ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಎಲ್ಲರೂ ಬೆಂಗಳೂರಿನಲ್ಲೇ ಉದ್ದಿಮೆ ಆರಂಭಿಸುವ ಬದಲು ಆಯಾ ಜಿಲ್ಲೆಯವರು ಆಯಾ ಜಿಲ್ಲೆಗಳಲ್ಲೇ ಕೈಗಾರಿಕೆ ಪ್ರಾರಂಭಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮೇ.29): ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಎಲ್ಲರೂ ಬೆಂಗಳೂರಿನಲ್ಲೇ ಉದ್ದಿಮೆ ಆರಂಭಿಸುವ ಬದಲು ಆಯಾ ಜಿಲ್ಲೆಯವರು ಆಯಾ ಜಿಲ್ಲೆಗಳಲ್ಲೇ ಕೈಗಾರಿಕೆ ಪ್ರಾರಂಭಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿ಼ಶಿಷ್ಟ ಪಂಗಡಗಳ ಉದ್ದಿಮೆದಾರರ ಜತೆ ಸಭೆ ನಡೆಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆರ್ಥಿಕ ಶಕ್ತಿ ತುಂಬುವುದು ನಮ್ಮ ಸರ್ಕಾರದ ಉದ್ದೇಶ. ಅದಕ್ಕೆ ಬೇಕಾದ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಆದರೆ ಎಲ್ಲರೂ ಬೆಂಗಳೂರಿನಲ್ಲಿಯೇ ಉದ್ದಿಮೆ ಪ್ರಾರಂಭಿಸುವ ಬದಲಾಗಿ ಆಯಾ ಜಿಲ್ಲೆಯವರು ಆಯಾ ಜಿಲ್ಲೆಗಳಲ್ಲಿಯೇ ಕೈಗಾರಿಕೆ ಪ್ರಾರಂಭಿಸಲು ಮುಂದಾಗಬೇಕು ಎಂದು ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಕೈಗಾರಿಕೆಗಳಿಗೆ ಈವರೆಗೂ 192 ಎಕರೆ ಮಂಜೂರು ಆಗಿದ್ದು, ಇನ್ನೂ 280 ಎಕರೆ ಪ್ರದೇಶದ ಅವಶ್ಯಕತೆ ಇರುವುದಾಗಿ ಮನವಿ ಸಲ್ಲಿಸಿದ್ದೀರಿ. ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಎಸ್ಸಿ/ಎಸ್ಟಿ ಅವರಿಗೆ ಮೀಸಲಿಟ್ಟಿರುವ ಕೈಗಾರಿಕಾ ಜಾಗ ಬೇರೆಯವರಿಗೆ ನೀಡಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ನಿರ್ದೇಶಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ವಿವಾದಗಳಿರುವಂತಹ ಭೂಮಿಗಳನ್ನು ಹಂಚಿಕೆ ಮಾಡಲಾಗಿದೆ. ಕೆಐಎಡಿಬಿ ಇ ಖಾತಾ ಹಂಚಿಕೆಯಲ್ಲಿ ಸಮಸ್ಯೆಗಳಿವೆ ಎಂದು ಉದ್ದಿಮೆದಾರರು ಹೇಳಿದ್ದಾರೆ. ಕೂಡಲೇ ಸಮಸ್ಯೆ ಪರಿಶೀಲಿಸಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಎಲ್‌. ಹನುಮಂತಯ್ಯ ಸೇರಿ ಹಲವರು ಭಾಗವಹಿಸಿದ್ದರು.