ಕಾಂಗ್ರೆಸ್ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಬೇರೂರಿದೆ: ಸಿದ್ದುಗೆ ಮೋದಿ ಗುದ್ದು
ಕರ್ನಾಟಕ ಸರ್ಕಾರ ಬಂದು ಕೇವಲ 2 ವರ್ಷಗಳು ಕಳೆದಿವೆ. ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ನೋಡಿ. ಮುಖ್ಯಮಂತ್ರಿ ಭೂ ಹಗರಣದ ಆರೋಪ ಎದುರಿಸುತ್ತಿದ್ದಾರೆ. ತನಿಖೆ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸೂಕ್ತ ತನಿಖೆ ಅಗತ್ಯ ಎಂದು ಕೋರ್ಟ್ ಹೇಳಿದೆ ಎಂದ ಪ್ರಧಾನಿ ನರೇಂದ್ರ ಮೋದಿ
ಸೋನಿಪತ್ (ಹರ್ಯಾಣ)(ಸೆ.26): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಬೇರೂರಿದೆ ಎಂದು ಆರೋಪಿಸಿದ್ದಾರೆ.
ಹರ್ಯಾಣದ ಸೋನಿಪತ್‌ನಲ್ಲಿ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವೈಫಲ್ಯಗಳ ಬಗ್ಗೆ ಮಾತನಾಡುತ್ತಲೇ ಸಿದ್ದರಾಮಯ್ಯ ಅವರನ್ನು ಒಳಗೊಂಡಿರುವ ಮುಡಾ ಹಗರಣದತ್ತ ಗಮನ ಸೆಳೆದರು. 'ಕರ್ನಾಟಕ ಸರ್ಕಾರ ಬಂದು ಕೇವಲ 2 ವರ್ಷಗಳು ಕಳೆದಿವೆ. ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ನೋಡಿ. ಮುಖ್ಯಮಂತ್ರಿ ಭೂ ಹಗರಣದ ಆರೋಪ ಎದುರಿಸುತ್ತಿದ್ದಾರೆ. ತನಿಖೆ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸೂಕ್ತ ತನಿಖೆ ಅಗತ್ಯ ಎಂದು ಕೋರ್ಟ್ ಹೇಳಿದೆ' ಎಂದು ಮೋದಿ ನುಡಿದರು.
ಮುಡಾ ಹಗರಣ: ಸಿದ್ದು ತನಿಖೆಗೆ 11 ಸಮರ್ಥನೆ ನೀಡಿದ ಹೈಕೋರ್ಟ್
'ಎಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೋ ಅಲ್ಲಿ ಅಸ್ಥಿರತೆ ಇರುತ್ತದೆ. ಕರ್ನಾಟಕದಲ್ಲಿ ಸಿಎಂ-ಡಿಸಿಎಂ (ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್) ನಡುವೆ ಜಟಾಪಟಿ ನಡೆದಿದೆ. ತೆಲಂಗಾಣ ಹಾಗೂ ಹಿಮಾಚಲದಲ್ಲೂ ಇದೇ ಕತೆ' ಎಂದರು. ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸಿದ ಮೋದಿ, 'ದಲಿತ ನಾಯಕರಾದ ಖರ್ಗೆ ಅವರ ತವರಿನಲ್ಲಿ ದಲಿತರ ಉದ್ಧಾರಕ್ಕೆ ನೀಡಲಾದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂಥ ಸರ್ಕಾರಹರ್ಯಾಣಕ್ಕೂ ಬೇಕೇ' ಎಂದು ವಾಲ್ಮೀಕಿ ನಿಗಮ ಹಗರಣ ಉಲ್ಲೇಖಿಸಿ ಪ್ರಶ್ನಿಸಿದರು.
ಬಳಿಕ ಹರ್ಯಾಣ ರಾಜಕೀಯದ ಬಗ್ಗೆ ಮಾತನಾಡಿದ ಅವರು, '10 ವರ್ಷಗಳ ಹಿಂದೆ ಇಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರೈತರ ಭೂಮಿಯನ್ನು ಲೂಟಿ ಮಾಡಿತ್ತು, ಕಾಂಗ್ರೆಸ್ ಹರ್ಯಾಣವನ್ನು ದಲಾಲರು (ದಲ್ಲಾಳಿಗಳು) ಮತ್ತು ದಾಮಾದ್‌ಗಳಿಗೆ (ಅಳಿಯಂದಿರಿಗೆ) ಹಸ್ತಾಂತರಿಸಿತ್ತು. ಈಗ ಮತ್ತೆ ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ಅಸ್ಥಿರತೆಗೆ ಮತ ಹಾಕಿ ಹರ್ಯಾಣವನ್ನು ಅಪಾಯಕ್ಕೆ ದೂಡಿದಂತೆ. ಅಪ್ಪತಪ್ಪಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಅದು ರಾಜ್ಯವನ್ನು ಸರ್ವನಾಶಗೊಳಿಸುತ್ತದೆ' ಎಂದು ಎಚ್ಚರಿಸಿದರು.