Asianet Suvarna News Asianet Suvarna News

10 ಕೋಟಿ ನಕಲಿ ಹೆಸರಲ್ಲಿ ಸರ್ಕಾರಿ ಯೋಜನೆಗಳಲ್ಲಿ ಕಾಂಗ್ರೆಸ್‌ ಲೂಟಿ ಮಾಡಿದೆ: ಪ್ರಧಾನಿ ಮೋದಿ

ಕರ್ನಾಟಕದಲ್ಲೂ ಕಾಂಗ್ರೆಸ್‌ 85 ರಷ್ಟು ಭ್ರಷ್ಟಾಚಾರ ಮಾಡಲು ಹೊರಟಿದೆ. ಕಾಂಗ್ರೆಸ್‌ಗೆ ದೇಶದಲ್ಲಿ ವಾರಂಟಿಯೇ ಇಲ್ಲ, ಇನ್ನು ಗ್ಯಾರಂಟಿ ಹೇಗೆ ಕೊಡ್ತಾರೆ ಎಂದು ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. 

pm modi speech in ankola alleges against congress corruption bjp ash
Author
First Published May 3, 2023, 3:27 PM IST

ಅಂಕೋಲಾ ( ಮೇ 3, 2023): ಮುಲ್ಕಿಯ ನಂತರ ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಪ್ರಧಾನಿ ಮೋದಿ ಮೋಡಿ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್‌ ಭ್ರಷ್ಟಾಚಾರದ ವಿರುದ್ದ ಪ್ರಧಾನಿ ಮೋದಿ ಆರೋಪ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ತಮ್ಮ ನಾಯಕನ ನಿವೃತ್ತಿ ಹೆಸರಲ್ಲಿ ಮತ ಕೇಳುತ್ತಿದೆ ಎಂದೂ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಉತ್ತರ ಕನ್ನಡದ ಖ್ಯಾತ ಯಕ್ಷಗಾನದ ಕಿರೀಟವನ್ನು ಹಾಕಿ ಸನ್ಮಾನ ಮಾಡಿದ್ರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದೆ. ನಂ. 1 ರಾಜ್ಯವನ್ನಾಗಿಸಲು ಬಿಜೆಪಿಗೆ ಈ ಬಾರಿಯೂ ಮತ ನೀಡಿ. ಕಾಂಗ್ರೆಸ್‌ ಸರ್ಕಾರದ ನಷ್ಟ ತುಂಬಿಸುವ ಕೆಲಸವನ್ನು (ಬಸವರಾಜ ಬೊಮ್ಮಾಯಿ) ಅವರ ಬಿಜೆಪಿ ಸರ್ಕಾರ ಮಾಡ್ತಿದೆ. ಆದರೆ, ನಂ. 1 ರಾಜ್ಯವನ್ನಾಗಿಸಲು ಬಿಜೆಪಿಗೆ ಈ ಬಾರಿಯೂ ಮತ ನೀಡಿ ಎಂದು ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದ್ದಾರೆ.

ಇದನ್ನು ಓದಿ: 'ಜೈ ಭಜರಂಗ ಬಲಿ' ಘೋಷಣೆ ಮೂಲಕ ಕಾಂಗ್ರೆಸ್‌ ಪ್ರಣಾಳಿಕೆಗೆ ಪ್ರಧಾನಿ ಮೋದಿ ಟಾಂಗ್

ಇನ್ನು, ನಾವು ಬಡವರಿಗೆ ಉಚಿತ ಪಡಿತರ ನೀಡುತ್ತಿದ್ದೇವೆ. ಬಿಜೆಪಿ ಬಡವರ ಪರ ಕೆಲಸ ಮಾಡುತ್ತಿದೆ. 3 ವರ್ಷದ ಹಿಂದೆ ಕೊರೊನಾ ಮಹಾಮಾರಿ ವಕ್ಕರಿಸಿತ್ತು. ನಾವು ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಿದ್ದೇವೆ. ನೀವು ಲಸಿಕೆ ತಗೊಂಡಿದ್ದೀರೋ ಇಲ್ವೋ.. ಯಾರಾದ್ರೂ ದುಡ್ಡು ಕೇಳಿದ್ರಾ ಎಂದೂ ಮೋದಿ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಪ್ರಶ್ನೆ ಮಾಡಿದ್ದಾರೆ.  

ನಮ್ಮ ನಾಯಕ ನಿವೃತ್ತಿಯಾಗುತ್ತಿದ್ದಾರೆಂದು ನಮಗೆ ಮತ ಕೊಡಿ ಎಂದು ಕಾಂಗ್ರೆಸ್‌ ಮತ ಕೇಳುತ್ತಿದೆ. ಈ ರೀತಿ ಮತ ಕೇಳುವುದು ಸರಿಯೇ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಬೈಗುಳದ ರಾಜಕೀಯ ಶುರು ಮಾಡಿದ್ದು, ಬೈಗುಳದ ರಾಜಕೀಯ ಮಾಡುವವರಿಗೆ ಮತ ಹಾಕುತ್ತೀರಾ.. ಕಾಂಗ್ರೆಸ್‌ ಅನ್ನು ಹೊರಕ್ಕೆ ಹಾಕಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಬಿಜೆಪಿಗೆ ಭಾರತವೇ ಮೊದಲು, ಆದರೆ ಕಾಂಗ್ರೆಸ್‌ಗೆ ಕುಟುಂಬ, ಭ್ರಷ್ಟಾಚಾರವೇ ಮೊದಲು ಎಂದೂ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನದು 85% ಕಮಿಷನ್‌ ಸರ್ಕಾರ; ಇದನ್ನು ಆ ಪಕ್ಷದ ಪ್ರಧಾನಿಯೇ ಒಪ್ಪಿಕೊಂಡಿದ್ರು: 40% ಆರೋಪಕ್ಕೆ ಮೋದಿ ತಿರುಗೇಟು

1 ರೂ. ಯಲ್ಲಿ ಜನರಿಗೆ ತಲುಪುವುದು 15 ಪೈಸೆ ಮಾತ್ರ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಉಳಿದ 85 ಪೈಸೆ ಹಣ ಎಲ್ಲಿಗೆ ಹೋಗುತ್ತಿತ್ತು, ಅವರು ಲೂಟಿ ಮಾಡ್ತಿದ್ರು ಎಂದಿದ್ದಾರೆ ಮೋದಿ. ಕರ್ನಾಟಕದಲ್ಲೂ ಕಾಂಗ್ರೆಸ್‌ 85 ರಷ್ಟು ಭ್ರಷ್ಟಾಚಾರ ಮಾಡಲು ಹೊರಟಿದೆ. ಕಾಂಗ್ರೆಸ್‌ಗೆ ದೇಶದಲ್ಲಿ ವಾರಂಟಿಯೇ ಇಲ್ಲ, ಇನ್ನು ಗ್ಯಾರಂಟಿ ಹೇಗೆ ಕೊಡ್ತಾರೆ ಎಂದೂ ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಇದ್ದಾಗ ಸರ್ಕಾರಿ ಯೋಜನೆಗಳಲ್ಲಿ ಹಣ ಲೂಟಿ ಹೊಡೆಯುತ್ತಿತ್ತು. ಗ್ಯಾಸ್‌ ಸಬ್ಸಿಡಿ, ಪಡಿತರ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ನಕಲಿ ರೇಷನ್‌ ಕಾರ್ಡ್‌ ನೀಡುವ ಮೂಲಕ 10 ಕೋಟಿ ನಕಲಿ ಜನರ ಹೆಸರಲ್ಲಿ ಲೂಟಿ ಹೊಡೆದಿದೆ. ಈ ಪೈಕಿ 4 ಕೋಟಿ ನಕಲಿ ರೇಷನ್‌ ಕಾರ್ಡ್‌ ನೀಡಿ ಪಡಿತರ ಲೂಟಿ ಹೊಡೆಯುತ್ತಿತ್ತು. ಮಹಿಳಾ ಕಲ್ಯಾಣ ಯೋಜನೆಯಲ್ಲಿ ಸಹ ದುಡ್ಡು ನುಂಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಇದನ್ನೂ ಓದಿ; ಮೋದಿ ಸಮಾವೇಶಕ್ಕೆ ಹೆಚ್ಚಿನ ಜನ ಕರೆತರಲು ಹಣ ಹಂಚಿ ಆಮಿಷ ಆರೋಪ: ಶಾಸಕ ಪಿ.ರಾಜೀವ್‌ ವಿರುದ್ಧ ಕೇಸು

ಇನ್ನು, ಮೀನುಗಾರರ ಬಗ್ಗೆ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು, ದೆಹಲಿಯಲ್ಲಿ ಕುಳಿತಿದ್ದ ಸರ್ಕಾರಕ್ಕೆ ಅವರ ಕಷ್ಟ ಕಾಣಿಸುತ್ತಿರಲಿಲ್ಲ. ಆದರೆ ಮೋದಿ ಕಣ್ಣಿಗೆ ಕಾಣಿಸಿದೆ. ಮೀನುಗಾರರಿಗೂ ಕಿಸಾನ್‌ ಕಾರ್ಡ್‌ ನೀಡುತ್ತಿದ್ದು, ಮೀನುಗಾರರ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ ಮಾಡಿದೆ ಎಂದೂ ಪ್ರಧಾನಿ ಹೇಳಿದ್ದಾರೆ. ಹಾಗೆ, ಬಡವರು, ಮಹಿಳೆಯರು ಎಲ್ಲರ ಕಲ್ಯಾಣಕ್ಕೆ ಕೆಲಸ ಮಾಡಿದೆ, ಬಿಜೆಪಿ ಸರ್ಕಾರದಿಂದ 5 ಲಕ್ಷ ಜನರಿಗೆ ಜನಧನ್‌ ಖಾತೆ ನೀಡಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ 4 ಸಾವಿರ ಕೋಟಿ ರೂ. ಹಣ ಜನರ ಬ್ಯಾಂಕ್‌ ಅಕೌಂಟ್‌ಗೆ ನೀಡಿದ್ದೇವೆ, ಹಾಗೆ 85 ಪರ್ಸೆಂಟ್‌ ಭ್ರಷ್ಟಾಚಾರ ಅಲ್ಲ ಎಂದೂ ಮೋದಿ ಹೇಳಿದ್ದಾರೆ.

ಅಲ್ಲದೆ,  ಕಾಂಗ್ರೆಸ್‌ ಆದಿವಾಸಿಗಳನ್ನು ಕೇವಲ ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿತ್ತು, ಆದರೆ ಬಿಜೆಪಿ ಸರ್ಕಾರ ಆದಿವಾಸಿಗಳ ಅಭಿವೃದ್ಧಿ ಮಾಡುತ್ತಿದೆ. ವಾಜಪೇಯಿ ಸರ್ಕಾರ ಮೊದಲ ಬಾರಿಗೆ ಆದಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯ ರಚಿಸಿದೆ. ಬಜೆಟ್‌ನಲ್ಲಿ ಆದಿವಾಸಿಗಳಿಗೆ ಕಾಂಗ್ರೆಸ್‌ಗಿಂತ 5 ಪಟ್ಟು ಹೆಚ್ಚು ಅನುದಾನ ನೀಡಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್‌ ಕೀ ಬಾತ್‌’ ಮೂಲಕ ಜನ ಸಂಪರ್ಕ: ಮೋದಿ

ಇನ್ನು, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ ಅವರನ್ನೂ ಸೋಲಿಸಲು ಯತ್ನಿಸಿತ್ತು. ಈ ಹಿನ್ನೆಲೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಜನ ಸಂಕಲ್ಪ ಮಾಡಿದ್ದಾರೆ. ನಾವು, ಯಕ್ಷಗಾನ, ಶಿರಸಿ ಅಡಿಕೆಗೆ ಜಾಗತಿಕ ಮನ್ನಣೆ ನೀಡಿದ್ದೇವೆ. ನನಗೆ ಯಾವುದೇ ರಿಮೋಟ್‌ ಕಂಟ್ರೋಲ್‌ ಇಲ್ಲ, ನೀವೇ ನನಗೆ ರಿಮೋಟ್‌ ಕಂಟ್ರೋಲ್‌ ಎಂದೂ ಜನರಿಗೆ ಪ್ರಧಾನಿ ಮೋದಿ ಅಂಕೋಲಾದಲ್ಲಿ ಹೇಳಿದ್ದಾರೆ. 

Follow Us:
Download App:
  • android
  • ios