ಪ್ರಧಾನಿ ಮೋದಿಗೆ ಕೊಟ್ಟ ಚೀಟಿ ರಹಸ್ಯ ಬಯಲು; ಮೇಕೆದಾಟು, ಮಹದಾಯಿಗೆ ಬೇಡಿಕೆಯಿಟ್ಟ ಶಾಸಕ ಜಿ.ಟಿ.ದೇವೇಗೌಡ

ಮೈಸೂರಿನ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕೊಟ್ಟ ಪತ್ರದಲ್ಲಿ ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮತಿ ಕೇಳಿದ್ದಾರೆ. 

PM Modi letter secret revealed MLA GT Devegowda demanded Mekedatu and Mahadayi projects sat

ಮೈಸೂರು (ಏ.14): ಮೈಸೂರು ನಗರದಲ್ಲಿ ಭಾನುವಾರ ಸಂಜೆ ನಡೆದ ಜೆಡಿಎಸ್-ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಟ್ಟ ಚೀಟಿಯಲ್ಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಅದು, ರಹಸ್ಯ ಚೀಟಿಯಲ್ಲ, ಬೇಡಿಕೆಯ ಪತ್ರವಾಗಿದೆ ಎಂದು ತಿಳಿದುಬಂದಿದೆ.

ಹೌದು, ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಗಣ್ಯಾತಿ ಗಣ್ಯರ ವೇದಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಮೋದಿ ಅವರಿಗೆ ಸ್ವತಃ ಮಣಿಗಳ ಹಾರವನ್ನು ಹಾಕಿ ಸ್ವಾಗತ ಕೋರಿದರು. ಇದಾದ ನಂತರ ವೇದಿಕೆಯಲ್ಲಿ ಕೊನೆ ಭಾಗದಲ್ಲಿ ಕುಳಿತಿದ್ದ ಜಿ.ಟಿ. ದೇವೇಗೌಡ ಅವರು ಪ್ರಧಾನಿ ಅವರಿಗೆ ಚೀಟಿಯೊಂದನ್ನು ಕೊಡಲು ಇಟ್ಟುಕೊಂಡಿದ್ದರು. ಮೋದಿಯನ್ನು ಸ್ವಾಗತಿಸುವ ವೇಳೆ ಚೀಟಿ ಕೊಡಲಾಗದ ಹಿನ್ನೆಲೆಯಲ್ಲಿ ಅವರು ಭಾಷಣ ಮುಗಿಸಿ ಹೋಗುವ ವೇಳೆ ಕೊಡುವುದಕ್ಕಾಗಿ ಕಾಯುತ್ತಿದ್ದರು. ಹೀಗಾಗಿ, ವೇದಿಕೆಯಿಂದ ಇಳಿಯುವ ಜಾಗದಲ್ಲಿಯೇ ಕೊನೆಯಲ್ಲಿದ್ದ ಜಿಟಿಡಿ ಅವರು ಕೊನೆಗೂ ತಾವಂದುಕೊಂಡಂತೆ ಮೋದಿಗೆ ಚೀಟಿಯನ್ನು ಕೊಟ್ಟೇಬಿಟ್ಟರು.

ಪ್ರಧಾನಿ ಮೋದಿಗೆ ಚೀಟಿ ಕೊಟ್ಟ ಶಾಸಕ ಜಿ.ಟಿ. ದೇವೇಗೌಡ; ಪತ್ರದಲ್ಲಿರುವ ರಹಸ್ಯವೇನು?

ಹಾಗಾದರೆ ಚೀಟಿಯಲ್ಲಿದ್ದ ರಹಸ್ಯವೇನು? 
ಜೆಡಿಸ್ ನಾಯಕರೂ ಆಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನು ಮೋದಿ ಕೈಗೆ ರಹಸ್ಯ ಚೀಟಿಯನ್ನು ನೀಡದೇ, ಭರವಸೆ ಹಾಗೂ ಬೇಡಿಕೆ ಪತ್ರವನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಜೆಡಿಎಸ್ ಬಹಳ ಗಂಭೀರವಾಗಿ ಚುನಾವಣೆ ನಡೆಸುತ್ತಿದೆ‌. ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲಿಸುವುದರ ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿಸಲು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ‌ 28 ಕ್ಷೇತ್ರ ಗೆಲ್ಲಿಸಲು ಜೆಡಿಎಸ್ ಪಕ್ಷ ಎಲ್ಲಾ ರೀತಿಯ ಕಾರ್ಯಕ್ರಮ ರೂಪಿಸಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮ ಮೂರು ಕ್ಷೇತ್ರಗಳ ಜೊತೆಗೆ ನಿಮ್ಮ ಕ್ಷೇತ್ರಗಳನ್ನೂ ಗೆಲ್ಲಿಸಿಕೊಡುತ್ತೇವೆ ಎಂಬ ಭರವಸೆಯನ್ನು ಪತ್ರದಲ್ಲಿ ನೀಡಿದ್ದಾರಂತೆ.

ಜೊತೆಗೆ, ರಾಜ್ಯದಿಂದ 28 ಸಂಸದರನ್ನು ಕಳಿಸಿಕೊಡುವ ನಮಗೆ ಹಾಗೂ ನಮ್ಮ ರಾಜ್ಯಕ್ಕೆ ನೀವು ಮಹಾದಾಯಿ ಹಾಗೂ ಮೇಕೆದಾಟು ಯೋಜನೆಗಳಿಗೆ ಕಾನೂನು ಪರಿಹಾರ ಮಾಡಿಕೊಡಿ ಎಂದು ಚೀಟಿಯಲ್ಲಿ ಬರೆದು ಮನವಿ ಮಾಡಿದ್ದಾರಂತೆ. ಈ ಮೂಲಕ ರಾಜ್ಯ ದಕ್ಷಿಣ ಭಾಗಕ್ಕೆ ಕಾವೇರಿ ನೀರನ್ನು ಉಳಿಸುವಲ್ಲಿ ಹಾಗೂ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಕ್ಕೆ ನೆರವಾಗಬೇಕು ಎಂದು ದೊಡ್ಡ ಬೇಡಿಕೆಯೊಂದನ್ನು ಅವರ ಮುಂದಿಟ್ಟಿದ್ದಾರೆ.

ಸರ್ಕಾರದಿಂದಾಗದ ಕೆಲಸ ಚೀಟಿಯಿಂದಾಗುತ್ತದೆಯೇ?
ಇನ್ನು ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಪರಿಸರ ಇಲಾಖೆಯಿಂದ ಮಾತ್ರ ಅನುಮತಿ ಸಿಕ್ಕಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿ ಹಾಗೂ ಅಧಿಕಾರಕ್ಕೆ ಬಂದು ವರ್ಷವನ್ನು ತಲುಪುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೂ ಇದು ಸವಾಲಾಗಿ ಪರಿಣಮಿಸಿದೆ. ಮೇಕೆದಾಟು ಯೋಜನೆ ಜಾರಿ ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಮೈತ್ರಿ ಕೂಟವಾದ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿಯೇ ಮೇಕೆದಾಟು ಯೋಜನೆಗೆ ಅನುಮತಿ ಕೊಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

ಕರ್ನಾಟಕ ಲೂಟಿ ಆಗೋದನ್ನು ತಪ್ಪಿಸಲೆಂದೇ ಮೊದಿಯೊಂದಿಗೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ: ಹೆಚ್.ಡಿ.ದೇವೇಗೌಡ

ಈಗ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಅನುಮತಿ ಕೊಡುತ್ತಿಲ್ಲವೆಂದು ಹೇಳುತ್ತಿದೆ. ಇಷ್ಟೆಲ್ಲಾ ಕಸರತ್ತು ಮಾಡಿದರೂ ಎರಡು ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ. ಆದರೆ, ಈಗ ಶಾಸಕ ಜಿ.ಟಿ. ದೇವೇಗೌಡರು ಕೊಟ್ಟ ಒಂದು ಚೀಟಿಯಿಂದಾಗಿ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಅನುಮತಿ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios