ಕೇಸರಿ ಪಾಳೆಯದಲ್ಲಿ ಮಿಂಚಿನ ಸಂಚಲನ, ಬಿಜೆಪಿಗೆ ಕರ್ನಾಟಕ ಗೆದ್ದು ಕೊಡಲಿದ್ಯಾ ಮೋದಿ ಬೂಸ್ಟರ್..?
ಕರ್ನಾಟಕ ಗೆಲ್ಲೋಕೆ ಕರಾವಳಿಯಿಂದಲೇ ಮೋದಿ ರಣಕಹಳೆ..! ಕರ್ನಾಟಕ ಕೇಸರಿ ಪಡೆಗೆ ಗಜಕೇಸರಿ ಬಲ! ಇಮ್ಮಡಿಯಾಗಿದೆ ರಾಜ್ಯ ಬಿಜೆಪಿಯ ಚುನಾವಣಾ ಹುರುಪು..! ಮೋದಿ ಎಂಟ್ರಿಗೆ ರಾಜ್ಯ ಕೇಸರಿ ಪಾಳೆಯದಲ್ಲಿ ಮಿಂಚಿನ ಸಂಚಲನ..! ಬಿಜೆಪಿಗೆ ಕರ್ನಾಟಕ ಗೆದ್ದು ಕೊಡಲಿದ್ಯಾ ಮೋದಿ ಬೂಸ್ಟರ್..? ಮೋದಿ ಮೇಷ್ಟ್ರ ಆಗಮನದಿಂದ ರಾಜ್ಯ ಬಿಜೆಪಿಯ ಉತ್ಸಾಹ ಡಬಲ್
ಬೆಂಗಳೂರು, (ಸೆಪ್ಟೆಂಬರ್.05): ಮೋದಿ ಕರ್ನಾಟಕಕ್ಕೆ ಬರ್ತಾ ಇದಾರಂತೆ.. ಇದೊಂದು ಮಾತಿನಿಂದ ಕರ್ನಾಟಕದಲ್ಲಿ ಇರೋ ಮೋದಿ ಅಭಿಮಾನಿಗಳು ತುಂಬಾ ಕಾತರದಿಂದ ಕಾಯೋಕೆ ಶುರು ಮಾಡಿದ್ರು.. ಯಾಕೆಂದ್ರೆ ಮೋದಿ ಅನ್ನೋ ಹೆಸರು ಸಾಮಾನ್ಯ ರಾಜಕೀಯ ನೇತಾರನದ್ದಲ್ಲಾ, ಅದೆಷ್ಟೋ ಜನರ ಆರಾಧ್ಯ ದೈವ, ಅದೆಷ್ಟೋ ಜನರ ನಂಬಿಕೆ..ಅದೆಷ್ಟೋ ಜನರಿಗೆ ರಾಜಕೀಯ ಅನ್ನೋದ್ರ ಮೇಲೆ ಕಳೆದು ಹೋಗಿದ್ದ ಉತ್ಸಾಹ ಮರಳಿ ತಂದ ಹೆಸರು ಅದು..
ಇನ್ನೇನು 7 ತಿಂಗಳಿಗೆ ಕರ್ನಾಟಕದಲ್ಲಿ ವಿಧಾನಸಭಾ ರಣ ವೇದಿಕೆ ಸಜ್ಜಾಗಲಿದೆ. ಇಲ್ಲಿರೋ ಪ್ರಮುಖ ಮೂರು ಪಕ್ಷಗಳಿಗೆ ಗೆಲುವು ಒಂದೇ ಗುರಿ.ಈಗಾಗಲೇ ಎಲ್ಲಾ ತಯಾರಿಯೂ ಭರದಿಂದ ಸಾಗಿದೆ.. ಆದ್ರೆ ಒಂದು ಬ್ಯಾಂಗ್ ಓಪನಿಂಗ್ ಅನ್ನೋದು ಬೇಕಲ್ಲಾ.. ಸಿನೆಮಾದಲ್ಲಿ ಹೀರೋ ಎಂಟ್ರಿ ಅದ್ದೂರಿಯಾಗಿದ್ರೆ ಇಡೀ ಸಿನೆಮಾ ಕುತೂಹಲವಾಗಿರುತ್ತೆ ಅನ್ನೋ ಥರವೇ.. ಬಿಜೆಪಿಯಲ್ಲಿ ಒಬ್ಬ ಹೀರೋ ಇದ್ದಾನೆ, ಆ ಹೀರೋನಿಗೆ ಕೋಟಿ ಕೋಟಿ ಅಭಿಮಾನಿಗಳು.. ಹೋದಲ್ಲಿ ಬಂದಲ್ಲಿಆ ಹೀರೋನದ್ದೇ ಜಪ.. ಕೋಟಿ ಕೋಟಿ ಜನರ ಕುತೂಹಲದ ಕುರುಕ್ಷೇತ್ರಕ್ಕೆ ಆ ರಣಧೀರನ ಎಂಟ್ರಿ ಆಗಿಯೇ ಬಿಟ್ಟಿದೆ. ಬಿಜೆಪಿ ಪಾಳೆಯದ ಅತೀ ದೊಡ್ಡ ರಣಬೇಟೆಗಾರ, ಮತಬೇಟೆಗಾರ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕ ಕುರುಕ್ಷೇತ್ರಕ್ಕೆ ಕರಾವಳಿಯಿಂದಲೇ ರಣಕಹಳೆ ಮೊಳಗಿಸಿ ಬಿಟ್ಟಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಸಿದ್ರಾಮೋತ್ಸವ ಮಾದರಿಯಲ್ಲೇ ದಲಿತೋತ್ಸವ..!
ಮೋದಿ ಅಂದ್ರೆ ಅಭಯ.. ಮೋದಿ ಅಂದ್ರೆ ವಿಶ್ವಾಸ.. ಇಂಥದ್ದೊಂದು ಕೋಟೆ ಕಟ್ಟಿಕೊಂಡಿರೋ ಮೋದಿಯನ್ನ ಆರಾಧಿಸೋಕೆ ಯಾಕೆ ಜನ ಮುಗಿ ಬೀಳ್ತಾರೆ ಅಂದ್ರೆ ಅವರ ಟ್ರಾಕ್ ರೆಕಾರ್ಡ್ ಅಂಥದ್ದು.. ಸೋಲು ಅನ್ನೋದನ್ನ ಕನಸಲ್ಲೂ ಕಾಣದ ಸಮರವೀರ ಮೋದಿ.. ಮೋದಿ ಬರೋಕ್ಕಿಂತ ಮೊದಲು ಇದ್ದ ಮತದಾರರ ಮೂಡ್ ಮೋದಿ ಬಂದು ಹೋದ ಮೇಲೆ ಬದಲಾಗಿ ಬಿಡುತ್ತೆ.. ಒಂದೊಂದೇ ರಾಜ್ಯಗಳಲ್ಲಿ ಕೇಸರಿ ಪತಾಕೆ ಹುಗಿದು ಬಂದಿರೋ ಅಸಾಮಾನ್ಯ ಮೋದಿ. ಭಾರತದ ರಾಜ್ಯಗಳನ್ನು ಗೆಲ್ಲೋದಕ್ಕೆ ಕೇಸರಿ ಬತ್ತಳಿಕೆಯ ಬ್ರಹ್ಮಾಸ್ತ್ರ ಮೋದಿ. ಮೋದಿ ಹೈ ತೋ ಮುಮ್ಕಿನ್ ಹೈ ಅನ್ನೋದು ಎಲ್ಲಾ ರಾಜ್ಯಗಳ ಬಿಜೆಪಿಯ ಮಂತ್ರ.. ಬೆರಳೆಣಿಕೆಯ ಕೆಲ ರಾಜ್ಯಗಳನ್ನ ಬಿಟ್ರೆ ಮೋದಿ ಕಾಲಿಟ್ಟಲ್ಲೆಲ್ಲಾ ಬಿಜೆಪಿ ಜಯಭೇರಿ, ಜಯದ ನಗಾರಿ ಮೊಳಗುತ್ತಾ ಬಂದಿದೆ. ಈಗ ಮೋದಿ ಕಣ್ಣು ಬಿದ್ದಿರೋದು ಕರ್ನಾಟಕ ಕುರುಕ್ಷೇತ್ರದ ಮೇಲೆ.
ಬಿಜೆಪಿಗೆ ಕರ್ನಾಟಕ ಗೆದ್ದು ಕೊಡಲಿದ್ಯಾ ಮೋದಿ ಬೂಸ್ಟರ್..?
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರ್ನಾಟಕಕ್ಕೆ ಬಂದಿದ್ರು. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿಗೆ ಭೇಟಿ ಕೊಟ್ಟ ಮೋದಿ, ನವಮಂಗಳೂರು ಬಂದರು ಪ್ರಾಧಿಕಾರದ 3,800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ರು. ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ನಂತ್ರ ಕೂಳೂರಿನಲ್ಲಿರೋ ಗೋಲ್ಡ್ ಪಿಂಚ್ ಮೈದಾನದಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮೋದಿ ಮಾತನಾಡಿದ್ರು.
ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯವರು ಮೊಳಗಿಸಿದ ಮೊದಲ ರಣಕಹಳೆಯಿದು. ಅದೂ ಎಲ್ಲಿಂದ... ಬಿಜೆಪಿ ಭದ್ರಕೋಟೆ ಕರಾವಳಿಯಿಂದ. ಚುನಾವಣೆಗೆ 7 ತಿಂಗಳಿರೋವಾಗ್ಲೇ ಅಭಿವೃದ್ಧಿಯ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ನುಗ್ಗಿದ್ದಾರೆ ಕೇಸರಿ ಪಡೆಯ ಮೆಗಾ ಸ್ಟಾರ್ ಮೋದಿ. ಮೋದಿ ಎಂಟ್ರಿಗೆ ರಾಜ್ಯ ಕೇಸರಿ ಪಾಳೆಯದಲ್ಲಿ ಥೌಸಂಡ್ ವೋಲ್ಟ್ ಕರೆಂಟ್'ನ ಮಿಂಚಿನ ಸಂಚಲನವೇ ಎದ್ದು ಬಿಟ್ಟಿದೆ. ಹಾಗಾದ್ರೆ ಮೋದಿ ಬೂಸ್ಟರ್ ಬಿಜೆಪಿಗೆ ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಕೊಡಲಿದ್ಯಾ ಅನ್ನೋ ಕುತೂಹಲ ಗರಿಗೆದರಿದೆ.
ದೇಶದ ಮೂಲೆ ಮೂಲೆಗಳಲ್ಲಿ ಇವತ್ತು ಕೇಸರಿ ಬಾವುಟ ಹಾರ್ತಾ ಇದೆ ಅಂದ್ರೆ ಅದಕ್ಕೆ ಮೂಲ ಕಾರಣ ಮೋದಿ. ರಾಜ್ಯಗಳ ಮೇಲೆ ರಾಜ್ಯಗಳನ್ನು ಗೆಲ್ಲುತ್ತಾ ದಂಡಯಾತ್ರೆ ನಡೆಸುತ್ತಿರೋ ಮೋದಿ, ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆ ಏರಿಸಿದ್ದಾರೆ. ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಿಂದ ಹಿಡಿದು ಅತೀ ಚಿಕ್ಕ ರಾಜ್ಯ ಮಣಿಪುರದವರೆಗೆ ಮೋದಿ ಮ್ಯಾಜಿಕ್ ಮಾಡಿದ್ದಾರೆ. ರಣಬೇಟೆಗಾರನ ಮುಂದಿನ ಟಾರ್ಗೆಟ್ ಕರ್ನಾಟಕ.
ಮೋದಿ ಎಂಟ್ರಿಗೆ ರಾಜ್ಯ ಕೇಸರಿ ಪಡೆಯಲ್ಲಿ ಸಮರೋತ್ಸಾಹ..!
ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಪಣ ತೊಟ್ಟಿದ್ದಾರೆ. ಬಿಜೆಪಿ ವರಿಷ್ಠರಿಗೆ ಕರ್ನಾಟಕವನ್ನು ಗೆಲ್ಲೋದು ಯಾಕೆ ಅಷ್ಟೊಂದು ಇಂಪಾರ್ಟೆಂಟ್ ಗೊತ್ತಾ..? ಅದಕ್ಕೊಂದು ಬಲವಾದ ಕಾರಣವಿದೆ ವೀಕ್ಷಕರೇ... ಇಡೀ ದಕ್ಷಿಣ ಭಾರತದ ಮೇಲೊಮ್ಮೆ ಕಣ್ಣು ಹಾಯಿಸಿ ನೋಡಿ... ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ.. ಹೀಗೆ ದಕ್ಷಿಣ ಭಾರತದ ದೊಡ್ಡ ರಾಜ್ಯಗಳ ಪೈಕಿ ಬಿಜೆಪಿಯ ಸರ್ಕಾರದ ಆಡಳಿತವಿರೋದು ಒಂದೇ ರಾಜ್ಯದಲ್ಲಿ. ಅದು ಕರ್ನಾಟಕ ಮಾತ್ರ. ಗೋವಾ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆಯಾದ್ರೂ, ಅವೆರಡೂ ಆಟಕ್ಕುಂಟು ಲೆಕ್ಕಕ್ಕಿಲ್ಲ ರಾಜ್ಯಗಳು. ಹೀಗಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಬಿಜೆಪಿಗೆ ಹೆಬ್ಬಾಗಿಲು. ಆ ಹೆಬ್ಬಾಗಿಲ ಮೂಲಕವೇ ತೆಲಂಗಾಣ, ಆಂಧ್ರ, ಕೇರಳ, ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ಹರಸಾಹಸ ಮಾಡ್ತಾ ಇದೆ. ಕರ್ನಾಟಕದಲ್ಲಿ ಸೋತ್ರೆ ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲೇ ಕ್ಲೋಸ್. ಹೀಗಾಗಿ ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನಿಲ್ಲದ ಮಹತ್ವ. ಇದೇ ಕಾರಣದಿಂದ ಪ್ರಧಾನಿ ಮೋದಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆಪದಲ್ಲಿ ಚುನಾವಣೆಗೆ ಆರೇಳು ತಿಂಗಳು ಮೊದಲೇ ಅಖಾಡಕ್ಕಿಳಿದಿದ್ದಾರೆ.
ಕಡಲತಡಿಯಲ್ಲಿ ಬಿಜೆಪಿಯ ಹುರುಪು ಹೆಚ್ಚಿಸಿದ ಮೋದಿ
ಮಂಗಳೂರಿನ ಕೂಳೂರಿನಲ್ಲಿ ಬೃಹತ್ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಮೋದಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮುಂದೆ ತೆರೆದಿಟ್ರು. ಡಬಲ್ ಇಂಜಿನ್ ಸರ್ಕಾರ ಯಾಕೆ ಮುಕ್ಯ ಅನ್ನೋದನ್ನು ಜನರಿಗೆ ಮನದಟ್ಟು ಮಾಡಿಸಿದ್ರು. ನಂತ್ರ ರಾಜ್ಯ ಬಿಜೆಪಿ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಿದ ಮೋದಿ, ಮುಂದಿನ ವಿಧಾನಸಭಾ ಚುನಾವಣೆಗೆ ರಣತಂತ್ರಗಳನ್ನು ಹೆಣೆದ್ರು. ರಾಜ್ಯ ಕೇಸರಿ ಕಲಿಗಳಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿ, ಚುನಾವಣೆಗೆ ಹೇಗೆ ಸಜ್ಜಾಗ್ಬೇಕು ಅನ್ನೋದ್ರ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಅಷ್ಟಕ್ಕೂ ರಾಜ್ಯ ವಿಧಾನಸಭಾ ಚುನಾವಮೆ ಗೆಲ್ಲಲು ಪ್ರಧಾನಿ ಮೋದಿಯವರೇ ಬಿಜೆಪಿಗೆ ಟ್ರಂಪ್ ಕಾರ್ಡ್ ಯಾಕೆ ಗೊತ್ತಾ..? ಈ ಕೆಳಗಿದೆ ನೋಡಿ.
ಕರ್ನಾಟಕದ ಕಮಲ ಕೋಟೆಗೆ ಚುನಾವಣಾ ವರ್ಷದಲ್ಲಿ ಎದುರಾಗಿರೋ ವಿಘ್ನಗಳು ಒಂದಾ, ಎರಡಾ... ಅಷ್ಟ ದಿಕ್ಕುಗಳಲ್ಲಿ ಎದ್ದು ನಿಂತಿರೋ ಅಷ್ಟ ಚಕ್ರವ್ಯೂಹಗಳಲ್ಲಿ ಬಿಜೆಪಿ ಅಕ್ಷರಶಃ ಬಂಧಿಯಾಗಿದೆ. ಅದು ಬರೀ ಚಕ್ರವ್ಯೂಹ ಅಷ್ಟೇ ಅಲ್ಲ, ಕೋಟೆಯನ್ನೇ ಸುಡುತ್ತಿರೋ ಅಗ್ನಿಕುಂಡವೂ ಬೌದು. ಆ ಚಕ್ರವ್ಯೂಹದಿಂದ ಆ ಅಗ್ನಿಕುಂಡದಿಂದ ಬಿಜೆಪಿಯನ್ನು ಹೊರಗೆಳೆದು ಕುರುಕ್ಷೇತ್ರದ ರಣಕ್ಷೇತ್ರದಲ್ಲಿ ನಿಲ್ಲಿಸೋ ತಾಕತ್ತಿರೋದು ಪ್ರಧಾನಿ ಮೋದಿಯವರಿಗೆ ಮಾತ್ರ.
ರಾಜ್ಯಸರ್ಕಾರದ ವಿರುದ್ಧ ಈಗಾಗಲೇ ಅನೇಕ ಅಪವಾದಗಳು, ಆರೋಪಗಳು, ಅಕ್ರಮದ ದೂರುಗಳು ಕೇಳಿ ಬಂದಿದೆ. ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ 40% ಕಮಿಷನ್ ಆರೋಪವಾಗಿರಬಹುದು, PSI, KPTCL ಸೇರಿದಂತೆ ಭುಗಿಲೆದ್ದು ಕೂತಿರುವ ನೇಮಕಾತಿ ಹಗರಣಗಳು ಇರ್ಬಹುದು, ಸರ್ಕಾರ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆ, ಸ್ವಪಕ್ಷೀಯರಿಂದಲೇ ಸರ್ಕಾರದ ಬಗ್ಗೆ ಟೀಕೆ, ಅಸಮಾಧಾನಗಳು, ಬಿಜೆಪಿಯ ಶಕ್ತಿಯಾಘಿರುವ ಹಿಂದೂ ಕಾರ್ಯಕರ್ತರ ಕೊಲೆಗಳು, ನಿಷ್ಠಾವಂತ ಬಿಜೆಪಿಗರನ್ನು ಕೆರಳಿಸಿ ಬಿಟ್ಟಿದೆ.
ಇವೆಲ್ಲಾ ರಾಜ್ಯ ಬಿಜೆಪಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡ್ತಿರೋ ಸಮಸ್ಯೆಗಳು. ಚುನಾವಣಾ ವರ್ಷದಲ್ಲಿ ಎದುರಾಗಿರೋ ಈ ಸಾಲು ಸಾಲು ಸಮಸ್ಯೆಗಳು ಬಿಜೆಪಿಗೆ ಕೊಟ್ಟಿರೋ ಹೊಡೆತ ಅಷ್ಟಿಷ್ಟಲ್ಲ. ಅದ್ರಲ್ಲೂ ಕಾರ್ಯಕರ್ತರ ಕೊಲೆ ವಿರುದ್ಧ ಸ್ವತಃ ಬಿಜೆಪಿಗರೇ ರೊಚ್ಚಿಗೆದ್ದಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸ್ಥಳಕ್ಕೆ ಭೇಟಿಕೊಟ್ಟಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಬಿಜೆಪಿ ಕಾರ್ಯಕರ್ತರೇ ಸೇರಿಕೊಂಡು ಈ ರೀತಿ ಅಟ್ಟಾಡಿಸಿ ಬಿಟ್ಟಿದ್ರು. ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ ಯಾವ ಮಟ್ಟದಲ್ಲಿತ್ತು ಅನ್ನೋದಕ್ಕೆ ಅದೊಂದು ದೃಶ್ಯವೇ ಸಾಕ್ಷಿ. ಇದು ಒಂದ್ಕಡೆಯಾದ್ರೆ, ಹಿಂದುತ್ವದ ಮೇಲೆ ಚುನಾವಣೆ ನಡೆಸುವ ಆಲೋಚನೆಯಲ್ಲಿದ್ದ ಬಿಜೆಪಿ ವಿರುದ್ಧ ಕಟ್ಟರ್ ಹಿಂದುತ್ವವಾದಿಗಳೇ ತಿರುಗಿ ಬಿದ್ದಿದ್ದಾರೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಂಥವರು ಬಿಜೆಪಿ ವಿರುದ್ದ, ಸರ್ಕಾರದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸೋದಕ್ಕೆ ಶುರು ಮಾಡಿದ್ದಾರೆ. ಹೀಗೆ ಬಿಜೆಪಿ ಸರ್ಕಾರವನ್ನು ದಶದಿಕ್ಕುಗಳಲ್ಲೂ ಚಕ್ರವ್ಯೂಹ ಸುತ್ತಿಕೊಂಡಿದೆ. ಆ ಚಕ್ರವ್ಯೂಹವನ್ನು ಭೇದಿಸೋ ಶಕ್ತಿ, ತಾಕತ್ತಿರೋದು ಒಬ್ಬನಿಗೇ ಮಾತ್ರ... ಅವರೇ ಪ್ರಧಾನಿ ನರೇಂದ್ರ ಮೋದಿ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋ ಕನಸು ಕಾಣ್ತಿದೆ ಅಂದ್ರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ... ಮೋದಿ ಹೊರತಾಗಿ ಬಿಜೆಪಿ ಬತ್ತಳಿಕೆಯಲ್ಲಿ ಯಾವ ಅಸ್ತ್ರವೂ ಇಲ್ಲ... ಇದನ್ನು ನಾವ್ ಹೇಳ್ತಿಲ್ಲ, ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳ್ತಿರೋ ಮಾತುಗಳಿವು. ಸರ್ಕಾರದ ಕೊರಳಿಗೆ ಸುತ್ತಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು, ನಾನಾ ಹಗರಣಗಳು, ಕಾರ್ಯಕರ್ತರ ಮರ್ಡರ್, ಹಿಂದುತ್ವವಾದಿಗಳ ಆಕ್ರೋಶ... ಇವೆಲ್ಲದ್ರ ಜೊತೆ ರಾಜ್ಯ ಬಿಜೆಪಿಯನ್ನು ಕಾಡ್ತಿರೋ ಮತ್ತೊಂದು ದೊಡ್ಡ ಸಮಸ್ಯೆ ಅಂದ್ರೆ ಮಾಸ್ ಲೀಡರ್ ಫ್ಯಾಕ್ಟರ್.
ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿದ ನಂತರ ರಾಜ್ಯ ಬಿಜೆಪಿ ಮಾಸ್ ಲೀಡರ್ ಕೊರತೆ ಎದುರಿಸುತ್ತಿದೆ. ಬಿಎಸ್'ವೈ ಅವರ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಿದ್ರೂ, ಬೊಮ್ಮಾಯಿಗೆ ಮಾಸ್ ಲೀಡರ್ ಇಮೇಜ್ ಇಲ್ಲ. ಹೀಗಾಗಿ ಯಡಿಯೂರಪ್ಪನವರಿಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡುವ ಮೂಲಕ ಮತ್ತೆ ಅವರನ್ನೇ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಗಿದೆ.
ಆದ್ರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರೋದಕ್ಕೂ, ಸಂಸದೀಯ ಮಂಡಳಿಯ ಸದಸ್ಯರಾಗಿರೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದ್ರಲ್ಲೂ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯ... ಆ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟೇ ಬಿಎಸ್ವೈ ಅವ್ರಿಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಆದ್ರೆ ಇದು ಪೂರ್ತಿಯಾಗಿ ವರ್ಕೌಟ್ ಆಗತ್ತೆ ಅನ್ನೋ ನಂಬಿಕೆ ಸ್ವತಃ ಬಿಜೆಪಿ ನಾಯಕರಿಗೇ ಇಲ್ಲ. ಹೀಗಾಗಿ ಕೊನೆಗೆ ಮತಬೇಟೆಗೆ ಉಳಿದಿರೋದು ಒಂದೇ ಅಸ್ತ್ರ, ಒಂದೇ ಬ್ರಹ್ಮಾಸ್ತ್ರ. ಅದೇ ಮೋದಿ, ಪ್ರಧಾನಿ ನರೇಂದ್ರ ಮೋದಿ.