ಭಾರತ-ಪಾಕಿಸ್ತಾನದ ಮಧ್ಯೆ ಏರ್ಪಟ್ಟ ಕದನ ವಿರಾಮ ಕುರಿತು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕು ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಕಲಬುರಗಿ (ಮೇ.14): ಭಾರತ-ಪಾಕಿಸ್ತಾನದ ಮಧ್ಯೆ ಏರ್ಪಟ್ಟ ಕದನ ವಿರಾಮ ಕುರಿತು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕು ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕವೇ ಕದನ ವಿರಾಮ ಘೋಷಣೆ ಮಾಡಿಸಿದೆಯೋ? ಅಥವಾ ಖುದ್ದು ಮೋದಿಯವರೇ ಕದನ ವಿರಾಮದ ನಿರ್ಧಾರ ಕೈಗೊಂಡಿದ್ದಾರೋ? ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದರು. 

ಈ ಕಾರ್ಯಾಚರಣೆಯಲ್ಲಿ ಮೋದಿಯವರಿಗೆ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲ ನೀಡಿದೆ. ಇಷ್ಟಾದರೂ ಮೋದಿಯವರು ಇತರ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ. ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ್ ಬೆದರಿಕೆಗೆ ಹೆದರಿ ನೀವು ಈ ನಿರ್ಣಯ ಕೈಗೊಂಡಿದ್ದೀರಾ?. ಅತ್ತ ಪಾಕಿಸ್ತಾನ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದರ ಹಿಂದಿನ ರಹಸ್ಯ ಏನು? ಎಂದು ಸಚಿವರು ಲೇವಡಿ ಮಾಡಿದರು. 

ಸೋಮವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೋದಿಯವರು ಯುದ್ದ ವಿರಾಮ ಘೋಷಣೆಯ ಹಿಂದಿನ ಸತ್ಯ ಕುರಿತು ಹೇಳಬೇಕಿತ್ತು. 56 ಇಂಚು ವಿಸ್ತಾರದ ಎದೆಯುಳ್ಳ ಪ್ರಧಾನಿ ಕೇವಲ ಕೆಂಪುಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಾರೆ ಎಂದು ಟಾಂಗ್ ನೀಡಿದರು. ಪಾಕಿಸ್ತಾನವನ್ನು ಈವರೆಗೆ ನಾಲ್ಕು ಬಾರಿ ಸೋಲಿಸಿದ್ದಾಗಿದೆ. ಆದರೆ, ಈ ಬಾರಿ ವಿದೇಶಾಂಗ ನೀತಿಯಲ್ಲಿಯೇ ಭಾರತ ಸೋತಿದೆ. ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ? ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

'ಸೋಲಿನ' ಅಂಬೇಡ್ಕರ್ ಪತ್ರ ಬಿಡುಗಡೆ: ಬಿಜೆಪಿ ವಿರುದ್ಧ ಪ್ರಿಯಾಂಕ್ ಕಿಡಿ

ಮೋದಿ ಸಭೆ ಕರೆಯಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ವಿಚಾರವಾಗಿ ಏನೆಲ್ಲಾ ಬೆಳವಣಿಗೆ ನಡೆಯಿತು ಎಂಬುದನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ತಾವೇ ಈ ಕದನ ವಿರಾಮ ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಇವರು ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರ ಆಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರವಾಗಿ ಚರ್ಚಿಸಲು ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು. ಅಲ್ಲಿ ನಾವು ಎಲ್ಲವನ್ನೂ ಮಾತನಾಡುತ್ತೇವೆ. ಇಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಪ್ರಧಾನಿಯವರು ಆದಷ್ಟು ಬೇಗ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.