರ್ಥಿಕ ಮಟ್ಟದ ಜತೆಗೆ ಅವರ ಜೀವನಮಟ್ಟವನ್ನೂ ಸುಧಾರಿಸಲು ಸಾಧ್ಯ.
ಉಕ ಭಾಗದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಕಾಳಿ, ದೂದಗಂಗಾ, ವೇದಗಂಗಾ, ತುಂಗಭದ್ರಾ, ವರದಾ, ಮಹದಾಯಿ, ಭೀಮಾ ಸೇರಿದಂತೆ ಹತ್ತಾರು ನದಿಗಳು ರೈತರ ಬೆಳೆಗಳಿಗೆ ನೀರುಣಿಸಲಿರುವ ಪ್ರಮುಖ ನದಿಗಳು. ಈ ನದಿಗಳ ವ್ಯಾಪ್ತಿಯನ್ನು ಹೊಂದಿರುವ ವಿಧಾನಸಭಾ ಕ್ಷೇತ್ರಗಳಲ್ಲಿನ ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ ನೀಡಲು ಎಲ್ಲ ಪಕ್ಷಗಳು ಭರವಸೆಗೆ ಮುಂದಾಗುತ್ತಿವೆ. ಈ ಮೂಲಕ ಈ ಕ್ಷೇತ್ರಗಳನ್ನು ತಮ್ಮದಾಗಿಸುವ ತಂತ್ರ ಹೆಣೆಯುತ್ತಿವೆ ಪಕ್ಷಗಳು.
ಜೆಡಿಎಸ್ನ ಪಂಚರತ್ನ
ಜಾತ್ಯತೀತ ಜನತಾದಳವು ಈಗಾಗಲೇ ಜನತಾ ಜಲಧಾರೆ ಹೆಸರಿನಲ್ಲಿ ಸಮಗ್ರ ನೀರಾವರಿಯ ಕನಸನ್ನು ಬಿಚ್ಚಿಟ್ಟಿದೆ. ರಾಜ್ಯಾದ್ಯಂತ ಸಮಗ್ರ ನೀರಾವರಿ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆಯನ್ನು ನೀಡಿದೆ. ಮಾತ್ರವಲ್ಲ, 15 ಜಿಲ್ಲೆಗಳಲ್ಲಿನ ನದಿಯ ನೀರನ್ನು ಕಳಸದಲ್ಲಿ ಸಂಗ್ರಹಿಸಿದೆ ಜೆಡಿಎಸ್. ನುಡಿದಂತೆ ನಡೆದು ನೀರಾವರಿಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದೆ. ಸಮಗ್ರ ನೀರಾವರಿಗೆ ಪಣ ತೊಟ್ಟರೂ ಅದರ ಅನುಷ್ಠಾನ ಅಷ್ಟುಸುಲಭವಲ್ಲ ಎನ್ನುವುದು ಕೂಡ ಅರಿತಿರುವ ವಿಚಾರವೇ ಸರಿ.
Uttara Kannada ಸಹಾಯದ ನಿರೀಕ್ಷೆಯಲ್ಲಿ ವಿರೂಪಾಕ್ಷ ಕಟಗಿ
ಕೃಷ್ಣೆಯ ಕಡೆ ಕಾಂಗ್ರೆಸ್ ನಡಿಗೆ
ಕಾಂಗ್ರೆಸ್ ಕೂಡ ಈ ಹಿಂದೆ ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಯಾತ್ರೆ ಮಾಡಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಾವಿರಾರು ಕೋಟಿ ರು. ಕೊಡುವುದಾಗಿ ಹೇಳಿತ್ತು. ದಕ್ಷಿಣದಲ್ಲಿ ಮೇಕೆದಾಟು ಯೋಜನೆಗೆ ಕಾಲ್ನಡಿಗೆ ಜಾಥಾ ನಡೆಸಿತ್ತು. ಈಗ ಮಹದಾಯಿಗಾಗಿ ನವಲಗುಂದದಿಂದ ಮಹದಾಯಿ ನದಿಯ ತಾಣವಾಗಿರುವ ಬೆಳಗಾವಿವರೆಗೆ ಕಾಲ್ನಡಿಗೆ ನಡೆಸುವ ಉದ್ದೇಶವನ್ನು ಹೊಂದಿದೆ ಎಂಬುವುದು ರಹಸ್ಯವಾಗಿ ಏನೂ ಉಳಿದಿಲ್ಲ. ಇದೆಲ್ಲ ನಡುವೆ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಕೂಡ ಇತ್ತೀಚೆಗೆ ನವಲಗುಂದದಿಂದ ಸತತ 5 ದಿನಗಳ ಕಾಲ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಹೆಸರಿನಲ್ಲಿ 200 ಟ್ರ್ಯಾಕ್ಟರ್ಗಳಲ್ಲಿ ರಾರಯಲಿ ನಡೆಸಿದರು. ಕೃಷ್ಣಾ, ಮಹದಾಯಿ, ನವಲಿ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಈ ರಾರಯಲಿ ನಡೆದಿತ್ತು. ಈ ಹೋರಾಟ ನ್ಯಾಯಯುತವಾದದ್ದೇ. ಆದರೆ, ಅದರ ಅನುಷ್ಠಾನ ಯಾರು ಮಾಡಬೇಕು ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಬಿಜೆಪಿಗೂ ನೀರಾವರಿ ಆಸಕ್ತಿ
ಆಡಳಿತಾರೂಢ ಬಿಜೆಪಿ ಕೂಡ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ಜಲಸಂಪನ್ಮೂಲ ಸಚಿವರೇ ಆಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ನಲ್ಲಿ ಯುಕೆಪಿ-3 ಯೋಜನೆಗೆ .5000 ಕೋಟಿ ಮತ್ತು ಮಹದಾಯಿಗೆ .1000 ಕೋಟಿ ಹಣವನ್ನು ಘೋಷಣೆ ಮಾಡಿದ್ದಾರೆ.
ಇನ್ನು ಯುಕೆಪಿ-1 ಮತ್ತು 2ರ ಯೋಜನೆ ಅಡಿ ಬೂದಿಹಾಳ-ಪೀರಾಪುರ, ನಂದವಾಡಗಿ, ನಾರಾಯಣ ಬಲದಂತೆ (9ಎ) ವಿಸ್ತರಣೆಗೆ ಕ್ರಮ ಕೈಗೊಳ್ಳುವುದಾಗಿಯೂ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಇನ್ನೂ ಕಾರ್ಯಗತವಾಗದ ಕಳಸಾ ಬಂಡೂರಿಗೆ .1000 ಕೋಟಿ ಹಣ ಮೀಸಲು ಇಟ್ಟಿರುವುದು ಮುಂದೆ ಬರಲಿರುವ ಚುನಾವಣೆಯ ಉದ್ದೇಶವನ್ನಿಟ್ಟುಕೊಂಡೇ ಎನ್ನುವುದರಲ್ಲಿ ಅನುಮಾನ ಮೂಡದೇ ಇರದು. ಗೋವಾದಲ್ಲಿ ಮಾಂಡೋವಿ ನದಿ ಎನಿಸಿಕೊಂಡಿರುವ ಮಹಾದಾಯಿ ಕರ್ನಾಟಕದಲ್ಲಿ 29 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಮಾತ್ರವಲ್ಲ, ಕುಡಿಯುವ ನೀರಿಗಾಗಿ ಸಾಕಷ್ಟುಹೋರಾಟಗಳು ನಡೆದಿವೆ. ಮಾತ್ರವಲ್ಲ, ಜೀವಗಳು ಬಲಿಯಾಗಿವೆ. ಆದರೆ ಸಮರ್ಪಕ ಅನುಷ್ಠಾನ ಮಾತ್ರ ಇನ್ನೂ ನನಸಾಗಿಲ್ಲ.
ಚಾರಣ ಪ್ರಿಯರಿಗೆ ಯೋಗ್ಯಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ
ಉತ್ತರ ಕರ್ನಾಟಕದವರೇ ಜಲ ಸಚಿವರು
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾದರು. ಇದಕ್ಕೂ ಮೊದಲು ಬಿಜೆಪಿ ಅಧಿಕಾರ ಇದ್ದಾಗ ಹಾಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರು. 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆಗ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಖಾತೆ ನಿರ್ವಹಿಸಿದ್ದರು. ಅದಾದ ಬಳಿಕ 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆ ನಿರ್ವಹಿಸಿದ್ದರು.
ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಅವರ ಜಲಸಂಪನ್ಮೂಲ ಖಾತೆಯನ್ನು ಮುಧೋಳ ಕ್ಷೇತ್ರ ಶಾಸಕ ಗೋವಿಂದ ಕಾರಜೋಳ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಪ್ರಮುಖ ಅಂಶವೆಂದರೆ ಜಲಸಂಪನ್ಮೂಲ ಖಾತೆಯನ್ನು 2008ರಿಂದ (2018ರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ) ಉತ್ತರ ಕರ್ನಾಟಕದವರೇ ನಿರ್ವಹಿಸಿದ್ದಾರೆ. ಆದರೂ ನೀರಾವರಿಗೆ ಸಂಬಂಧಿಸಿದಂತೆ ಇನ್ನೂ ಸಾಕಷ್ಟುಅಭಿವೃದ್ಧಿಯಾಗಬೇಕಾದ ಅನಿವಾರ್ಯತೆ ಇದೆ.
ಎಂ.ಬಿ.ಪಾಟೀಲ್ ತಮ್ಮ ಅಧಿಕಾರಾವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ಸಾಕಷ್ಟುಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದಾರೆ. ಅಂದಾಜು 7 ಟಿಎಂಸಿಗೂ ಅಧಿಕ ನೀರು ಕೆರೆ ತುಂಬಿಸುವ ಯೋಜನೆಗೆ ಸದ್ಬಳಕೆಯಾಗುತ್ತದೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟುಅಂತರ್ಜಲ ಮಟ್ಟಹೆಚ್ಚಳವಾಗಿರುವುದರಲ್ಲಿ ಎರಡು ಮಾತಿಲ್ಲ. ಅದರಂತೆ ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಯೋಜನೆಯನ್ನು ತಮ್ಮ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದು ಇನ್ನೂ ಜನಮಾನಸದಲ್ಲಿದೆ.
ಅದರಂತೆ ರಮೇಶ್ ಜಾರಕಿಹೊಳಿ ತಮ್ಮ ಅಲ್ಪ ಅಧಿಕಾರವಧಿಯಲ್ಲಿ ಕಳಸಾ ಬಂಡೂರಿ ನದಿಯಿಂದ ಮಹಾದಾಯಿ ಯೋಜನೆಗೆ ಅಡ್ಡಿಯಾಗಿದ್ದ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಲು ಯತ್ನಿಸಿದರು. ಇದಕ್ಕಾಗಿ ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವರನ್ನು ಪದೇ ಪದೇ ಭೇಟಿಯಾಗಿ ರಾಜ್ಯಕ್ಕೆ ಬೇಕಾದ ಅಗತ್ಯ ಯೋಜನೆಗಳ ಜಾರಿಗೆ ಶ್ರಮಿಸಿದ್ದಾರೆ. ಸದ್ಯ ಕಾರಜೋಳ ಕೂಡ ಈ ನಿಟ್ಟಿನಲ್ಲಿ ದಿಟ್ಟಹೆಜ್ಜೆಯನ್ನಿಟ್ಟಿದ್ದಾರೆ. ಘಟಪ್ರಭಾ ಮಡಿಲಿನ ಕ್ಷೇತ್ರ ಮತ್ತು ಬೃಹತ್ ನದಿಯಾದ ಕೃಷ್ಣಾ ನದಿ ಸಂಗಮವಾಗುವ ಜಿಲ್ಲೆಯವರಾದ ಅವರು ಇನ್ನೊಂದು ವರ್ಷದಲ್ಲಿ ರೈತರ ಮತ್ತಷ್ಟುಭೂಮಿಯನ್ನು ಹಸಿರಾಗಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ.
Karwar:ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಇತರ ನಗರಗಳಿಗೆ ಮಾದರಿಯಾದ ಕಾರವಾರ ನಗರಸಭೆ!
ಅದರಂತೆ ನದಿ ಜೋಡಣೆ ಯೋಜನೆ ಕೂಡ ಈಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಉಕ ಭಾಗದಲ್ಲಿರುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಕಾಳಿ, ದೂದಗಂಗಾ, ವೇದಗಂಗಾ, ತುಂಗಭದ್ರಾ, ವರದಾ, ಮಹದಾಯಿ, ಭೀಮಾ ನದಿಗಳ ವ್ಯಾಪ್ತಿಯನ್ನು ಹಸಿರುಗೊಳಿಸುವ ಉತ್ಸುಕತೆಯನ್ನು ಈಗ ರಾಜಕೀಯ ಪಕ್ಷಗಳು ತೋರುತ್ತಿದ್ದು, ಪರೋಕ್ಷವಾಗಿ ಈ ವ್ಯಾಪ್ತಿಯ ಮತಗಳನ್ನು ತಮ್ಮ ಬುಟ್ಟಿಗೆ ಹಾಕುವ ಯತ್ನವನ್ನು ಈಗಿನಿಂದಲೇ ನಡೆಸಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
- ಬ್ರಹ್ಮಾನಂದ ಎನ್. ಹಡಗಲಿ. ಬೆಳಗಾವಿ
