*  ಇಲ್ಲಿವರೆಗಿನ ಲೆಕ್ಕಾಚಾರ ಬೇರೆ, ಇವತ್ತಿಂದೆ ಬೇರೆ*  ಕಾರ್ಯಕರ್ತರ ನಿದ್ರೆಯಿಲ್ಲದ ರಾತ್ರಿ*  ರಾತ್ರಿ ಮತಕ್ಕಾಗಿ ತೆರೆದುಕೊಳ್ಳುವ ಕತ್ತಲ ರಾತ್ರಿ

ಮಯೂರ ಹೆಗಡೆ

ಹಾನಗಲ್ಲ(ಅ.29): ಇಲ್ಲಿಯವರೆಗಿನ ಲೆಕ್ಕವೇ ಬೇರೆ, ಕತ್ತಲ ರಾತ್ರಿಯ ಲೆಕ್ಕವೇ ಬೇರೆ!. ಹಾನಗಲ್ಲ(Hanagal) ಉಪಚುನಾವಣೆಗೆ(Byelection) ಒಂದೇ ದಿನ ಬಾಕಿ ಉಳಿದಿದೆ. ಕೊನೆಯ ಪ್ರಯತ್ನವಾಗಿ ಕತ್ತಲ ರಾತ್ರಿಯಲ್ಲಿ ಕಮಾಲ್‌ ಮಾಡಲು ಕಾಂಗ್ರೆಸ್‌(Congress), ಬಿಜೆಪಿಗಳು(BJP)ಮಂದಾಗಿರುವುದನ್ನು ಹಳ್ಳಿಗರು ಹೇಳುತ್ತಿದ್ದಾರೆ. ‘ಕೈ’ಗೆ ಎಷ್ಟು ಕೊಟ್ಟಾರ, ಕಮಲ ಎಷ್ಟು ಅರಳಿಸ್ಯಾರ ಎಂಬ ಮಾತುಗಳು ಕುಗ್ರಾಮದಲ್ಲೂ ಕೇಳಿ ಬರುತ್ತಿದೆ. ಕಾನೂನಿನ ರಂಗೋಲಿ ಕೆಳಗೆ ನುಸುಳಿ ಬಟವಡೆ ಕಾರ್ಯ ನಡೆಸಿದ್ದಾರೆ.

ಇಷ್ಟು ದಿನ ಸಮಾವೇಶ, ಬೈಕ್‌ ರಾರ‍ಯಲಿಗೆ ಜನರನ್ನು ತಮ್ಮ ಪರ ರಸ್ತೆಗಿಳಿಸಲು ಹಂಚಿಕೆ ಆಗುತ್ತಿದ್ದ ಪಕ್ಷಗಳ ಖಜಾನೆ ಪಾಲು ಗುರುವಾರ, ಶುಕ್ರವಾರ ರಾತ್ರಿ ಮತಕ್ಕಾಗಿ ತೆರೆದುಕೊಳ್ಳುತ್ತಿದೆ. ಗ್ರಾಮಸ್ಥರನ್ನು ಋುಣದಲ್ಲಿ ಕಟ್ಟಿ ಹಾಕಿ ಮತ ಗಿಟ್ಟಿಸಿಕೊಳ್ಳಲು ಕಾರ್ಯಕರ್ತರು(Activists) ಮನೆ ಮನೆಯ ಬಾಗಿಲು ತಟ್ಟುತ್ತಿದ್ದಾರೆ.

ಅಭ್ಯರ್ಥಿಗಳ(Candidates) ಹಣೆಬರಹ ನಿರ್ಧರಿಸುವ ತಿಳುವಳ್ಳಿ, ಶಿರಗೋಡ, ಅಕ್ಕಿಆಲೂರು, ಬೊಮ್ಮನಹಳ್ಳಿ, ನರೇಗಲ್ಲ ಗ್ರಾಮಗಳಲ್ಲಿ ಹಣದ ಚಲಾವಣೆ ಎಲೆಕ್ಷನ್‌ ಪ್ರಚಾರ ಆರಂಭದ ಬಳಿಕ ಹೆಚ್ಚಾಗಿದೆ. ಕತ್ತಲ ರಾತ್ರಿಯಲ್ಲಂತೂ ಇಲ್ಲಿ ಚಟುವಟಿಕೆ ಜೋರಾಗಲಿವೆ ಎಂಬ ಮಾತಿದೆ.

ಉಪಚುನಾವಣೆ ಕದನ: ಮನೆ ಮನೆ ಪ್ರಚಾರ ಜೋರು

ಈ ವರೆಗಿನ ಲೆಕ್ಕ:

ಪಕ್ಷವೊಂದು ಕೇವಲ ಒಂದು ಬೂತ್‌ಗೆ ಒಂದು ಲಕ್ಷ ರು. ವರೆಗೆ ನೀಡಿದೆ. ಇದು ಜನರನ್ನು ತನ್ನ ಪರ ಘೋಷಣೆ ಕೂಗಿಸಲು ಮಾತ್ರ ಖರ್ಚು ಮಾಡಿದ ಹಣ. ಇಲ್ಲಿವರೆಗಿನ ಚುನಾವಣೆಯಲ್ಲಿ(Election) ಚುನಾವಣಾ ಮುನ್ನಾದಿನ ಹೊರತುಪಡಿಸಿ ಬೂತ್‌ಗೆ ಇಷ್ಟೊಂದು ಹಣವನ್ನು ಕೇವಲ ಪ್ರಚಾರಕ್ಕೆ ಕೊಟ್ಟಿದ್ದು ಕಂಡಿರಲಿಲ್ಲ’ ಎಂಬ ಮಾತನ್ನು ಕಾರ್ಯಕರ್ತರೆ ಹಳ್ಳಿಗಳ ಚಹಾ ಅಂಗಡಿಗಳಲ್ಲಿ ಬಹಿರಂಗವಾಗಿ ಹೇಳುತ್ತಿದ್ದಾರೆ.

ಅದರಲ್ಲೂ ಭ್ರಷ್ಟತೆ!

‘ಪಕ್ಷದೋರು ಭಾಳ ದುಡ್ಡು ಕೊಟ್ಟಾರಂತ್ರಿ, ಇವರು ನಮಗ ಅಷ್ಟೊಂದ ಕೊಟ್ಟಇಲ್ರಿ, ಇವರ ರೊಕ್ಕಾ ಹೊಡದಾರ ಚುನಾವಣಿ ದುಡ್ಡನ್ಯಾಗ ದೊಡ್ಡೋರಕ್ಕಾರ’ ಎಂಬಂತ ಮಾತುಗಳನ್ನು ಕೂಡ ಪ್ರಚಾರದಲ್ಲಿ ಬಂದವರು ಆಡಿದ್ದುಂಟು. ಅಷ್ಟೇ ಅಲ್ಲ, ಆರು ಗಂಟೆ ಆಗೇತ್ರಿ, ನಮ್ಮ ಕೂಲಿ ಸಮಯ ಮುಗಿದದ ನೀವ ಕೊಡೊ . 400ಕ್ಕ ಎಷ್ಟೊತ್ತ ಇರಬೇಕು ಎಂಬ ಅಸಹನೆ ನುಡಿಯನ್ನೂ ಜಯ ಘೋಷಕರು ಹೇಳಿದ್ದಿದೆ. ಇವೆಲ್ಲ ಈ ವರೆಗೆ ಪ್ರಚಾರದ ಸಂದರ್ಭದಲ್ಲಿ ಕೇಳಿ ಬಂದ ಈ ವರೆಗಿನ ಕಾಂಚಾಣದ ಕುರಿತು ಲೆಕ್ಕಾಚಾರ.

ಹಾನಗಲ್ಲ, ಸಿಂದಗಿ ಎರಡೂ ಕಡೆ ಕಾಂಗ್ರೆಸ್‌ ಗೆಲುವು ಫಿಕ್ಸ್‌: ಸಿದ್ದರಾಮಯ್ಯ

ಕತ್ತಲ್‌ ರಾತ್‌:

ಆದರೆ, ಕತ್ತಲ ರಾತ್ರಿಯ ಲೆಕ್ಕಾಚಾರ ಬೇರೆ ಇದೆ. ಮತದಾನದ ಮುನ್ನಾದಿನದ ಶುಕ್ರವಾರದ ರಾತ್ರಿ ಎಂದರೆ ಅದು ಪಕ್ಷಗಳ ಕಾರ್ಯಕರ್ತರಿಗೆ ನಿದ್ರೆಯಿಲ್ಲದ ಅವಧಿ. ಊರೂರು, ಹಳ್ಳಿಗಳಲ್ಲಿ ಮನೆಗಳನ್ನು ಗುರುತಿಸಿ ಕೊಡುಗೆ ನೀಡಲು ಸಿದ್ಧತೆ ಆಗಿದೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನದ ವರೆಗೆ ಮನೆಮನೆಗೆ ತೆರಳಿ ಪ್ರಚಾರ ನಡೆಸಿದ ಬೂತ್‌, ಬ್ಲಾಕ್‌, ಹಳ್ಳಿಗಳ ಕೊಡುಗೈ ಮುಖಂಡರು ಬಳಿಕ ತಮಗೆ ಬಂದ ಪಾಲನ್ನು ವಿಭಾಗಿಸಿ ತಲುಪಿಸುವ ಕೆಲಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಈ ಬಾರಿ ಹೆಚ್ಚು:

ಹಿಂದೆ ಇಬ್ಬರ ನಡುವೆ ಹಣಾಹಣಿ ಇದ್ದಾಗ ಪ್ರಚಾರಕ್ಕೆ ಕರೆತರಲು 200-300 ಅಷ್ಟೇ ಕೊಡಲಾಗುತ್ತಿತ್ತು. ಅದಕ್ಕಿಂತ ಹೆಚ್ಚು ಕೊಡದಂತೆ ಇಬ್ಬರ ನಡುವೆ ಮಾತುಕತೆಗಳೂ ಆಗಿದ್ದವು ಎಂಬ ಮಾತು ಹಾನಗಲ್ಲ ಹಳ್ಳಿಗಳಲ್ಲಿ ಕೇಳಿಬರುತ್ತವೆ. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಿಂದ(General Election) ಮತ ಮೌಲ್ಯ ಹೆಚ್ಚಿಸಿಕೊಂಡಿದೆ. ಈ ಬಾರಿ ಒಂದು ಬಟನ್‌ ಒತ್ತಲು ಕಿಸೆ ತುಂಬಿಸಲಾಗುತ್ತಿದೆ ಎಂಬ ಮಾತಿದೆ. ಒಟ್ಟಾರೆ ಒಂದೆರಡು ರಾತ್ರಿಗಳಲ್ಲಿ ಕಾಂಚಾಣ ಕರಾಮತ್ತು ತೋರುತ್ತಾ? ಫಲಿತಾಂಶವೆ(Result) ತಲೆಕೆಳಗಾಗುತ್ತಾ ಎಂಬುಕ್ಕೆ ನ. 2ರಂದು ಉತ್ತರ ಸಿಗಲಿದೆ.

ಪ್ರಚಾರಕ್ಕ(Campaign), ವೋಟ್‌(vote) ಹಾಕಕಂತ ರೊಕ್ಕ ಕೊಟ್ಟಾರ್ರಿ. ಅವರು ಕೊಟ್ಟಮ್ಯಾಲ ಮತ್ತ ಅವ್ರೀಗ ವೋಟ್‌ ಹಾಕಬೇಕಲ್ಲ? ಅಂತ ಗ್ರಾಮದ ವೃದ್ಧ ಮಾರನಬೀಡ ತಿಳಿಸಿದ್ದಾರೆ.

ಎರಡೂ ಪಕ್ಷದೊರ ಹತ್ರನೂ ಜನ ಹಣ ತಗೊತಾರ. ಆದ್ರ ತಮಗ ಯಾರೀಗ ಕೊಡಬೇಕ ಆ ಅಭ್ಯರ್ಥಿಗ ವೋಟ್‌ ಕೊಡ್ತಾರ ಅಂತ ಶಿರಗೋಡ ಗ್ರಾಮಸ್ಥ ಹೇಳಿದ್ದಾರೆ.