PM Modi In Karnataka: ಮೈಸೂರಿನ ಒಡೆಯರು, ಸರ್‌ಎಂವಿ ಅವರನ್ನು ನೆನೆದ ಪ್ರಧಾನಿ ಮೋದಿ!
ರಾಜ್ಯದ ಮೊದಲ ಎಕ್ಸ್‌ಪ್ರೆಸ್ ವೇ ಬೆಂಗಳೂರು-ಮೈಸೂರು ನಡುವಿನ 118 ಕಿಲೋಮೀಟರ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಆ ಬಳಿಕ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಮಂಡ್ಯ (ಮಾ.12): ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಂಘಟಿತ ಶ್ರಮದಿಂದ ನಿರ್ಮಾಣವಾಗಿರುವ ರಾಜ್ಯದ ಮೊದಲ ಎಕ್ಸ್‌ಪ್ರೆಸ್ ವೇ ಮೈಸೂರು-ಬೆಂಗಳೂರು ನಡುವಿನ 118 ಕಿಲೋಮೀಟರ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. 6 ಲೇನ್ ಆಕ್ಸೆಸ್ ಕಂಟ್ರೋಲ್ಡ್ ಹೈವೇ ಇದಾಗಿದ್ದು, ಎರಡೂ ಕಡೆ ಎರಡು ಮಾರ್ಗಗಳ ಸರ್ವೀಸ್ ರಸ್ತೆಯೊಂದಿಗೆ ದಶಪಥ ಹೆದ್ದಾರಿ ಇದಾಗಿದೆ. ಗೆಜ್ಜಲಗೆರೆಯಲ್ಲಿ ನಿರ್ಮಾಣವಾಗಿದ್ದ ಬೃಹತ್ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಆದಿ ಚುಂಚನಗಿರಿ ಮತ್ತು ಮೇಲುಕೋಟೆಯ ಗುರುಗಳಿಗೂ ನಮನ ಸಲ್ಲಿಸುತ್ತೇನೆ ಎಂದು ಮಾತಿನ ಆರಂಭದಲ್ಲಿ ಹೇಳಿದರು. ಈ ಎಕ್ಸ್‌ಪ್ರೆಸ್ ವೇಯಿಂದ ಮೈಸೂರು ಹಾಗೂ ಬೆಂಗಳೂರು ನಡುವಿನ ಪ್ರಯಾಣದ ಸಮಯ ಅರ್ಧಕ್ಕಿಂತ ಕಡಿಮೆಯಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಈ ಎಕ್ಸ್‌ಪ್ರೆಸ್ ವೇ ಚಿತ್ರಗಳು ವೈರಲ್ ಆಗಿದೆ. ಇಂದು ಮೈಸೂರು ಕುಶಾಲನಗರ ಎಕ್ಸ್‌ಪ್ರೆಸ್ ವೇಗೂ ಚಾಲನೆ ನೀಡಿದ್ದೇವೆ. ಈ ಎಲ್ಲಾ ಯೋಜನೆಗಳು ಈ ಕ್ಷೇತ್ರದ ವಿಕಾಸಕ್ಮೆ ವೇಗ ನೀಡುತ್ತದೆ. ಭಾರತದಲ್ಲಿ ಮೂಲಸೌಕರ್ಯದ ವಿಚಾರ ಬಂದಾಗ ಇಬ್ಬರ ಹೆಸರು ಖಂಡಿತಾ ಬರುತ್ತದೆ. ಅವರೆಂದರೆ ಕೃಷ್ಣರಾಜ ಒಡೆಯರ್ ಹಾಗೂ ಸರ್‌ಎಂ ವಿಶ್ವೇಶ್ವರಯ್ಯ. ಅವರಿಬ್ಬರೂ ಕೂಡ ಈ ಮಣ್ಣಿನವರು ಎಂದು ಪ್ರಧಾನಿ ಮೋದಿ ಹೇಳಿದರು.
ಇಡೀ ಜಗತ್ತು ಕೊರೋನಾ ಸಂಕಷ್ಟದಲ್ಲಿದ್ದರೂ, ಭಾರತ ಈ ಸಮಯದಲ್ಲೂ ಮೂಲಸೌಕರ್ಯ ವೃದ್ಧಿಗಾಗಿ ಗಮನ ನೀಡಿತ್ತು. ಈ ವರ್ಷದ ಬಜೆಟ್‌ನಲ್ಲಿ 10 ಲಕ್ಷ ಕೋಟಿಯನ್ನು ಮೂಲಭೂತ ಸೌಕರ್ಯಗಳಿಗಾಗಿ ನೀಡಿದ್ದೇವೆ ಎಂದು ಹೇಳಿದರು. ಇದೇ ವೇಳೆ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಮೋದಿ, ಕಾಂಗ್ರೆಸ್ ಸರ್ಕಾರ ಎಂದಿಗೂ ಬಡವರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಅವರಿಗಾಗಿ ಮೀಸಲಿಟ್ಟ ಅಷ್ಟೂ ಹಣವನ್ನು ಲೂಟಿ ಮಾಡಿದವು. ಬಡವರ ಮನೆಗೆ, ನೀರು, ಗ್ಯಾಸ್ ಸಂಪರ್ಕ ನೀಡಿದ್ದು ನಮ್ಮ ಸರ್ಕಾರ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡಿದ್ದೇವೆ: ನಮ್ಮ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣ ನೀಡಿದ್ಧೇವೆ. ರಾಜ್ಯದ ನೀರಾವರಿ ಸಮಸ್ಯೆಗಳನ್ನು ಈಡೇರಿಸುವುದು ನಮ್ಮ ಗುರಿ. ಪಿಎಂ ಕಿಸಾನ್ ಯೋಜನೆಯಿಂದ ಕರ್ನಾಟಕದ ರೈತರಿಗೆ 12 ಸಾವಿರ ಕೋಟಿಗೂ ಅಧಿಕ ಹಣ ನೇರವಾಗಿ ಬಂದಿದೆ. ಮಂಡ್ಯದ 3.75 ಲಕ್ಷ ರೈತರು ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಾಗಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇರುವ ಕಾರಣಕ್ಕೆ ರೈತರಿಗೂ ಡಬಲ್ ಲಾಭ ಆಗುತ್ತಿದೆ ಎಂದು ಹೇಳಿದರು.
PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!
ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಿಎಂ ಬಸವರಾಜ ಬೊಮ್ಮಾಯಿ, ಎಸ್ ಟಿ ಸೋಮಶೇಖರ್, ಪ್ರತಾಪ್ ಸಿಂಹ, ಸುಮಲತಾ, ನಾರಾಯಣ್ ಗೌಡ, ಪ್ರಹ್ಲಾದ್ ಜೋಷಿ ಹಾಗೂ ಗೋಪಾಲಯ್ಯ ಉಪಸ್ಥಿತರಿದ್ದರು. ಇದೇ ವೇಳೆ ಮಂಡ್ಯದ ರೈತರನ್ನು ಪ್ರತಿನಿಧಿಸುವ ಹಸಿರು ಶಾಲನ್ನು ಸಿಎಂ ಬೊಮ್ಮಾಯಿ ಮೋದಿ ಅವರಿಗೆ ಹಾಕಿದರೆ, ಮೈಸೂರು ಮಲ್ಲಿಗೆಯ ಮಾಲೆಯಲ್ಲಿ ಎಸ್‌ಸಿ ಟಿ ಸೋಮಶೇಖರ್ ಹಾಕಿದರು. ಸಂಸದ ಪ್ರತಾಪ್ ಸಿಂಹ ಪ್ರಧಾನಿ ಮೈಸೂರು ಪೇಟವನ್ನು ಹಾಕಿದರೆ, ಇತ್ತೀಚೆಗೆ ಬಿಜೆಪಿಗೆ ಬೆಂಬಲ ಘೋಷಿಸಿದ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಮಂಡ್ಯದ ಸಾವಯವ ಬೆಲ್ಲವನ್ನು ಪ್ರಧಾನಿಗೆ ವಿಶೇಷ ಉಡುಗೊರೆಯಾಗಿ ನೀಡಿದರು. ಇನ್ನು ಗೋಪಾಲಯ್ಯ ಹಾಗೂ ನಾರಾಯಣಗೌಡ, ರೋಸ್‌ವುಡ್‌ನಲ್ಲಿ ನಿರ್ಮಿಸಲಾದ ಆನೆಯ ಪ್ರತಿಕೃತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.
PM Modi In Karnataka: ಸುಮಲತಾರನ್ನು ಸ್ವಾಗತಿಸಿದ ಪ್ರತಾಪ್ ಸಿಂಹ, ಪೊಲೀಸರ ಜೊತೆ ಕಾರ್ಯಕರ್ತರ ಕಿರಿಕ್!
ಸಮಾವೇಶದ ವೇದಿಕೆ ಏರುವ ಮುನ್ನ, ವೇದಿಕೆಯ ಹಿಂಭಾಗದಲ್ಲಿ ರಸ್ತೆ ಕಾಮಗಾರಿಯ ಕುರಿತಾದ ಗ್ಯಾಲರಿ ವೀಕ್ಷಿಸಿದರು. ರಸ್ತೆ ಹಿಂದೆ ಹೇಗಿತ್ತು? ಕಾಮಗಾರಿಯ ವೇಳೆ ತೆಗೆದಂತ ಚಿತ್ರಗಳನ್ನು ಮೋದಿ ವೀಕ್ಷಿಸಿದರು. ಈ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತರಿದ್ದರು.