ರಾಜ್ಯದಲ್ಲಿ ಪ್ರಧಾನಿ ಮೋದಿ 20 ರ‍್ಯಾಲಿ: ನಮೋ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ಪ್ಲಾನ್
ರಾಜ್ಯದಲ್ಲಿ ಪ್ರಧಾನಿ ಮೋದಿ 20 ರ‍್ಯಾಲಿ ನಡೆಸಲಿದ್ದಾರೆ ಎನ್ನಲಾಗಿದ್ದು, ನಮೋ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ಪ್ಲಾನ್ ಮಾಡ್ತಿದೆ. 6 ವಲಯದಲ್ಲಿ ತಲಾ ಕನಿಷ್ಠ 3 ಸಮಾವೇಶಗಳ ನಿರೀಕ್ಷೆಯಿದ್ದು, ಮೇ 6ರಿಂದ 8ರವರೆಗೆ ರಾಜ್ಯದಲ್ಲೇ ಠಿಕಾಣಿ ಮಾಡುವ ಸಾಧ್ಯತೆ ಇದೆ.
ನವದೆಹಲಿ (ಏಪ್ರಿಲ್ 3, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಜಯ ಗಳಿಸಿ ಅಧಿಕಾರಕ್ಕೇರುವ ಹಂಬಲದಲ್ಲಿರುವ ಭಾರತೀಯ ಜನತಾ ಪಕ್ಷ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸುವಂಥ ಯೋಜನೆಯನ್ನು ಪಕ್ಷದ ಚುನಾವಣಾ ರಣತಂತ್ರ ಹೆಣೆಯುತ್ತಿರುವ ತಂಡ ರೂಪಿಸುತ್ತಿದೆ ಎನ್ನಲಾಗಿದೆ.
ಕೆಲವು ಸಮೀಕ್ಷೆಗಳ ಪ್ರಕಾರ ಈ ಬಾರಿ ಕಾಂಗ್ರೆಸ್ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಥವಾ ಬಹುಮತದ ಸಮೀಪಕ್ಕೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ತಾನು ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲು ಮುಂದಾಗಿರುವ ಬಿಜೆಪಿ, ಇದಕ್ಕೆ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮತ ಗಳಿಕೆಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ಇದನ್ನು ಓದಿ: ಪ್ರಧಾನಿ ಮೋದಿ ಮತ್ತೆ ಜಗತ್ತಿನಲ್ಲೇ ನಂ. 1 ಜನಪ್ರಿಯ ನಾಯಕ
6 ವಲಯಗಳಿಗೂ ಆದ್ಯತೆ:
ರಾಜ್ಯದಲ್ಲಿನ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪಗಳ ಸರಮಾಲೆಯನ್ನೇ ಮಾಡಿ ಜನರಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ಮೋದಿ ಮ್ಯಾಜಿಕ್ ಬಳಸಿಕೊಳ್ಳುವುದೇ ಪಕ್ಷದ ಮುಂದಿರುವ ಪ್ರಮುಖ ಅಸ್ತ್ರ ಎಂದು ಮನಗಂಡಿರುವ ಬಿಜೆಪಿ ನಾಯಕರು, ರಾಜ್ಯದ 6 ವಿಭಾಗಗಳ ಪೈಕಿ ಪ್ರತಿಯೊಂದರಲ್ಲೂ ಮೋದಿ ನೇತೃತ್ವದ ಕನಿಷ್ಠ 3 ರ‍್ಯಾಲಿಗಳನ್ನು ಆಯೋಜಿಸಲು ಯೋಜಿಸಿದ್ದಾರೆ. ಜೊತೆಗೆ ಇಂಥ ರ‍್ಯಾಲಿ ಆಯೋಜನೆ ವೇಳೆ 40 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ರ‍್ಯಾಲಿ ಆಯೋಜನೆಗೆ ಉದ್ದೇಶಿಸಲಾಗಿದೆ ಎನ್ನಲಾಗಿದೆ. ಕಳೆದ ಬಾರಿ ಪಕ್ಷ ಇಲ್ಲಿ 15 ಸ್ಥಾನಗಳನ್ನು ಗೆದ್ದಿತ್ತು.
3 ದಿನ ವಾಸ್ತವ್ಯ:
ಇನ್ನು ಬಹಿರಂಗ ಪ್ರಚಾರಕ್ಕೆ ಅಂತ್ಯಕ್ಕೆ ಮೊದಲಿನ ಮೂರು ದಿನಗಳನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೇ ಕಳೆಯಬಹುದು. ಮೇ 6-8ರಂದು ಮೋದಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿರುವ ವಲಯ ಅಥವಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka election 2023: ಕಷ್ಟದ 115 ಕ್ಷೇತ್ರಗಳ ಗೆಲ್ಲಲು ಬಿಜೆಪಿ 50 ಸ್ಪೆಷಲಿಸ್ಟ್‌ಗಳ’ ಟೀಂ ರೆಡಿ!
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜನರೊಂದಿಗೆ ನೇರವಾಗಿ ಬೆಸೆಯುವಂಥ ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಹುಬ್ಬಳ್ಳಿ ಮತ್ತು ಮಂಡ್ಯದ ರ‍್ಯಾಲಿಗಳಲ್ಲಿ ಇಂಥದ್ದೇ ತಂತ್ರವನ್ನು ಅನುಸರಿಸಲಾಗಿತ್ತು. ಇಂಥ ಪ್ರಚಾರದ ವೇಳೆ ಸ್ಥಳೀಯ ವಿಷಯಗಳನ್ನು ಪ್ರಸ್ತಾಪಿಸುವ ಮತ್ತು ಸ್ಥಳೀಯ ನಾಯಕರನ್ನು ಪ್ರಮುಖವಾಗಿ ಬಿಂಬಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಯೋಜನೆ
- ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಉಳಿಸಿಕೊಳ್ಳಲು ಸರ್ವ ಕಸರತ್ತು
- ಕಾಂಗ್ರೆಸ್‌ನ ಭ್ರಷ್ಟಾಚಾರ ಆರೋಪ, ಆಡಳಿತ ವಿರೋಧಿ ಅಲೆ ಎದುರಿಸಲು ಮೋದಿ ಅಸ್ತ್ರ
- ರಾಜ್ಯದ 6 ವಿಭಾಗ ಪೈಕಿ ಪ್ರತಿಯೊಂದರಲ್ಲೂ ಮೋದಿ ನೇತೃತ್ವದ ತಲಾ 3 ರ‍್ಯಾಲಿಗೆ ಪ್ಲಾನ್
- ಈ ಪೈಕಿ 40 ಕ್ಷೇತ್ರ ಇರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸಮಾವೇಶಕ್ಕೆ ಯೋಜನೆ
- ಮೇ 6ರಿಂದ ಪ್ರಚಾರ ಅಂತ್ಯವಾಗುವ ಮೇ 8ರವರೆಗೆ ರಾಜ್ಯದಲ್ಲೇ ಇದ್ದು ರ‍್ಯಾಲಿ ಸಾಧ್ಯತೆ
- ಕಾಂಗ್ರೆಸ್, ಜೆಡಿಎಸ್ ಪ್ರಬಲವಾಗಿರುವ ವಲಯ, ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಆದ್ಯತೆ ನಿರೀಕ್ಷೆ
ಇದನ್ನೂ ಓದಿ: Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕವಾಗಿದೆ.