Asianet Suvarna News Asianet Suvarna News

Lok Sabha Election 2024: ಕರ್ನಾಟಕದ ಬೂತ್‌ಗಳಿಗೆ ಮೋದಿ +370 ಮತ ಗುರಿ..!

ಒಂದೊಂದು ಮತವೂ ಮುಖ್ಯವಾದದ್ದು. ಯಾವುದೇ ಕಾರಣಕ್ಕೂ ಕೇವಲ ಒಂದು ಮತ ಎಂದು ನಿರ್ಲಕ್ಷಿಸಬೇಡಿ. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ಹೇಳಿದರು.

PM Narendra Modi +370 Vote Target for Karnataka Booths in Lok Sabha Election 2024 grg
Author
First Published Apr 6, 2024, 4:16 AM IST

ಬೆಂಗಳೂರು(ಏ.06):  ಕರ್ನಾಟಕದ ಪ್ರತಿ ಬೂತ್‌ಗಳಲ್ಲಿ ಕಳೆದ ಬಾರಿಗಿಂತ 370 ಮತಗಳು ಹೆಚ್ಚುವರಿಯಾಗಿ ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ನೀಡಿದ್ದಾರೆ.
ಶುಕ್ರವಾರ ಸಂಜೆ ನಮೋ ಆ್ಯಪ್‌ ಮೂಲಕ ನಡೆದ ರಾಜ್ಯದ ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಸೂಚನೆ ನೀಡಿದರು. ಒಂದೊಂದು ಮತವೂ ಮುಖ್ಯವಾದದ್ದು. ಯಾವುದೇ ಕಾರಣಕ್ಕೂ ಕೇವಲ ಒಂದು ಮತ ಎಂದು ನಿರ್ಲಕ್ಷಿಸಬೇಡಿ. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ಮೈಸೂರಿನ ಕಾರ್ಯಕರ್ತ ರಾಜೇಶ್, ಶಿವಮೊಗ್ಗದ ಕಾರ್ಯಕರ್ತೆ ಸರಳಾ, ಬೆಳಗಾವಿಯ ಕಾರ್ಯಕರ್ತೆ ಶ್ರುತಿ ಆಪ್ಟೇಕರ್ ಹಾಗೂ ಉಡುಪಿಯ ಕಾರ್ಯಕರ್ತ ಸುಪ್ರೀತ್ ಭಂಡಾರಿ ಅವರ ಜೊತೆ ಮೋದಿ ಅವರು ಸಂವಾದ ನಡೆಸಿ ಆ ಮೂಲಕ ರಾಜ್ಯದ ಎಲ್ಲ ಬೂತ್ ಅಧ್ಯಕ್ಷರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಮೋದಿ, ದೇವೇಗೌಡ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ

ಆರಂಭದಲ್ಲೇ ಜಗಜ್ಯೋತಿ ಬಸವೇಶ್ವರರ ನಾಡಾಗಿರುವ ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಖುಷಿ ಆಗುತ್ತಿದೆ ಎಂದು ಹೇಳಿದ ಅವರು ಕೆಂಪೇಗೌಡ, ಸರ್ ಎಂ.ವಿಶ್ವೇಶ್ವರಯ್ಯ ಹೆಸರು ಪ್ರಸ್ತಾಪ ಮಾಡಿದರು.
ಚುನಾವಣೆಗೆ ಈಗ ಸಮಯ ಕಡಮೆಯಿದೆ. ಕೆಲಸ ಜಾಸ್ತಿಯಿದೆ. ಕೆಲಸದ ಹಂಚಿಕೆ ಹೇಗೆ ಆಗುತ್ತಿದೆ? ಸಮಯ ಹೇಗೆ ಹೊಂದಿಸುತ್ತಿದ್ದೀರಿ? ಪೇಜ್ ಪ್ರಮುಖರ ಜತೆ ಸಭೆ ಮಾಡುತ್ತಿದ್ದೀರಾ? ಚುನಾವಣಾ ಪ್ರಚಾರ ಸಾಮಗ್ರಿಗಳು ತಲುಪಿವೆಯೇ? ಪ್ರತಿದಿನ ಎಷ್ಟು ಮನೆಗಳಿಗೆ ಸಂಪರ್ಕ ಮಾಡುತ್ತಿದ್ದೀರಾ? ರಾಮಮಂದಿರದ ಸ್ಥಾಪನೆ ವಿಷಯ ಎಷ್ಟರ ಪ್ರಭಾವ ಬೀರಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

ಸಂಘಟನೆಗೆ ಹೆಚ್ಚು ಸಮಯ ನೀಡಬೇಕಿದೆ. ಮತದಾರರಿಗೆ ನಾವು ರಿಪೋರ್ಟ್ ಕಾರ್ಡ್ ನೀಡಬೇಕಾಗಿದೆ. ಪೇಜ್ ಪ್ರಮುಖರ ಮೂವರ ಗುಂಪು ಮಾಡಿಕೊಂಡು ಪ್ರತಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು. ಅದರಲ್ಲಿ ಒಬ್ಬರು ಮಹಿಳೆ ಇರುವುದು ಕಡ್ಡಾಯ. ಒಂದೊಂದು ಮನೆಯಲ್ಲಿ ಅರ್ಧ ಗಂಟೆ ಕಾಲ ಕಳೆಯಬೇಕು. ಪ್ರಚಾರ ಒಂದು ಕಡೆಯಾದರೆ ಬಿಜೆಪಿಗೆ ಮತ ನಿಶ್ಚಿತ ಮಾಡಿಕೊಳ್ಳುವುದು ಮತ್ತೊಂದು ಕಡೆ. ನೀರು ಕುಡಿಯುತ್ತ, ಕಾಫಿ ಕುಡಿಯುತ್ತಲೇ ಜನರೊಂದಿಗೆ ಹರಟೆ ಹೊಡೆಯಬೇಕು. ಜತೆ ಜತೆಗೇ ಮತ ನಿಶ್ಚಿತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಯುವಕರು, ಹಿರಿಯ ನಾಗರಿಕರು, ಮಹಿಳೆಯರು ಹೀಗೆ ಮತದಾರರ ವಯೋಮಾನದ ಆಧಾರದ ಮೇಲೆ ಬೇರೆ ಬೇರೆ ವಿಷಯ ಮಾತಾಡಬೇಕು. ಎಲ್ಲರಿಗೂ ಒಂದೇ ರೀತಿ ಮಾತನಾಡಿದರೆ ಪ್ರಯೋಜನವಿಲ್ಲ. ಒಂದು ಪುಟ್ಟ ಪುಸ್ತಕ ಇಟ್ಟುಕೊಳ್ಳಬೇಕು. ಯಾರೊಂದಿಗೆ ಏನು ಮಾತನಾಡಬೇಕು ಎನ್ನುವುದನ್ನು ಅದರಲ್ಲಿ ನಮೂದಿಸಿಕೊಳ್ಳಬೇಕು. ಒಟ್ಟಿನಲ್ಲಿ ಮತದಾರರ ಹೃದಯ ಗೆಲ್ಲಬೇಕು ಎಂದರು.

ಮತದಾರರ ಪಟ್ಟಿ ಇಟ್ಟುಕೊಂಡು ಪ್ರತಿಯೊಂದು ಮನೆಗೆ ಹೋದಾಗ ಮತದಾನದ ದಿನ ಅವರು ಇರುತ್ತಾರೋ ಇಲ್ಲವೋ ಎಂಬುದನ್ನು ನಮೂದಿಸಿಕೊಳ್ಳಬೇಕು. ಹೊರಗೆ ಹೋಗುವವರಿಗೆ ಮತ ಚಲಾಯಿಸಿಯೇ ಹೋಗುವಂತೆ ಮನವಿ ಮಾಡಬೇಕು. ಮತದಾರರಿಗೆ ಅನುಕೂಲವಾಗುವಂತೆ ಅವರನ್ನು ಮತಗಟ್ಟೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು. ಲೋಕಸಭಾ ಚುನಾವಣೆ ಗೆಲ್ಲಬೇಕು ಎಂದರೆ ಮತಗಟ್ಟೆಗಳನ್ನು ಗೆಲ್ಲಬೇಕು ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಇರುವವರನ್ನು ಮಾತನಾಡಿಸಿ ರೀಲ್ಸ್‌ಗಳ ಮೂಲಕ ಪ್ರಚಾರ ನಡೆಸಬೇಕು. ಹಿಂದಿನ ಮೂರು ಚುನಾವಣೆಗಳ ಮತಗಳಿಕೆ ವಿವರ ಇಟ್ಟುಕೊಂಡಿರಬೇಕು. ಹಿರಿಯ ನಾಗರಿಕರಲ್ಲಿ ಹೆಚ್ಚು ಭರವಸೆ ಮೂಡಿಸಿ. ವೃತ್ತಿಪರರಿಗೆ ರಜಾದಿನಗಳಂದು ಸಭೆ ನಡೆಸಬೇಕು. ಬೂತ್ ಮಟ್ಟದ ಕಾರ್ಯಕರ್ತರು ಪ್ರತಿದಿನ ರಾತ್ರಿ ಒಂದೆಡೆ ಸೇರಿ ಜನರ ಅಭಿಪ್ರಾಯ ಕುರಿತು, ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಬೇಕು ಎಂದು ಮೋದಿ ಕಿವಿಮಾತು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರಿಗಾಗಿ ಹಲವು ಕೆಲಸಗಳನ್ನು ಮಾಡಿದ್ದೇವೆ. ಇದರಿಂದ ನಾರಿಶಕ್ತಿ ಬಲವರ್ಧನೆಯಾಗಿದೆ. ಶಿವಮೊಗ್ಗ ಮೂಲಕ ಕುವೆಂಪು ಅವರ ನಾರಿ ಸಶಕ್ತೀಕರಣ ಕುರಿತ ವಿಚಾರಧಾರೆ ನಮಗೆ ಪ್ರೇರಣೆ. ಮತಗಟ್ಟೆ ವ್ಯಾಪ್ತಿಯಲ್ಲಿ ಮಹಿಳೆಯರು ಮತದಾನ ಮಾಡುವಂತೆ ಕರೆದೊಯ್ಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಸಮನ್ವಯ ಸಭೆ ನಡೆಸಿ

ಕರ್ನಾಟಕದಲ್ಲಿ ಜೆಡಿಎಸ್ ಜತೆ ಮೈತ್ರಿ ಆಗಿರುವುದರಿಂದ ಉಭಯ ಪಕ್ಷಗಳ ಕಾರ್ಯಕರ್ತರ ಸಮನ್ವಯ ಸಭೆ ನಡೆಸಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದರು. ಆಗ ಮಾತ್ರ ಮೈತ್ರಿ ಉದ್ದೇಶ ಯಶಸ್ವಿಯಾಗುತ್ತದೆ. ಇದು ನಮ್ಮನ್ನು ಗೆಲುವಿನ ಕಡೆ ಕರೆದೊಯ್ಯಲಿದೆ ಎಂದರು.

Lok Sabha Election 2024: ಬಿಜೆಪಿ, ಪ್ರಧಾನಿ ಮೋದಿ ಅಲೆಯೇ ನನ್ನನ್ನು ಗೆಲ್ಲಿಸುತ್ತೆ: ಶ್ರೀರಾಮುಲು

ಕಾಂಗ್ರೆಸ್‌ ಗ್ಯಾರಂಟಿ ವೈಫಲ್ಯಗಳನ್ನು ತಿಳಿಸಿ: ಮೋದಿ

ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು ಎಂದು ಇದೇ ವೇಳೆ ಮೋದಿ ತಿಳಿಸಿದರು. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಿ. ಕಾಂಗ್ರೆಸ್ ಸರ್ಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುದನ್ನು ಮನದಟ್ಟು ಮಾಡಿ. ಮೋದಿ ಗ್ಯಾರಂಟಿ ನುಡಿದಂತೆ ನಡೆಯುವ ಗ್ಯಾರಂಟಿ ಎಂಬುದನ್ನು ತಿಳಿಹೇಳಬೇಕು. ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್ ಸಂಪರ್ಕ, ಮನೆಮನೆಗೆ ನಳ್ಳಿ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆಗಳನ್ನು ನಮ್ಮ ಸರಕಾರ ಕೊಟ್ಟಿದೆ. ಇದು ಮೋದಿ ಗ್ಯಾರಂಟಿ. ಇದನ್ನು ಜನರಿಗೆ ತಿಳಿಸಿ ಎಂದು ವಿನಂತಿಸಿದರು.

ಕೈ ಮೇಲೆ ಕಮಲದ ಮೆಹಂದಿ ಹಾಕಿಕೊಳ್ಳಿ

ಕಮಲದ ಚಿಹ್ನೆಯನ್ನು ಕೈಯ ಮೇಲೆ ಮೆಹಂದಿ ಮೂಲಕ ಹಾಕಿಕೊಳ್ಳಿ. ಇದರ ಮೂಲಕ ಜನಜಾಗೃತಿ ಮೂಡಿಸಿ ಎಂದು ಮೋದಿ ಸಲಹೆ ನೀಡಿದರು. ಅಲ್ಲದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಕಮಲದ ಚಿಹ್ನೆ ಮೂಲಕ ರಂಗೋಲಿ ಮಾಡುವ ಕುರಿತ ಸಲಹೆಯೂ ಒಳ್ಳೆಯದೇ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ 

ಮೋದಿ ಸೂಚನೆ

- ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಚಾರ ಮಾಡಿ
- ರೀಲ್ಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಕೈಗೊಳ್ಳಿ
- ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ
- ಪ್ರತಿದಿನ ಮನೆಮನೆಗೆ ತೆರಳಿ ಮತದಾರರನ್ನು ಸೆಳೆಯಿರಿ
- ನೀರು, ಕಾಫಿ ಕುಡಿದು ಮತದಾರನ್ನು ಆಪ್ತವಾಗಿ ಆಕರ್ಷಿಸಿ
- ಯಾವುದೇ ಕಾರಣಕ್ಕೂ ಒಂದೇ ಮತ ಎಂದು ನಿರ್ಲಕ್ಷಿಸಬೇಡಿ

Follow Us:
Download App:
  • android
  • ios