ಬೆಂಗಳೂರು [ಮಾ.13]:  ನಗರದ ಹೊರ ವಲಯದ ರೆಸಾರ್ಟ್‌ನಲ್ಲಿರುವ ಮಧ್ಯಪ್ರದೇಶದ ಶಾಸಕ ಮನೋಜ್‌ ಚೌಧರಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಅವರ ತಂದೆ ನಾರಾಯಣ ಚೌಧರಿ ಮೇಲೆ ಪೊಲೀಸ್‌ ಗೂಂಡಾಗಿರಿ ನಡೆದಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

 ಸದಾಶಿವ ನಗರದ ತಮ್ಮ ನಿವಾಸದಲ್ಲಿ ಮಧ್ಯಪ್ರದೇಶದ ಶಾಸಕ ಮನೋಜ್‌ ಚೌಧರಿ ತಂದೆ ನಾರಾಯಣ ಚೌಧರಿ ಹಾಗೂ ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತೂ ಪಟ್ವಾರಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್‌ ಈ ಆರೋಪ ಮಾಡಿದರು.

ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತೂ ಪಟ್ವಾರಿ ಹಾಗೂ ಶಾಸಕ ಮನೋಜ್‌ ಚೌಧರಿ ಅವರ ತಂದೆ ನಾರಾಯಣ ಚೌಧರಿ ಅವರು ನಗರದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿರುವ ಶಾಸಕ ಮನೋಜ್‌ ಚೌಧರಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ. ಶಾಸಕರ ಭೇಟಿಗೆ ಹೋದ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರದೇಶದ ಶಿಕ್ಷಣ ಸಚಿವರು ಮತ್ತು ಶಾಸಕರ ತಂದೆಯನ್ನು ಎಳೆದಾಡಿದ್ದಾರೆ. ಭೇಟಿಗೆ ಅವಕಾಶವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಕೆಪಿಸಿಸಿಗೆ ಡಿಕೆಶಿ ಹೊಸ ಸಾರಥಿ: ಜೆಡಿಸ್, ಬಿಜೆಪಿಗೆ ಶುರುವಾಯ್ತಾ ಭೀತಿ?...

ಜೀತೂ ಪಟ್ವಾರಿ ಹಾಗೂ ನಾರಾಯಣ ಚೌಧರಿ ಅವರಿಗೆ ನಮ್ಮ ಕೈಲಾದ ಎಲ್ಲಾ ಸಹಕಾರ ನೀಡುತ್ತೇವೆ. ಬಿಜೆಪಿಯವರು ಏನು ಮಾಡುತ್ತಾರೆ, ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಗೊತ್ತಿದೆ. ಇದಕ್ಕೆ ಏನು ಪ್ರತಿತಂತ್ರ ಮಾಡಬೇಕು ಎಂಬುದು ನಮಗೂ ಗೊತ್ತಿದೆ. ಸದ್ಯಕ್ಕೆ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಮಧ್ಯಪ್ರದೇಶ ಶಾಸಕ ಮನೋಜ್‌ ಚೌಧರಿ ತಂದೆ ನಾರಾಯಣ ಚೌಧರಿ ಮಾತನಾಡಿ, ನನ್ನ ಮಗ ಮನೋಜ್‌ ಚೌಧರಿಯನ್ನು ಬಲವಂತವಾಗಿ ಕರೆ ತಂದು ರೆಸಾರ್ಟ್‌ನಲ್ಲಿ ಕೂಡಿಹಾಕಿದ್ದಾರೆ. ಮಗನನ್ನು ನೋಡಲು ಬಂದ ನನಗೆ ಅವಕಾಶ ನೀಡದ ಪೊಲೀಸರು ಹಲ್ಲೆ ಮಾಡಲು ಮುಂದಾದರು ಎಂದು ಆರೋಪಿಸಿದರು.

ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತೂ ಪಟ್ವಾರಿ ಮಾತನಾಡಿ, ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದ್ದು, ಜನರಿಗೆ ಮೋಸ ಮಾಡಿ ಮಧ್ಯಪ್ರದೇಶದ ಶಾಸಕರನ್ನು ಕರೆ ತಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಲಾಗಿದೆ. ಈ ಮೂಲಕ ಜನಪರ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಮನೋಜ್‌ ಚೌಧರಿ ತಮ್ಮ ಸಹೋದರ ಸಂಬಂಧಿಯಾಗಿರುವುದರಿಂದ ಅವರ ತಂದೆಯೊಂದಿಗೆ ಭೇಟಿಗೆ ಆಗಮಿಸಿದ್ದೇನೆ. ಆದರೆ, ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ. ಮಗನ ಭೇಟಿಗೆ ತಂದೆಗೆ ಅವಕಾಶ ನೀಡದೆ ಅಮಾನವಿಯವಾಗಿ ನಡೆದುಕೊಳ್ಳಲಾಗಿದ್ದು, ಶಿಕ್ಷಣ ಸಚಿವನಾಗಿದ್ದರೂ ತಮ್ಮನ್ನು ಪೊಲೀಸರು ಬಂಧಿಸುವ ಪ್ರಯತ್ನ ಮಾಡಿದ್ದು ಬೇಸರ ತಂದಿದೆ ಎಂದರು.

ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದಾರೆ. ಪ್ರಜಾಪ್ರಭುತ್ವದ ಹತ್ಯೆಕೋರರ ಜತೆಗೆ ಹೋಗದೇ ವಾಪಸ್‌ ಬರುವಂತೆ ಸಿಂಧಿಯಾ ಬಳಿ ಮನವಿ ಮಾಡಿದ್ದೇನೆ.

- ಜೀತೂ ಪಟ್ವಾರಿ, ಶಿಕ್ಷಣ ಸಚಿವ, ಮಧ್ಯಪ್ರದೇಶ ಸರ್ಕಾರ