Asianet Suvarna News Asianet Suvarna News

Uttara Kannada ಸಹಾಯದ ನಿರೀಕ್ಷೆಯಲ್ಲಿ ವಿರೂಪಾಕ್ಷ ಕಟಗಿ

ಉತ್ತರಕನ್ನಡ ಜಿಲ್ಲೆಯ ಶಿರಸಿ‌ ಚೌಕಿಮಠ ರಸ್ತೆಯಲ್ಲಿರುವ ಟಿ.ವಿ. ಸ್ಟೇಷನ್ ಬಳಿಯಿರುವ ವಿರೂಪಾಕ್ಷ ಬಸಪ್ಪಾ ಕಟಗಿ ಅವರು ತೀವ್ರತರನಾದ ಆರೋಗ್ಯ ಸಮಸ್ಯೆಯಿಂದ ಆರ್ಥಿಕ ಸಹಾಯದ ಮೊರೆ ಹೋಗಿದ್ದಾರೆ.

Sirsi from Uttara Kannada    based Handicap man Seeks economic Help  gow
Author
Bengaluru, First Published May 14, 2022, 10:28 AM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್

ಕಾರವಾರ (ಮೇ.14): ಶ್ರಮಜೀವಿಯಾಗಿದ್ದ ಅವರು ಹಲವು ವರ್ಷಗಳ ಕಾಲ ಲಾರಿ ಚಾಲಕನಾಗಿ ಕೆಲಸ ಮಾಡಿದ್ದರು. ಆದರೆ, ಕ್ರಮೇಣ ಸೊಂಟದ ಕೆಳಗೆ ಬಲ ಕಳೆದುಕೊಂಡು ಎರಡೂ ಕಾಲು ಗ್ಯಾಂಗ್ರೀನ್‌ಗೆ ಒಳಗಾಗಿ ಕಾಲುಗಳನ್ನು ಕೂಡಾ ಕಳೆದುಕೊಂಡರು. ಇಷ್ಟು ಸಾಲದು ಎಂಬಂತೆ ಕಿಡ್ನಿಯ ಸಮಸ್ಯೆ ಹೊಂದಿರುವ ಅವರು, ಬಳಿಕ ಲಿವರ್ ಸಮಸ್ಯೆ ಕೂಡಾ‌ ಎದುರಿಸುತ್ತಿದ್ದಾರೆ. ಒಂದೆಡೆ ಆದಾಯವಿಲ್ಲದೇ, ಮತ್ತೊಂದೆಡೆ ಬಡತನದ ಕಾರಣದಿಂದ ಡಯಾಲಿಸಿಸ್ ಮಾಡಿಸಲು ಕೂಡಾ ಹಣವಿಲ್ಲದೇ ಪ್ರಸ್ತುತ, ದಾನಿಗಳಿಂದ ಸಹಾಯದ ಯಾಚನೆಯಲ್ಲಿದ್ದಾರೆ.

ಇವರ ಹೆಸರು ವಿರೂಪಾಕ್ಷ ಬಸಪ್ಪಾ ಕಟಗಿ, 47 ವರ್ಷ. ಉತ್ತರಕನ್ನಡ ಜಿಲ್ಲೆಯ ಶಿರಸಿ‌ (Sirisi) ಚೌಕಿಮಠ ರಸ್ತೆಯಲ್ಲಿರುವ ಟಿ.ವಿ. ಸ್ಟೇಷನ್ ಬಳಿಯಿರುವ ಮನೆಯ ನಿವಾಸಿ. ರತ್ನಾ ಕಟಗಿ ಹಾಗೂ ಬಸಪ್ಪ ಕಟಗಿಯವರ ಎರಡನೇ ಪುತ್ರನಾಗಿರುವ ವಿರೂಪಾಕ್ಷ, ಶ್ರಮಜೀವಿಯಾಗಿದ್ದರು.‌ 1994ನೇ ಇಸವಿಯಲ್ಲಿ ಡ್ರೈವರ್ ವೃತ್ತಿಯನ್ನು ಪ್ರಾರಂಭಿಸಿದ ಇವರು, ತನ್ನ 32ನೇ ಪ್ರಾಯದಲ್ಲಿ ಸೊಂಟದ ನರದೌರ್ಬಲ್ಯದ ಸಮಸ್ಯೆ ಎದುರಿಸಿದ್ದರು.

ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!

2005ನೇ ಇಸವಿಯಲ್ಲಿ ಗ್ಯಾಂಗ್ರಿನ್‌ನಿಂದಾಗಿ ಒಂದು ಕಾಲು ಕಳೆದುಕೊಂಡರೂ ಕೃತಕ ಕಾಲು ಜೋಡಿಸಿಕೊಂಡು ತನ್ನ ಚಾಲಕ ವೃತ್ತಿ ಮುಂದುವರಿಸಿದ್ದರು. 2011ನೇ ಇಸವಿಯಲ್ಲಿ ಮತ್ತೊಂದು ಕಾಲಿಗೆ ಗ್ಯಾಂಗ್ರಿನ್ ಆಗಿ ಎರಡನೇ ಕಾಲನ್ನು ಕೂಡಾ ಕಳೆದುಕೊಂಡರು. ವೃತ್ತಿ ಮಾಡಲಾಗದೆ, ಜೀವನಕ್ಕೆ ಆದಾಯವೂ ಇಲ್ಲದೇ, ಮನೆಯ ಮೂಲೆಯಲ್ಲಿ ಬಿದ್ದುಕೊಳ್ಳುವಂತಹ ಸ್ಥಿತಿ ಇವರದ್ದಾಗಿತ್ತು. ಒಂದು ವರ್ಷದ ಬಳಿಕ ಕಿಡ್ನಿ ಕೂಡಾ ಫೇಲಾಗಿದ್ದರಿಂದ ಹಣದ ಕೊರತೆಯಿಂದ ಡಯಾಲಿಸಿಸ್ ಕೂಡಾ ಮಾಡಲಾಗದೆ, ತೀವ್ರ ಸಂಕಷ್ಟದಲ್ಲಿದ್ದಾಗ ಪ್ಯಾಂಪ್ಲೆಟ್ ಹಂಚುವ ಕೆಲಸ ಪ್ರಾರಂಭಿಸಿದ್ದರು. ಜನರು ನೀಡಿದ ಧನ ಸಹಾಯದಿಂದ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಪ್ರಾರಂಭಿಸಿದ್ದರಿಂದ ಸುಮಾರು 5 ವರ್ಷಗಳ ಕಾಲ ಸರಕಾರಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. 

ಆದರೆ, ಕೆಲವು ತಿಂಗಳಿನಿಂದ ಈ ವ್ಯಕ್ತಿಗೆ ಲಿವರ್ ಇನ್ಫೆಕ್ಷನ್ ಕೂಡಾ ಪ್ರಾರಂಭವಾಗಿರೋದ್ರಿಂದ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೂಡಾ ಮಾಡಲಾಗುತ್ತಿಲ್ಲ. ಲಿವರ್ ಇನ್ಫೆಕ್ಷನ್ ಇರುವ ವ್ಯಕ್ತಿಗಳಿಗೆ ಡಯಾಲಿಸಿಸ್ ಮಷಿನ್ ಪ್ರತ್ಯೇಕವಾಗಿರಬೇಕಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಸದ್ಯ ಹೊಟ್ಟೆಪಾಡಿಗಾಗಿ ವಿರೂಪಾಕ್ಷ ಅವರು ತನ್ನ ಅಣ್ಣ ರಿಕ್ಷಾ ಚಾಲಕ ರಾಚಪ್ಪ ಅವರನ್ನೇ ಅವಲಂಭಿಸಿದ್ದು, ಅವರು ದುಡಿದು ತಂದು ಮನೆಗೆ ಹಾಕುವುದರಲ್ಲೇ ವಿರೂಪಾಕ್ಷ ಕೂಡಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದಿನಾ ಬೆಳಗಾದ್ರೆ ಸಾಕು ತೆವಳುತ್ತಾ ಸಾಗಿ ತನ್ನ ಮೂರು ಚಕ್ರದ ವಾಹನ ಹತ್ತಿ ಹೊರಟು ರಸ್ತೆಯಲ್ಲಿ ಸಿಗುವವರಿಗೆಲ್ಲಾ ತನಗೆ ಸಹಾಯ ಮಾಡುವಂತೆ ಪ್ಯಾಂಪ್ಲೆಟ್ ಹಂಚುತ್ತಾ ಯಾರಾದ್ರೂ ಹಣ ನೀಡಿದಲ್ಲಿ ಅದನ್ನು ಒಟ್ಟುಗೂಡಿಸಿಕೊಂಡು ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ವಿರೂಪಾಕ್ಷ ಅವರ ಸ್ಥಿತಿ ಹೀಗಿದ್ದರೆ ಅವರ ತಾಯಿ ರತ್ನಾ ಕೂಡಾ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದಾರೆ. 

CRIS RECRUITMENT 2022: ರೈಲ್ವೆ ಮಾಹಿತಿ ಕೇಂದ್ರದಲ್ಲಿ ಇಂಜಿನಿಯರ್ ಉದ್ಯೋಗ

ಅಂದಹಾಗೆ, ವಿರೂಪಾಕ್ಷ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಂತೂ ಒಂದು ಡಯಾಲಿಸಿಸ್‌ಗೆ 2,500ರೂ. ಪಾವತಿ ಮಾಡಬೇಕಾಗಿದ್ದು, ಅವರ ಆರೋಗ್ಯ ಸರಿಯಿರಬೇಕೆಂದರೆ ವಾರಕ್ಕೆ ಎರಡು ಡಯಾಲಿಸಿಸ್, ಅಂದರೆ 5,000ರೂ. ಅಗತ್ಯವಾಗಿದೆ. ಅಲ್ಲದೇ, ರಕ್ತ ಸಂಬಂಧಿತ ಚಿಕಿತ್ಸೆಗಾಗಿ 6 ಇಂಜೆಕ್ಷನ್ ಪಡೆದುಕೊಳ್ಳುವುದು ಅನಿವಾರ್ಯವಾಗಿದ್ದು, ಇಲ್ಲಿ 1 ಇಂಜೆಕ್ಷನ್‌ಗೆ 1750ರೂ. ಪಾವತಿ ಮಾಡಬೇಕಾಗುತ್ತದೆ. ಇದರೊಂದಿಗೆ 6,000ರೂ. ಔಷಧಿಗೆ ಬೇಕಾಗಿದ್ದು, ಲಿವರ್ ಇನ್ಫೆಕ್ಷನ್‌ಗೆ ಪಡೆಯುವ ಒಂದು ಮಾತ್ರೆಗೆ 650ರೂ. ನೀಡಬೇಕಾಗುತ್ತದೆ. ಈ ಔಷಧಿಯನ್ನು ಮೂರು ತಿಂಗಳ ಕಾಲ ಪಡೆಯಬೇಕಾಗುತ್ತದೆ. ಒಟ್ಟು 6 ತಿಂಗಳ ಚಿಕಿತ್ಸೆಗಾಗಿ 3-4 ಲಕ್ಷ ರೂ. ಖರ್ಚಿದ್ದು, ಸದ್ಯಕ್ಕೆ ಇವರಿಗೆ  ಯಾವುದೇ ಆದಾಯವಿಲ್ಲದ್ದರಿಂದ ಚಿಕಿತ್ಸೆ ಪಡೆಯುವುದಾದರೂ ಹೇಗೆ ಎಂದು ಆಕಾಶ ನೋಡಿ ಕುಳಿತಿದ್ದಾರೆ.

ಸದ್ಯಕ್ಕೆ ಈಗಾಗಲೇ ಚಿಕಿತ್ಸೆಗಾಗಿ 1 ಲಕ್ಷ ರೂ. ಇತರರಿಂದ ಸಾಲವನ್ನು ಕೂಡಾ ಪಡೆದುಕೊಂಡಿದ್ದಾರೆ. ಪ್ರಸ್ತುತ, ಹಣವಿಲ್ಲದ ಕಾರಣ ಚಿಕಿತ್ಸೆ ಪಡೆಯದ್ದರಿಂದ ಉಸಿರಾಡಲು, ಆಹಾರ ಸೇವಿಸಲು, ಮಲ- ಮೂತ್ರ ಮಾಡಲು ಕೂಡಾ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ, ನೋವಿನಿಂದ ರಾತ್ರಿ ನಿದ್ರೆ ಮಾಡಲಾಗದಂತಹ ಪರಿಸ್ಥಿತಿ ಕೂಡಾ ಇವರದ್ದಾಗಿದೆ. ಈಗಾಗಲೇ ಸಹಾಯಕ್ಕಾಗಿ ದೇಶದ ಪ್ರಧಾನಿ, ಇನ್ಫೋಸಿಸ್‌ನ ಸುಧಾಮೂರ್ತಿ ಮುಂತಾದವರಿಗೆ ಪತ್ರದ ಮೂಲಕ ಸಾಕಷ್ಟು ಮನವಿ ಮಾಡಿಕೊಳ್ಳಲಾಗಿದ್ದರೂ, ಯಾವುದೇ ಸ್ಪಂದನೆ ದೊರಕಿಲ್ಲ. 

ಒಟ್ಟಿನಲ್ಲಿ ಹಲವು ರೀತಿಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿರೂಪಾಕ್ಷ ಕಟಗಿ ತಾನು ಜೀವಿಸಲು ಇದೀಗ ದಾನಿಗಳ ಮುಂದೆ ಮೊರೆಯಿಡುತ್ತಿದ್ದಾರೆ. ಕೆಲವು ತಿಂಗಳ ಕಾಲವಾದ್ರೂ ಔಷಧಿ ಪಡೆದು ಜೀವಿಸಲು ಸಹಾಯ ಮಾಡಿ ಎಂದು ಎಲ್ಲರ ಮುಂದೆ ಮನವಿ ಮಾಡುತ್ತಿದ್ದಾರೆ. ವಿರೂಪಾಕ್ಷ ಕಟಗಿ ಅವರಿಗೆ ಸಹಾಯ ಮಾಡಲಿಚ್ಛಿಸುವ ದಾನಿಗಳು ಈ ಮೂಲಕ ಸಹಾಯ ಮಾಡಬಹುದು. 

Canara Bank
A/c No: 03032250021930
IFSC Code: CNRB0010303
MICR Code: 581025103
Phone Pay: 7338211083 

Follow Us:
Download App:
  • android
  • ios